ಸಾರಾಂಶ
ಬಳ್ಳಾರಿ: ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜೀನ್ಸ್ ಫ್ಯಾಕ್ಟರಿಗಳ ತ್ಯಾಜ್ಯ ನಿರ್ವಹಣೆಗೆ ಅಗತ್ಯವಾದ ಸಾಮೂಹಿಕ ತ್ಯಾಜ್ಯ ಸಂಸ್ಕರಣಾ ಘಟಕ (CETP) ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು 22 ಕೋಟಿ ರೂಪಾಯಿಗಳನ್ನು ಮಂಜೂರು ಮಾಡಿದೆ ಎಂದು ನಗರ ಶಾಸಕ ನಾರಾ ಭರತ್ ರೆಡ್ಡಿ ಘೋಷಿಸಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜೀನ್ಸ್ ವಾಷಿಂಗ್ ಯೂನಿಟ್ ಗಳು ಕಳೆದ ಹಲವು ತಿಂಗಳುಗಳಿಂದ ಪರಿಸರ ಅನುಮತಿ ಹಾಗೂ ಇಟಿಪಿ ಸಮಸ್ಯೆಯಿಂದ ಸಂಕಷ್ಟಕ್ಕೆ ಸಿಲುಕಿದ್ದವು. ಉಪಲೋಕಾಯುಕ್ತರ ನಿರ್ದೇಶನದಂತೆ ಪರಿಸರ ಇಲಾಖೆ ಇಟಿಪಿ ಅಳವಡಿಸಿಕೊಳ್ಳದ ಘಟಕಗಳಿಗೆ ನೋಟಿಸ್ ನೀಡಿದ್ದು, ಅವಧಿ ಮುಗಿದರೂ ಕ್ರಮ ಕೈಗೊಂಡಿರದ ಕಾರಣದಿಂದ ಕೆಲವು ಯೂನಿಟ್ಗಳ ವಿದ್ಯುತ್ ಪೂರೈಕೆಯನ್ನೂ ಸ್ಥಗಿತಗೊಳಿಸಲಾಗಿತ್ತು ಎಂದರು.ಘಟಕ ಮಾಲೀಕರ ಬೇಡಿಕೆಗೆ ಸ್ಪಂದಿಸಿ ತಕ್ಷಣವೇ ಕೆಇಬಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಸಿಂಗಲ್ ಫೇಸ್ ಲೈಟಿಂಗ್ ಮೂಲಕ ತಾತ್ಕಾಲಿಕ ವಿದ್ಯುತ್ ಪೂರೈಕೆಯ ವ್ಯವಸ್ಥೆ ಕಲ್ಪಿಸಿದ್ದಾಗಿ ಹೇಳಿದರು.
₹22 ಕೋಟಿ ಅನುದಾನ:ಜೀನ್ಸ್ ವಾಷಿಂಗ್ ಘಟಕಗಳಿಗೆ ಶಾಶ್ವತ ಪರಿಹಾರವಾಗಿ ಸಿಇಟಿಪಿ ನಿರ್ಮಾಣದ ಅಗತ್ಯವನ್ನು ಮನಗಂಡು, ತಾವು ಗ್ರಾಮೀಣ ಶಾಸಕ ನಾಗೇಂದ್ರ, ಕಂಪ್ಲಿ ಶಾಸಕ ಗಣೇಶ್ ಹಾಗೂ ಸಂಸದ ಈ.ತುಕಾರಾಂ ಅವರೊಂದಿಗೆ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿದ್ದಾಗಿ ಹೇಳಿದರು. ಅವರ ಮನವಿಗೆ ಸ್ಪಂದಿಸಿದ ಸಿಎಂ, ಕೆಕೆಆರ್‌ಡಿಬಿ ಮತ್ತು ಕೆಐಎಡಿಬಿ ಮೂಲಕ ತಲಾ ₹11 ಕೋಟಿ ಯಂತೆ ಒಟ್ಟು ₹22 ಕೋಟಿ ಮಂಜೂರು ಮಾಡಿದ್ದಾರೆ.
ಕೆಲವೇ ದಿನಗಳಲ್ಲಿ CETP ನಿರ್ಮಾಣ ಪ್ರಾರಂಭವಾಗಲಿದ್ದು, ಇದು ಜೀನ್ಸ್ ಕೈಗಾರಿಕೆಗಳಿಗೆ ದೊಡ್ಡ ದಿಕ್ಕು ನೀಡಲಾಗಿದೆ ಎಂದರು.ಜೀನ್ಸ್ ಅಪೆರಲ್ ಪಾರ್ಕ್- 2026ರಲ್ಲಿ ಶಂಕು ಸ್ಥಾಪನೆ:
ರಾಹುಲ್ ಗಾಂಧಿಯವರು ಬಳ್ಳಾರಿಯಲ್ಲಿ ಜೀನ್ಸ್ ಅಪೆರಲ್ ಪಾರ್ಕ್ ಸ್ಥಾಪನೆಗೆ ನೀಡಿದ ಭರವಸೆ ಕಾರ್ಯರೂಪಕ್ಕೆ ಬರುತ್ತಿದ್ದು, ಈಗಾಗಲೇ ಜಮೀನು ಸ್ವಾಧೀನಗೊಂಡಿದೆ. 2026ರ ಮಾರ್ಚ್ ಅಥವಾ ಏಪ್ರಿಲ್‌ನಲ್ಲಿ ರಾಹುಲ್ ಗಾಂಧಿ ಅವರಿಂದ ಶಂಕುಸ್ಥಾಪನೆ ನೆರವೇರಿಸಲಾಗುವುದು. ಯೋಜನೆ ದೊಡ್ಡದಾಗಿರುವುದರಿಂದ ಸ್ವಲ್ಪ ವಿಳಂಬ, ಆದರೆ ಹಣಕಾಸಿನ ಸಮಸ್ಯೆ ಯಾವುದೂ ಇಲ್ಲ ಎಂದರು.ಪತ್ರಿಕಾಗೋಷ್ಠಿಯಲ್ಲಿ ಮಹಾಪೌರ ಪಿ. ಗಾದೆಪ, ಮಾಜಿ ಮಹಾಪೌರ ರಾಜೇಶ್ವರಿ ಸುಬ್ಬರಾಯುಡು, ವೆಂಕಟೇಶ್ ಹೆಗಡೆ, ಚಾನಾಳ್ ಶೇಖರ್, ಬೋಯಾಪಾಟಿ ವಿಷ್ಣುವರ್ಧನ್, ವೀರೇಂದ್ರ ಕುಮಾರ್, ಲೇಬಲ್ ರಾಜು, ಮಲ್ಲಿಕಾರ್ಜುನ ಗೌಡ, ವಿನಯ್, ದಾದಾ ಖಲಂದರ್, ರಾಖಿ, ಅಶೋಕ್, ಪೊಲೆಕ್ಸ್ ಮಲ್ಲಿಕಾರ್ಜುನ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))