ಸರ್ಕಾರಿ ಗೌರವದೊಂದಿಗೆ ಯೋಧನ ಅಂತ್ಯಸಂಸ್ಕಾರ

| Published : Sep 12 2025, 12:06 AM IST

ಸಾರಾಂಶ

ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್‌ ಅವಘಡದಿಂದ ಮಂಗಳವಾರ ಪಂಜಾಬ್‌ನಲ್ಲಿ ಮೃತಪಟ್ಟಿದ್ದ ತಾಲೂಕಿನ ಹಿರೇಕೊಪ್ಪದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಗುರುವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಗದಗ: ಭಾರತೀಯ ಸೇನೆಯಲ್ಲಿ ಕರ್ತವ್ಯದಲ್ಲಿದ್ದಾಗಲೇ ವಿದ್ಯುತ್‌ ಅವಘಡದಿಂದ ಮಂಗಳವಾರ ಪಂಜಾಬ್‌ನಲ್ಲಿ ಮೃತಪಟ್ಟಿದ್ದ ತಾಲೂಕಿನ ಹಿರೇಕೊಪ್ಪದ ಯೋಧ ಮಂಜುನಾಥ ಮಲ್ಲಪ್ಪ ಗಿಡ್ಡಮಲ್ಲಣ್ಣವರ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ಗುರುವಾರ ಸ್ವಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.

ಪಂಜಾಬ ರಾಜ್ಯದ ಜಲಂಧರನಲ್ಲಿ ಇರುವ ಎಎಸ್ಸಿ ಸೆಂಟರ್‌ನಲ್ಲಿ ಯೋಧನಾಗಿ 13 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ಸೇನೆಯ ವಸತಿ ಗೃಹದಲ್ಲಿ ಕುಟುಂಬ ಸಹಿತ ವಾಸವಾಗಿದ್ದ ಮಂಜುನಾಥ ಕರ್ತವ್ಯದಲ್ಲಿ ಇದ್ದ ಸಂದರ್ಭದಲ್ಲಿ ಶುಕ್ರವಾರ ವಿದ್ಯುತ್ ಅವಘಡ ಸಂಭವಿಸಿತ್ತು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಮಂಗಳವಾರ ಬೆಳಗ್ಗೆ ನಿಧನ ಹೊಂದಿದ್ದರು. ಗುರುವಾರ ಸ್ವಗ್ರಾಮಕ್ಕೆ ಪಾರ್ಥಿವ ಶರೀರ ತರಲಾಯಿತು. ಪಾರ್ಥಿವ ಶರೀರ ಕಂಡು ಗ್ರಾಮಸ್ಥರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತ ಯೋಧನಿಗೆ ಪತ್ನಿ, ಐದು ವರ್ಷದ ಪುತ್ರ, ತಂದೆ, ತಾಯಿ, ಸಹೋದರ ಸೇರಿ ಅಪಾರ ಬಂಧು ಬಳಗ ಇದ್ದಾರೆ. ಅಂತಿಮ ದರ್ಶನಕ್ಕೆ ಗ್ರಾಮಕ್ಕೆ ಗ್ರಾಮವೇ ನೆರೆದಿತ್ತು.

ನರಗುಂದ ಶಾಸಕ ಸಿ.ಸಿ. ಪಾಟೀಲ, ಸಂಸದ ಪಿ.ಸಿ. ಗದ್ದಿಗೌಡರ, ಬಿ.ಆರ್. ಯಾವಗಲ್ಲ, ಉಮೇಶಗೌಡ ಪಾಟೀಲ, ಜಿಲ್ಲಾಧಿಕಾರಿ ಸಿ.ಎನ್, ಶ್ರೀಧರ, ಎಸ್ಪಿ ರೋಹನ ಜಗದೀಶ ಸೇರಿದಂತೆ ಹಲವು ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ನಮನ ಸಲ್ಲಿಸಿದರು.