ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲೆಲ್ಲಾ ಪೌತಿ ಖಾತೆ ಮಾಡಿಸುವುದು ಕಷ್ಟಸಾಧ್ಯವಾಗಿತ್ತು. ಈಗ ಅದನ್ನು ಆಂದೋಲನ ರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕಂದಾಯ ಅಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿಗೆ ಪೌತಿ ಖಾತೆ ಮಾಡಲು ಗುರಿ ನಿಗದಿಪಡಿಸಲಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಸಮಸ್ಯೆಗಳ ಅರ್ಜಿ ಹಿಡಿದುಕೊಂಡು ಜನರು ಸರ್ಕಾರಿ ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸುವ ಉದ್ದೇಶದಿಂದಲೇ ಪ್ರಜಾಸೇವೆ ಕಾರ್ಯಕ್ರಮವನ್ನು ಸರ್ಕಾರ ಜಾರಿಗೊಳಿಸಿದೆ. ಸರ್ಕಾರಿ ಅಧಿಕಾರಿಗಳೇ ಜನರ ಬಳಿ ಬಂದು ಸಮಸ್ಯೆಗಳಿಗೆ ಪರಿಹಾರ ಸೂಚಿಸುವುದು ಪ್ರಜಾಸೇವೆಯ ಮೂಲೋದ್ದೇಶವಾಗಿದೆ ಎಂದು ತಹಸೀಲ್ದಾರ್‌ ಎಚ್‌.ವಿಶ್ವನಾಥ್‌ ಹೇಳಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕು ದುದ್ದ-1 ಹೋಬಳಿಯ ಜಿ.ಮಲ್ಲಿಗೆರೆ ಗ್ರಾಪಂ ವ್ಯಾಪ್ತಿಯ ಚಿಕ್ಕಗಂಗವಾಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಪ್ರಜಾಸೇವಾ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ತಹಸೀಲ್ದಾರ್ ವಿಶ್ವನಾಥ್ ಮಾತನಾಡಿದರು.

ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಮೊದಲೆಲ್ಲಾ ಪೌತಿ ಖಾತೆ ಮಾಡಿಸುವುದು ಕಷ್ಟಸಾಧ್ಯವಾಗಿತ್ತು. ಈಗ ಅದನ್ನು ಆಂದೋಲನ ರೂಪದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಕಂದಾಯ ಅಧಿಕಾರಿ ಮತ್ತು ಗ್ರಾಮ ಆಡಳಿತಾಧಿಕಾರಿಗೆ ಪೌತಿ ಖಾತೆ ಮಾಡಲು ಗುರಿ ನಿಗದಿಪಡಿಸಿರುವುದಾಗಿ ತಿಳಿಸಿದರು.

ಜಾತಿ, ಆದಾಯ, ಮರಣ ಪ್ರಮಾಣಪತ್ರ ಸೇರಿದಂತೆ ವಿವಿಧ ಪ್ರಮಾಣಪತ್ರ ಪಡೆಯಲು ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಅಗತ್ಯ ದಾಖಲೆಗಳೊಂದಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ನಿರೀಕ್ಷಕರು ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ದಾಖಲಿಸಿ ಮುಂದಿನ ಪ್ರಕ್ರಿಯೆ ಕೈಗೊಳ್ಳಲಿದ್ದಾರೆ ಎಂದರು.

ಸರ್ಕಾರದಿಂದ ಜಮೀನು ಮಂಜೂರಾದ ಬಳಿಕ ಖಾತೆ ಮಾಡಿಸಿಕೊಂಡಿದ್ದರೂ, ಜಮೀನಿನ ದುರಸ್ತಿ ಹಾಗೂ ದಾಖಲೆಗಳ ತಿದ್ದುಪಡಿ ಮಾಡಿಸಿಕೊಳ್ಳಲು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. ಈ ಸಮಸ್ಯೆಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಸರ್ವೇ ಕಾರ್ಯ ಕೈಗೊಳ್ಳಲಾಗುತ್ತಿದೆ. ಎರಡು ಹಂತಗಳಲ್ಲಿ ಸರ್ವೇ ಮತ್ತು ದುರಸ್ತಿ ಪ್ರಕ್ರಿಯೆ ನಡೆಯಲಿದ್ದು, ಅಗತ್ಯ ದಾಖಲೆಗಳನ್ನು ಈಗಾಗಲೇ ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡಿ ಸರ್ವೇ ಇಲಾಖೆಗೆ ಕಳುಹಿಸಲಾಗಿದೆ. ಸರ್ವೇ ಕಾರ್ಯ ಪೂರ್ಣಗೊಂಡ ಬಳಿಕ ಹೊಸ ಸರ್ವೇ ನಂಬರ್ ನೀಡಿ ಪಹಣಿ ವಿತರಿಸಲಾಗುವುದು ಎಂದರು.

