ಸಾರಾಂಶ
ಹಾವೇರಿ: ಜಿಲ್ಲಾ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಹಾಗೂ ಆರೋಗ್ಯ ಸೇವೆ ಸುಧಾರಣೆಗೆ ಆದ್ಯತೆ ನೀಡುವ ಅಗತ್ಯವಿರುವುದನ್ನು ಮನಗಂಡು ಕಾರ್ಯೋನ್ಮುಖನಾಗಿದ್ದು, ಬಹುತೇಕ ಪರಿಹಾರ ಕಂಡುಕೊಂಡಿದ್ದೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಉಸ್ತುವಾರಿ ಸಚಿವರಾಗಿ ಜಿಲ್ಲೆಯ ಅಭಿವೃದ್ಧಿಗೆ ಕೈಗೊಂಡ ಯೋಜನೆಗಳ ಕೈಪಿಡಿಯನ್ನು ಬಿಡುಗಡೆಗೊಳಿಸಿ ಮಾತನಾಡಿ, ₹1325 ಕೋಟಿ ವೆಚ್ಚದ ತಡಸ, ಆಣೂರು ಹಾಗೂ ಹಂಸಭಾವಿ ಈ ಮೂರು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ ಅನುಷ್ಠಾನದಿಂದ 451 ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಈ ಮೂರೂ ಯೋಜನೆಗಳು ಅನುಷ್ಠಾನ ಹಂತಕ್ಕೆ ಬಂದಿದ್ದು, ಟ್ರಯಲ್ ರನ್ ಆಗಿದೆ ಎಂದರು. ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಮೂಲ ಸೌಕರ್ಯವನ್ನು ಬಲಪಡಿಸುವ ಬದ್ಧತೆಯನ್ನು ಹೊಂದಿದ್ದು, ರಾಜ್ಯದಲ್ಲಿ ಏಕಕಾಲಕ್ಕೆ ನಾಲ್ಕು ಜಿಲ್ಲೆಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರಾಗಿದ್ದರೂ ಪೂರ್ಣ ಪ್ರಮಾಣದಲ್ಲಿ ಸ್ವಂತ ಕಟ್ಟಡದಲ್ಲಿ ಆರಂಭವಾದ ಕಾಲೇಜು ಎಂಬ ಹೆಗ್ಗಳಿಗೆ ಹಾವೇರಿ ಜಿಲ್ಲೆಗೆ ಸಂದಿದೆ ಎಂದರು.ತುರ್ತು ಚಿಕಿತ್ಸೆ ಮತ್ತು ತೀವ್ರ ನಿಗಾಕ್ಕೆ ಪ್ರಮುಖ ಅಂಶವಾದ ಕ್ರಿಟಿಕಲ್ ಕೇರ್ ಬ್ಲಾಕ್ ಕಾಮಗಾರಿ ಪ್ರಗತಿಯಲ್ಲಿದ್ದು, ಈ ವರ್ಷದ ಅಂತ್ಯಕ್ಕೆ ಪೂರ್ಣಗೊಳ್ಳುವ ವಿಶ್ವಾಸವಿದೆ. ಕ್ರಿಟಿಕಲ್ ಕೇರ್ ಬ್ಲಾಕ್‌ನಲ್ಲಿ ಅತ್ಯಾಧುನಿಕ ಮಾಡ್ಯುಲರ್ ಆಪರೇಷನ್ ಥಿಯೇಟರ್‌ಗಳನ್ನು ಅಳವಡಿಸಲಿದ್ದು, ಇದರಿಂದ ಜಿಲ್ಲೆಯ ಜನ ಹುಬ್ಬಳ್ಳಿ, ದಾವಣಗೆರೆ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಿದಂತಾಗಲಿದೆ ಎಂದರು. ರಟ್ಟೀಹಳ್ಳಿ ತಾಲೂಕು ಮಗದ- ಮಾಸೂರು ಕೆರೆಯ ಎಡ ಮತ್ತು ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣಕ್ಕೆ ₹52.20 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಲಾಗಿದ್ದು, ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ. ಇದರಿಂದ ಅಚ್ಚುಕಟ್ಟು ಕೊನೆಯ ಭಾಗದ ರೈತರ ನೀರಿನ ಬವಣೆಗೆ ಪರಿಹಾರ ಸಿಗಲಿದೆ ಎಂದರು. ₹690 ಕೋಟಿ ವೆಚ್ಚದ ಸವಣೂರು ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಹಾನಗಲ್ಲ ತಾಲೂಕಿನ ಯಳವಟ್ಟಿ ಗ್ರಾಮದಲ್ಲಿ ಸಾರ್ವಜನಿಕ, ಖಾಸಗಿ ಸಹಭಾಗಿತ್ವದಲ್ಲಿ ಬಹುತೋಟಗಾರಿಕೆ ಉತ್ಪನ್ನ ನಿರ್ವಹಣೆ, ಸಂಗ್ರಹಣೆ ಮತ್ತು ಸಂಸ್ಕರಣಾ ಘಟಕಗಳ ಕ್ಲಸ್ಟರ್ ನಿರ್ಮಾಣಕ್ಕೆ ₹35 ಕೋಟಿ ವೆಚ್ಚದ ಯೋಜನೆ ರೂಪಿಸಲು ಸಚಿವ ಸಂಪುಟ ಸಭೆ ನಿರ್ಣಯಿಸಿದೆ ಎಂದರು.ಚುನಾವಣೆ ವೇಳೆ ಭರವಸೆ ನೀಡಿದಂತೆ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಐದೂ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದ್ದು, ಇದು ಜಿಲ್ಲೆಯ ಸಾವಿರಾರು ಕುಟುಂಬಗಳ ಆರ್ಥಿಕ ಸ್ಥಿತಿ ಸುಧಾರಣೆಗೆ ನೆರವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ಶ್ರೀನಿವಾಸ ಮಾನೆ, ಯು.ಬಿ. ಬಣಕಾರ್, ಕೆ.ಬಿ. ಕೋಳಿವಾಡ, ಯಾಸಿರ್ ಅಹ್ಮದ್ ಖಾನ್ ಪಠಾಣ್, ಎಸ್.ಆರ್. ಪಾಟೀಲ್, ಡಿಸಿ ಡಾ. ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ರುಚಿ ಬಿಂದಲ್, ಎಸ್ಪಿ ಯಶೋದಾ ವಂಟಗೋಡಿ ಇದ್ದರು.