ಸಾರಾಂಶ
ಅಶೋಕ ಡಿ ಸೊರಟೂರ ಲಕ್ಷ್ಮೇಶ್ವರ
ಗ್ರಾಮದಲ್ಲಿ ಉತ್ಪಾದನೆ ಆಗುತ್ತಿರುವ ಕಸ ವಿಲೇವಾರಿ ಮಾಡುವ ಮೂಲಕ ಗ್ರಾಮದ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಪ್ರತಿ ಗ್ರಾಮದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿದೆ. ಆದರೆ ಗ್ರಾಮದ ಕಸದ ವಿಲೇವಾರಿ ಮಾತ್ರ ಆಗದೆ ವಿಲೇವಾರಿ ಘಟಕಗಳು ಹಳ್ಳ ಹಿಡಿದಿವೆ.ಲಕ್ಷ್ಮೇಶ್ವರ ತಾಲೂಕಿನಲ್ಲಿ ಒಟ್ಟು 14 ಗ್ರಾಪಂ ಇದ್ದು, ಅದರಲ್ಲಿ ಶಿಗ್ಲಿ ಮತ್ತು ಯಳವತ್ತಿ ಗ್ರಾಮದಲ್ಲಿ ಈಗಾಗಲೇ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಲಾಗಿದೆ. ಆದರೆ ಉಳಿದ 12 ಗ್ರಾಪಂಗಳಲ್ಲಿ ಸುಮಾರು 3-4 ವರ್ಷಗಳ ಹಿಂದೆ ಘಟಕ ನಿರ್ಮಾಣಕ್ಕೆ ಚಾಲನೆ ನೀಡಲಾಗಿತ್ತು. ಸುಮಾರು ₹ 10ರಿಂದ ₹ 11 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡುವ ಕಾರ್ಯ ಬಹುತೇಕ ಪೂರ್ಣಗೊಂಡಿವೆ. ಆದರೆ ಗ್ರಾಮದ ಕಸ ಮಾತ್ರ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಬಂದು ಮುಟ್ಟುತ್ತಿಲ್ಲ. ಹೀಗಾಗಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಹಳ್ಳ ಹಿಡಿದಿದೆ.
ಪಂಚಾಯತ್ ರಾಜ್ ಇಲಾಖೆಯು ಈ ಘಟಕ ನಿರ್ಮಾಣದ ಉಸ್ತುವಾರಿ ಹಾಗೂ ಹಣ ಬಿಡುಗಡೆ ಮಾಡುವ ಕಾರ್ಯ ಮಾಡುತ್ತಿದೆ. 20/80ರ ಅನುಪಾತದಲ್ಲಿ ನರೇಗಾ ಯೋಜನೆಯಡಿ ಹಣ ಬಿಡುಗಡೆ ಮಾಡುವ ಕಾರ್ಯ ನಡೆದಿದೆ. ಸುಮಾರು ₹1.23 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಘನತ್ಯಾಜ್ಯ ವಿಲೇವಾರಿ ಘಟಕಗಳು ಯಾವ ಪುರುಷಾರ್ಥಕ್ಕಾಗಿ ನಿರ್ಮಾಣ ಮಾಡಲಾಗಿದೆ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.ತಾಲೂಕಿನಲ್ಲಿ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣ ಮಾಡಿ ಗ್ರಾಮದಲ್ಲಿ ಉತ್ಪಾದನೆ ಆಗುವ ಕಸ ಸಂಗ್ರಹಿಸಿ, ಅದನ್ನು ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಬೇರ್ಪಡಿಸಿ ಅದರಿಂದ ಬರುವ ಸಾವಯವ ಗೊಬ್ಬರ ಮಾರಾಟ ಮಾಡಿ ಆದಾಯ ಹೆಚ್ಚಳ ಮಾಡುವ ಯೋಜನೆ ಸರ್ಕಾರದ್ದು. ಆದರೆ ಇದುವರೆಗೂ ಯಾವುದೇ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಕೆಲಸ ವಿಂಗಡಣೆ ಮಾಡುವ ಕಾರ್ಯ ನಡೆಯುತ್ತಿಲ್ಲ ಎಂಬುದು ಸೋಜಿಗದ ಸಂಗತಿಯಾಗಿದೆ.