ಈ ಹಿಂದೆ ಸರ್ವೇ ಕಾರ್ಯದಲ್ಲಿ ಹಲವು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿದ್ದವು. ಇದೀಗ ಮಂಡ್ಯ ತಾಲೂಕಿಗೆ ಹೊಸ ಎಡಿಎಲ್ಆರ್ ಅಧಿಕಾರಿಗಳು ನೇಮಕಗೊಂಡಿದ್ದು, ಬಾಕಿ ಇರುವ ಸರ್ವೇ ಕಾರ್ಯಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಅಧಿಕಾರಿಗಳು ಕೂಡ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಸಾರ್ವಜನಿಕರು ಈ ಪ್ರಕ್ರಿಯೆಗೆ ಅಗತ್ಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇನ್ನು ಆರ್‌ಆರ್‌ಟಿ ತಿದ್ದುಪಡಿ, ಎ ಮತ್ತು ಬಿ ಖರಾಬು ಸೇರಿದಂತೆ ಪಹಣಿಗೆ ಸಂಬಂಧಿಸಿದ ಸಣ್ಣಪುಟ್ಟ ತಿದ್ದುಪಡಿಗಳಿಗೂ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ. ಪಹಣಿಯಲ್ಲಿ ಯಾವುದೇ ತಿದ್ದುಪಡಿ ಅಗತ್ಯವಿದ್ದಲ್ಲಿ ಸಾರ್ವಜನಿಕರು ಅಗತ್ಯ ದಾಖಲೆಗಳೊಂದಿಗೆ ಕಂದಾಯ ಇಲಾಖೆಯ ಕೌಂಟರ್‌ಗೆ ಅರ್ಜಿ ಸಲ್ಲಿಸಬೇಕು. ಸಿಬ್ಬಂದಿ ಆನ್‌ಲೈನ್‌ನಲ್ಲಿ ಅರ್ಜಿ ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ ಎಂದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಅಧಿಕಾರಿಗಳ ಗಮನಕ್ಕೆ ತರಬೇಕು. ಸಮಸ್ಯೆಗಳನ್ನು ಪರಿಹರಿಸಲು ಕಂದಾಯ ಇಲಾಖೆ ಬದ್ಧವಾಗಿದ್ದು, ಪ್ರಜಾಸೇವಾ ಆಂದೋಲನದ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಲೋಕೇಶ್ ಮೂರ್ತಿ, ಕೃಷಿ ಅಧಿಕಾರಿ ಪ್ರತಿಭಾ, ಕಂದಾಯ ಅಧಿಕಾರಿ ಲೋಹಿತ್,ಗಣೇಶ್, ಹೇಮಾವತಿ, ಶೈಲಜಾ ಇತರರು ಇದ್ದರುಅಧಿಕಾರಿಗಳ ವಿರುದ್ಧ ತಿರುಗಿಬಿದ್ದ ಗ್ರಾಮಸ್ಥರು..!

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜಿ.ಮಲ್ಲೀಗೆರೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಸಿಟ್ಟಿಗೆದ್ದ ಘಟನೆ ಶನಿವಾರ ನಡೆಯಿತು.

ತಹಸೀಲ್ದಾರ್‌ ಎಚ್‌.ವಿಶ್ವನಾಥ್‌ ಭಾಷಣ ಮಾಡುವ ಸಮಯದಲ್ಲಿ ಪೌತಿಖಾತೆ, ಜಮೀನು ದುರಸ್ತು, ಜಮೀನಿನ ಸರ್ವೇ ಕಾರ್ಯದ ಕುರಿತಂತೆ ಮಾತನಾಡುವ ವೇಳೆ ಗ್ರಾಮಸ್ಥರು ತಿರುಗಿಬಿದ್ದರು. ಕಳೆದ ಎರಡು ವರ್ಷಗಳಲ್ಲಿ ಎಷ್ಟು ಜಮೀನು ದುರಸ್ತಾಗಿದೆ, ಎಷ್ಟು ಜಮೀನುಗಳ ಸರ್ವೇ ಕಾರ್ಯ ಮುಗಿದಿದೆ ದಾಖಲೆ ನೀಡುವಂತೆ ಒತ್ತಾಯಿಸಿದರು.

