ಸ್ಥಳದಲ್ಲಿಯೇ ಗೃಹಲಕ್ಷ್ಮಿ ಅರ್ಜಿಗೆ ಪರಿಹಾರ

| Published : Jan 07 2025, 12:31 AM IST

ಸಾರಾಂಶ

ಸೋಮವಾರ ತಾಲೂಕಿನ ಗಡಿಗ್ರಾಮ ಕೆ.ರಾಯಪುರದಲ್ಲಿ ಚಾಲನೆ ನೀಡುವುದರ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾದರು.

ಕೂಡ್ಲಿಗಿ: ಕ್ಷೇತ್ರದ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಸ್ಥಳೀಯ ಸಮಸ್ಯೆಗಳನ್ನು ಅರಿಯಲು ಹಾಗೂ ಸಾಧ್ಯವಾದಷ್ಟು ಪರಿಹಾರ ಒದಗಿಸಲು ಮನೆ ಮನೆಗೆ ಸರ್ಕಾರ ಎನ್ನುವ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸೋಮವಾರ ತಾಲೂಕಿನ ಗಡಿಗ್ರಾಮ ಕೆ.ರಾಯಪುರದಲ್ಲಿ ಚಾಲನೆ ನೀಡುವುದರ ಮೂಲಕ ಸಮಸ್ಯೆಗಳ ಪರಿಹಾರಕ್ಕೆ ಮುಂದಾದರು.

ಕ್ಷೇತ್ರದ ಪ್ರತಿ ಕುಟುಂಬದ ಸ್ಥಿತಿ-ಗತಿ, ಸಮಸ್ಯೆಗಳು, ಮಾಸಾಶನ, ಸರ್ಕಾರದಿಂದ ದೊರೆತ ಸೌಲಭ್ಯಗಳು ಸೇರಿ ಇತರೆ ಮಾಹಿತಿ ದಾಖಲಿಸಿ, ಆ ಮೂಲಕ ಸಮಸ್ಯೆಗಳ ಪರಿಹಾರ ಸೂತ್ರಕ್ಕೆ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮುಂದಾದರು.

ಈಗಾಗಲೇ ಶಾಸಕರ ಅಭಿಮಾನಿ ಬಳಗ ಹಾಗೂ ಆಪ್ತ ಬಳಗ ಈ ಶಾಸಕರ ನೂತನ ಯೋಜನೆಯ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಪ್ರತಿ ಮನೆಯ ಸಂಪೂರ್ಣ ಮಾಹಿತಿ ದಾಖಲಿಸಲು 180 ಪ್ರಶ್ನೆಗಳಿರುವ ಮಾಹಿತಿ ದಾಖಲಿಸುವ ಆ್ಯಪ್ ಸಿದ್ಧಪಡಿಸಿರುವ ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ತಮ್ಮ ಸ್ವಂತ ಖರ್ಚಿನಲ್ಲೇ ಸಮೀಕ್ಷೆ ಮಾಡಿಸುತ್ತಿರುವುದಕ್ಕೆ ಕ್ಷೇತ್ರದ ಜನತೆ ಮೇಲಿನ ಕಾಳಜಿಗೆ ಮುಂದಾಗಿದ್ದರು.

ಶಾಸಕ ಡಾ.ಎನ್.ಟಿ. ಶ್ರೀನಿವಾಸ್ ಮಾತನಾಡಿ, ರಾಯಪುರದಲ್ಲಿ ಶೌಚಾಲಯ ಕೊರತೆ ಇದೆ. ಅಂಬೇಡ್ಕರ್ ನಗರದಲ್ಲಿ ಜಾಗದ ಸಮಸ್ಯೆಯಿಂದ ಕೋರ್ಟ್ ಮೆಟ್ಟಿಲು ಏರಿದೆ. ರಸ್ತೆ, ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಕೆಲವು ಮನೆಗಳಲ್ಲಿ ಆರೋಗ್ಯ ಸಮಸ್ಯೆ ಇರುವ ಬಗ್ಗೆ ಸಹ ನಮ್ಮ ತಂಡದ ಸಮೀಕ್ಷೆಯಿಂದ ತಿಳಿದಿದೆ ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಎಂ.ರೇಣುಕಾ ಸೇರಿದಂತೆ ಕೂಡ್ಲಿಗಿ ತಾಲೂಕು ಮಟ್ಟದ ಅಧಿಕಾರಿಗಳು ಮುಖಂಡರು ಉಪಸ್ಥಿತರಿದ್ದರು. ನಂತರ ಗ್ರಾಮದ ಸ್ಥಳ ಪರಿಶೀಲನೆ ನಡೆಸಿದರು.

ಗೃಹಲಕ್ಷ್ಮಿಗೆ ಹೊಸ ಭಾಷೆ ಬರೆದ ಶಾಸಕ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿ ಯೋಜನೆಯಿಂದ ವಂಚನೆಗೊಳಗಾಗಿದ್ದ ಕೆ.ರಾಯಪುರದ ಹನುಮಕ್ಕ ಎನ್ನುವ ಮಹಿಳೆಯು ಮನೆ ಮನೆಗೆ ಸರ್ಕಾರ ವಿನೂತನ ಕಾರ್ಯಕ್ರಮದಲ್ಲಿ ಅರ್ಜಿ ಹಾಕುವ ಮೂಲಕ ಶಾಸಕರ ಗಮನ ಸೆಳೆದರು. ಸ್ಥಳದಲ್ಲಿಯೇ ಗೃಹಲಕ್ಷ್ಮಿ ಯೋಜನೆ ಮುಟ್ಟಿಸುವ ಮೂಲಕ ಶಾಸಕರು ಜನತೆಯ ಸಮಸ್ಯೆ ಬಗೆಹರಿಸುವಲ್ಲಿ ಯಶಸ್ವಿಯಾದರು.