ಜನರ ಅಪೇಕ್ಷೆ ಈಡೇರಿಸಿದ ಸೈನಿಕರು: ಕುಮಟಾದಲ್ಲಿ ಜಿಲ್ಲಾ ಮಟ್ಟದ ತಿರಂಗಾ ಯಾತ್ರೆ

| Published : May 22 2025, 01:07 AM IST

ಜನರ ಅಪೇಕ್ಷೆ ಈಡೇರಿಸಿದ ಸೈನಿಕರು: ಕುಮಟಾದಲ್ಲಿ ಜಿಲ್ಲಾ ಮಟ್ಟದ ತಿರಂಗಾ ಯಾತ್ರೆ
Share this Article
  • FB
  • TW
  • Linkdin
  • Email

ಸಾರಾಂಶ

ಈ ದೇಶದ ಏಕತೆ ಅಖಂಡತೆ ಕಾಪಾಡಲು ದೇಶದ ಕೋಟಿ ಕೋಟಿ ಜನರನ್ನು ಅಪೇಕ್ಷೆಗಳನ್ನು ಈಡೇರಿಸಿದ ಭಾರತದ ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸೋಣ.

ಕುಮಟಾ: ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟಿನ ಹೋರಾಟವಾದ ಆಪರೇಷನ್ ಸಿಂದೂರ್ ಯಶಸ್ಸಿನ ಹಿನ್ನೆಲೆಯಲ್ಲಿ ಭಾರತೀಯ ಸೇನಾ ಪಡೆಗಳಿಗೆ ಗೌರವ ಸಲ್ಲಿಸಲು ಜಿಲ್ಲಾ ಮಟ್ಟದ ತಿರಂಗಾ ಯಾತ್ರೆಯನ್ನು ಬುಧವಾರ ಪಟ್ಟಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ತಿರಂಗಾ ಯಾತ್ರೆ ಉದ್ದೇಶಿಸಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಈ ದೇಶದ ಏಕತೆ ಅಖಂಡತೆ ಕಾಪಾಡಲು ದೇಶದ ಕೋಟಿ ಕೋಟಿ ಜನರನ್ನು ಅಪೇಕ್ಷೆಗಳನ್ನು ಈಡೇರಿಸಿದ ಭಾರತದ ವೀರ ಸೈನಿಕರಿಗೆ ಅಭಿನಂದನೆ ಸಲ್ಲಿಸೋಣ. ಅವರಿಂದ ಆಪರೇಷನ್ ಸಿಂದೂರ ಯಶಸ್ವಿಯಾಗಿದೆ. ಜಗತ್ತನ್ನು ನಿರೀಕ್ಷೆ ಮೀರಿ ಉಗ್ರ ತರಬೇತಿ ತಾಣ ಧ್ವಂಸವಾಗಿದೆ. ಉಗ್ರರ ವಿರುದ್ಧ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ. ಸೈನಿಕರ ಮಾತುಗಳಿಂದ ನಮಗೂ ಉತ್ಸಾಹ ಹೆಚ್ಚಿದೆ. ಆಪರೇಷನ್ ಸಿಂದೂರದಿಂದ ಜಗತ್ತು ಬೆರಗಾಗಿದೆ. ಪ್ರಧಾನಿ ಮೋದಿ ಅವಧಿಯಲ್ಲಿ ಸೈನ್ಯವನ್ನು ಸ್ವದೇಶಿಗಳು, ಸ್ವಾವಲಂಬಿಗಳು, ಸ್ವಾಭಿಮಾನಿಯಾಗಿಸಿದ್ದೇವೆ. ಸೈನ್ಯಕ್ಕೆ ಸ್ವಾತಂತ್ರ್ಯ ಕೊಟ್ಟ ಪ್ರಧಾನಿ ಮೋದಿಗೆ ಕೃತಜ್ಞತೆ ಸಲ್ಲಿಸೋಣ ಎಂದರು.

ಯೋಧ ಮಂಜುನಾಥ ಪಟಗಾರ ಮಾತನಾಡಿ, ದೇಶದ ಪ್ರತಿಯೊಬ್ಬ ನಾಗರಿಕನೂ ಸೈನ್ಯಕ್ಕೆ ಬೆಂಬಲವಾಗಿ ನಿಂತಾಗಲೇ ದೇಶದ ರಕ್ಷಣೆ ಕೇವಲ ಸೈನಿಕರಿಂದ ಸಾಧ್ಯ ಎಂದರು.

ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪಹಲ್ಗಾಮ್‌ನಲ್ಲಿ ಧರ್ಮ ಕೇಳಿ ಪ್ರವಾಸಿಗರನ್ನು ಕೊಲೆ ಮಾಡಿದ್ದಕ್ಕೆ ನಮ್ಮ ಸೈನಿಕರು ಪ್ರತೀಕಾರ ತೀರಿಸಿದ್ದಾರೆ. ಕೇಂದ್ರದ ಸಂಪೂರ್ಣ ಬೆಂಬಲ ಹಾಗೂ ಮುಕ್ತ ಸ್ವಾತಂತ್ರ್ಯದಿಂದಾಗಿ ಹಿಂದೆ ಯಾವತ್ತೂ ಮಾಡಿರದಂಥ ದಾಳಿಯನ್ನು ಉಗ್ರರ ವಿರುದ್ಧ ಮಾಡಿದ್ದಾರೆ. ಪಾಕಿಸ್ತಾನದ ಬಾಯಿ ಸಹಿತ ಎಲ್ಲವನ್ನೂ ಮುಚ್ಚಿಸಿದ್ದಾರೆ. ಉಗ್ರರ ಕ್ರೂರತೆಗೆ ತಕ್ಕ ಉತ್ತರ ನೀಡಿದ್ದಾರೆ. ನಮ್ಮ ಯೋಧರ, ಭಾರತೀಯರ ಸತ್ಯ, ದೇಶದ ಸತ್ಯ ಶಕ್ತಿಯಿಂದಾಗಿ ಇಂದಿನ ತಿರಂಗಾ ರ‍್ಯಾಲಿಗೆ ಮಳೆಯೂ ಸಹಕರಿಸಿದೆ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ, ಇಡೀ ದೇಶವೇ ಸೈನಿಕರಿಗೆ ತಿರಂಗಾ ಯಾತ್ರೆಯ ಮೂಲಕ ಧನ್ಯವಾದ ಹೇಳುತ್ತಿದೆ ಎಂದರು.

ಇದಕ್ಕೂ ಮುನ್ನ ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಎಂಬ ಧ್ಯೇಯವಾಕ್ಯದೊಂದಿಗೆ ಮಹಾಸತಿ ದೇವಸ್ಥಾನದ ಬಳಿಯಿಂದ ಹೊರಟ ತಿರಂಗಾ ಯಾತ್ರೆಯಲ್ಲಿ ಎಲ್ಲರೂ ರಾಷ್ಟ್ರಧ್ವಜ ಹಿಡಿದು ಜೈ ಹಿಂದ್... ಭಾರತ್ ಮಾತಾ ಕೀ ಜೈ... ಮುಂತಾದ ಘೋಷಣೆ ಕೂಗುತ್ತಾ ಸಾಗಿದರು. ಮಳೆ ಬಂದರೂ ಲೆಕ್ಕಿಸದೇ ಭಾರತದ ಪ್ರಜೆಗಳ ನೆಮ್ಮದಿಗಾಗಿ ಪ್ರಾಣದ ಹಂಗು ತೊರೆದು ಹೋರಾಡುವ ವೀರ ಯೋಧರಿಗೆ ಗೌರವ ಸಲ್ಲಿಸುತ್ತಾ ಬಸ್ತಿಪೇಟೆ ಮೂಲಕ ರಥಬೀದಿಯ ಗಾಂಧಿಚೌಕದಲ್ಲಿ ಜಮಾಯಿಸಿದರು.

ಪ್ರೊ. ಆದರ್ಶ ಗೋಖಲೆ ಉಡುಪಿ, ಹಳಿಯಾಳದ ಮಾಜಿ ಶಾಸಕ ಸುನಿಲ ಹೆಗಡೆ, ಮಂಡಲಾಧ್ಯಕ್ಷ ಜಿ.ಐ. ಹೆಗಡೆ, ಶಿವಾನಂದ ಹೆಗಡೆ ಕಡತೋಕಾ, ವೆಂಕಟೇಶ ನಾಯಕ, ಸೂರಜ ನಾಯ್ಕ, ಜಿ.ಎಸ್. ಗುನಗಾ ಇನ್ನಿತರರು ನಿವೃತ್ತ ಸೈನಿಕರ ಸಂಘದ ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸಿದ್ದರು.