ಪ್ರಾಣ ಪಣಕ್ಕಿಟ್ಟು ಹೋರಾಡುವ ಸೈನಿಕರು ಮಹಾದೇವರು

| Published : Jul 27 2024, 01:00 AM IST

ಸಾರಾಂಶ

ಒಳ್ಳೆಯ ಯೋಗಿಯಾಗಬಲ್ಲವನು ಯೋಧನಾಗಲು ಸಾಧ್ಯ. ಆತ ಕಷ್ಟ ಸಹಿಷ್ಣುವುಳ್ಳವನಾಗಿರಬೇಕು. ಹೆಂಡತಿ, ಮಕ್ಕಳನ್ನು ಬಿಟ್ಟು ವರ್ಷಗಟ್ಟಲೇ ಗಡಿಯಲ್ಲಿ ಹೋರಾಡಬೇಕಾಗುತ್ತದೆ. ಇದು ಸಂಸಾರಿಗೆ ಸಾಧ್ಯವಿಲ್ಲ.‌ ಯೋಗಿಯಾಗಿದ್ದಾಗ ಮಾತ್ರ ಸಾಧ್ಯ ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ಕೊಪ್ಪಳ: ತಮ್ಮ ಜ್ಞಾನ ಧಾರೆ ಎರೆದು ಜೀವ ಉಳಿಸುವ ವೈದ್ಯರು ದೇವರಾದರೆ ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ದೇಶಕ್ಕಾಗಿ ಹೋರಾಟ ಮಾಡುವ ಸೈನಿಕರು ಮಹಾದೇವರು ಎಂದು ಬಿಜೆಪಿ ಯುವ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಬಾಳಿಕಾಯಿ ಹೇಳಿದರು.

ಭಾಗ್ಯನಗರ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ಬಿಜೆಪಿ ಯುವ ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಗಿಲ್ ವಿಜಯೋತ್ಸವ ಹಾಗೂ ಮಾಜಿ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇಶದ ಧ್ವಜ ಹಾರಾಡುತ್ತಿರುವುದು ಕೇವಲ ಗಾಳಿಯಿಂದಲ್ಲ, ದೇಶದ ಸೈನಿಕರ ಉಸಿರಿನಿಂದ ಎನ್ನುವುದನ್ನು ನಾವೆಲ್ಲ ಅರ್ಥ ಮಾಡಿಕೊಳ್ಳಬೇಕು. ಒಳ್ಳೆಯ ಯೋಗಿಯಾಗಬಲ್ಲವನು ಯೋಧನಾಗಲು ಸಾಧ್ಯ. ಆತ ಕಷ್ಟ ಸಹಿಷ್ಣುವುಳ್ಳವನಾಗಿರಬೇಕು. ಹೆಂಡತಿ, ಮಕ್ಕಳನ್ನು ಬಿಟ್ಟು ವರ್ಷಗಟ್ಟಲೇ ಗಡಿಯಲ್ಲಿ ಹೋರಾಡಬೇಕಾಗುತ್ತದೆ. ಇದು ಸಂಸಾರಿಗೆ ಸಾಧ್ಯವಿಲ್ಲ.‌ ಯೋಗಿಯಾಗಿದ್ದಾಗ ಮಾತ್ರ ಸಾಧ್ಯ. ಜಗತ್ತು ನಿಬ್ಬೆರಗಾಗಿ ನೋಡಿದ ಕಾರ್ಗಿಲ್ ಯುದ್ಧವದು. ಅಂಥ ಯುದ್ಧವನ್ನು ಗೆದ್ದಿದ್ದು ಪ್ರಾಣವನ್ನೇ ಪಣಕ್ಕಿಟ್ಟು, ಯುದ್ಧ ಮಾಡಿದ ಸೈನಿಕರಿಂದ ಎನ್ನುವುದನ್ನು ನಾವು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು ಎಂದರು.

ಭಾರತದ ಇತಿಹಾಸ ಸೋಲಿನ ಇತಿಹಾಸ ಅಲ್ಲ, ಸಂಘರ್ಷದ ಇತಿಹಾಸವಾಗಿದೆ. ಇದುವರೆಗೂ ಅದನ್ನು ತಪ್ಪಾಗಿ ಅರ್ಥೈಸಲಾಗಿತ್ತು. ಇಂಥ ಭಾರತದ ಕುರಿತು ಈಗ ಹೆಮ್ಮೆ ಮೂಡುವ ಸಂಗತಿಗಳು ನಮಗೆ ಅರಿವಿಗೆ ಬರುತ್ತಿವೆ. ಪಾಕಿಸ್ಥಾನ ಬುದ್ಧಿ ಜಗತ್ತಿಗೆ ಗೊತ್ತಿರುವ ಸಂಗತಿಯೇ ಆಗಿದೆ. ಶಾಂತಿಮಂತ್ರ ಪಠಿಸುತ್ತಲೇ ಮೋಸ ಮಾಡಿದಾಗ ಭಾರತ ಆಗಲೂ ತಕ್ಕ ಉತ್ತರ ನೀಡಿತು ಎಂದರು.

ಬಿಜೆಪಿ ಕಾರ್ಯಕಾರಿಣಿ ರಾಜ್ಯ ಸದಸ್ಯ ಡಾ.‌ ಬಸವರಾಜ ಮಾತನಾಡಿ, ಪಾಕಿಸ್ಥಾನ ಮೋಸ ಮಾಡುವ ದೇಶ.‌ ಅದು ಭಾರತದ ಜತೆ ಕುತಂತ್ರ ಮಾಡಿದಾಗ ದೇಶದ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಇದ್ದಿದ್ದರಿಂದ ಗೆಲ್ಲಲ್ಲು ಸಾಧ್ಯವಾಯಿತು. ಆ ಯುದ್ಧದಲ್ಲಿ ಹೋರಾಟ ಮಾಡಿ ಹುತಾತ್ಮರಾದವರು ದೇಶದ ಮಕ್ಕಳಾಗಿದ್ದಾರೆ. ದೇಶದ ಇತಿಹಾಸದಲ್ಲಿಯೇ ಕಾರ್ಗಿಲ್ ವಿಜಯ ಸುವರ್ಣಾಕ್ಷರಗಳಿಂದ ಬರೆದಿಡುವ ಜಯವಾಗಿದೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮೌನೇಶ ದಢೇಸೂಗೂರು, ಮಾಜಿ ಸೈನಿಕ ವಾಸಪ್ಪ ಚಲ್ಲಾ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಆರ್.ಬಿ. ಪಾನಘಂಟಿ, ವಿ.ಎಂ. ಭೂಸನೂರುಮಠ, ಚಂದ್ರಶೇಖರ ಹಲಿಗೇರಿ, ಅಪ್ಪಣ್ಣ ಪದಕಿ, ಯಮನೂರಪ್ಪ ಚೌಡ್ಕಿ, ಡಾ. ಬಸವರಾಜ, ಸುನೀಲ ಹೆಸರೂರು, ವಿಜಯಲಕ್ಷ್ಮಿ, ಸರ್ವೇಶಗೌಡ, ನೀಲಕಂಠಯ್ಯ ಹಿರೇಮಠ ಇದ್ದರು.

ಮಹಾಲಕ್ಷ್ಮಿ ಕಂದಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರವಿಚಂದ್ರ ಮಾಲಿಪಾಟೀಲ್ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.