ಘನತ್ಯಾಜ್ಯ ವಿಲೇವಾರಿಗೆ ಸರ್ಕಾರ ಪ್ರತಿ ಗ್ರಾಪಂಗೆ ಒಂದರಂತೆ ಹೊಸ ಟಾಟಾ ಏಸ್ ವಾಹನ ಖರೀದಿಸಿದೆ. ಈಗ ಈ ವಾಹನ ತುಕ್ಕು ಹಿಡಿದಿವೆ ಹಾಗೂ ಕೆಲವು ದುರಸ್ತಿಗೆ ಬಂದು ಮೂಲೆ ಹಿಡಿದಿವೆ. ಸಾರ್ವಜನಿಕರು ತೆರಿಗೆ ರೂಪದಲ್ಲಿ ಕಟ್ಟಿದ ಹಣ ಹೀಗೆ ಪೋಲಾಗುತ್ತಿದೆ ಎಂಬುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.ಸರ್ಕಾರದ ಮಟ್ಟದಲ್ಲಿ ಆಡಳಿತದ ಮಹತ್ವದ ಹುದ್ದೆಯಲ್ಲಿರುವ ಐಎಎಸ್ ಅಧಿಕಾರಿಗಳು ಗ್ರಾಮೀಣ ಮಟ್ಟದಲ್ಲಿ ಕಸ ಯಾವ ರೀತಿ ವಿಲೇವಾರಿ ಮಾಡುತ್ತಾರೆ ಎಂಬ ಕನಿಷ್ಠ ಸಾಮಾನ್ಯ ಜ್ಞಾನವು ಇಲ್ಲದೆ ಇರುವುದರಿಂದ ಇಂತಹ ಯಡವಟ್ಟು ಯೋಜನೆ ಜಾರಿಗೆ ತರಲು ಕಾರಣವಾಗಿದ್ದಾರೆ. ಆದರೆ ಗ್ರಾಮೀಣ ಭಾಗದಲ್ಲಿ ರೈತರು ಕಸವನ್ನು ತಮ್ಮದೇ ಆದ ಜಾಗದಲ್ಲಿ ಹಾಕುವ ಮೂಲಕ ಅದನ್ನು ಗೊಬ್ಬರವನ್ನಾಗಿ ಪರಿವರ್ತನೆ ಮಾಡಿ ಬೇಸಿಗೆಯಲ್ಲಿ ತಮ್ಮ ಹೊಲಕ್ಕೆ ಹಾಕುವ ಕಾರ್ಯ ಮಾಡುತ್ತಾರೆ. ಇಂತಹ ಗೊಬ್ಬರ ಹೊಲದ ಫಲವತ್ತತೆ ಹೆಚ್ಚಿಸುವ ಕಾರ್ಯ ಮಾಡುತ್ತದೆ. ಆದ್ದರಿಂದ ಗ್ರಾಮೀಣ ಭಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾರ್ಯ ಬಹುತೇಕ ಅನುಪಯುಕ್ತವಾಗಿವೆ ಎಂದು ಗೋನಾಳ ಗ್ರಾಪಂನ ಮಾಜಿ ಅಧ್ಯಕ್ಷ ಮಂಜುನಾಥಗೌಡ ಕೆಂಚನಗೌಡ ತಿಳಿಸಿದ್ದಾರೆ.
ನಾನು ಈ ಹುದ್ದೆಗೆ ಹೊಸದಾಗಿ ಬಂದಿದ್ದು, ಘನತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣದ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಪಿಆರ್‌ಡಿ ಎಇಇ ಮಾರುತಿ ರಾಠೋಡ ಹೇಳಿದ್ದಾರೆ.