ನಾವು ಜಮೀನು ದುರಸ್ತುಗೆ ಅರ್ಜಿ ಹಾಕಿ ಎರಡು ವರ್ಷಗಳಾಗಿದೆ. ಈವರೆಗೆ ಒಬ್ಬನೇ ಒಬ್ಬ ಅಧಿಕಾರಿಯೂ ಅದಕ್ಕೆ ಸ್ಪಂದಿಸಿಲ್ಲ. ನೂರಾರು ಅರ್ಜಿಗಳು ಬಾಕಿ ಉಳಿದಿವೆ. ಸರ್ವೇ ಕಾರ್ಯವೂ ಸಮರ್ಪಕವಾಗಿ ನಡೆಯುತ್ತಿಲ್ಲ. ಲಂಚ ಕೊಟ್ಟರಷ್ಟೇ ಕೆಲಸ ಮಾಡಿಕೊಡುವರು. ಇಲ್ಲದಿದ್ದರೆ ಕಡತಗಳನ್ನು ಮುಟ್ಟಿಯೂ ನೋಡುವುದಿಲ್ಲ. ಇದರ ನಡುವೆ ನೀಡು ಉಚಿತವಾಗಿ ಜಮೀನು ದುರಸ್ತು ಮಾಡಿಕೊಡುವುದಾಗಿ ಸುಳ್ಳು ಹೇಳುವುದೇಕೆ ಎಂದು ತಹಸೀಲ್ದಾರ್‌ ಅವರನ್ನು ಪ್ರಶ್ನಿಸಿದರು.

ಅಧಿಕಾರಿಗಳು ತಮ್ಮ ಬಳಿ ಬರುವ ಜನರ ಕೆಲಸವನ್ನು ಮಾಡಿಕೊಟ್ಟರೆ ಪ್ರಜಾಸೇವೆ ಆಂದೋಲನದ ಅವಶ್ಯಕತೆಯೇ ಇರುವುದಿಲ್ಲ. ನಾವು ಕೊಟ್ಟ ಸಮಸ್ಯೆಗಳ ಅರ್ಜಿಗಳನ್ನು ಸುಮ್ಮನೆ ಇಟ್ಟುಕೊಳ್ಳುತ್ತೀರಷ್ಟೇ. ವರ್ಷಾನುಗಟ್ಟಲೆಯಾದರೂ ಅವುಗಳಿಗೆ ಪರಿಹಾರವನ್ನೇ ಸೂಚಿಸುವುದಿಲ್ಲ. ಇಂತಹ ಆಂದೋಲನಗಳಿಂದ ಯಾವ ಪ್ರಯೋಜನವಿಲ್ಲ ಎಂದು ಜನರು ಖಾರವಾಗಿಯೇ ನುಡಿದರು.ಮೂರೇ ಗಂಟೆಯಲ್ಲಿ ಆಂದೋಲನ ಸಮಾಪ್ತಿ

ಮಲ್ಲೀಗೆರೆಯಲ್ಲಿ ಶನಿವಾರ ನಡೆದ ಪ್ರಜಾಸೇವಾ ಆಂದೋಲನ ಕೇವಲ ಮೂರು ಗಂಟೆಯಲ್ಲಿ ಮುಕ್ತಾಯಗೊಂಡಿತು. ಬೆಳಗ್ಗೆ10.30ಕ್ಕೆ ಆಂದೋಲನ ಆರಂಭಗೊಳ್ಳಬೇಕಿತ್ತಾದರೂ ಶಾಸಕ ದರ್ಶನ್‌ ಪುಟ್ಟಣ್ಣಯ್ಯ ಅವರಿಗಾಗಿ ಮಧ್ಯಾಹ್ನ 12 ಗಂಟೆಯವರೆಗೂ ಮುಂದೂಡಲಾಯಿತು. ಆದರೂ ಶಾಸಕರು ಬರಲೇ ಇಲ್ಲ. ಶಾಸಕರಿಗೆ ಫೋನ್‌ ಕರೆ ಮಾಡಿದಾಗ ಅಧಿಕಾರಿಗಳಿಗೆ ಪ್ರಜಾಸೇವೆ ಆಂದೋಲನ ಆರಂಭಿಸುವಂತೆ ಸೂಚಿಸಿದರು. ಅದರಂತೆ ಅಧಿಕಾರಿಗಳು ಚಾಲನೆ ನೀಡಿದರು. ತಹಸೀಲ್ದಾರ್‌ ಎಚ್‌.ವಿಶ್ವನಾಥ್‌ ಮಾತನಾಡುವಾಗಲೇ ಜನರು ಸಮಸ್ಯೆಗಳಿಗೆ ಅಧಿಕಾರಿಗಳು ಸ್ಪಂದಿಸದಿರುವ ಬಗ್ಗೆ ಧ್ವನಿ ಎತ್ತಿದ್ದರು. ಇದರ ನಡುವೆಯೇ ವಿಶ್ವನಾಥ್‌ ಭಾಷಣ ಮುಗಿಸಿ ಇಒ ಲೋಕೇಶ್‌ ಮಾತನಾಡುವುದಕ್ಕೆ ಅವಕಾಶ ಮಾಡಿಕೊಟ್ಟರು. ಜನರ ಗದ್ದಲ ಹೆಚ್ಚಾದಾಗ ಲೋಕೇಶ್‌ ಮಾತನಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಕೊನೆಗೆ ಜನರಿಂದ ಅರ್ಜಿ ಸ್ವೀಕರಿಸುವುದಕ್ಕೆ ಅಧಿಕಾರಿಗಳು ಮುಂದಾದರು. ಮೂರು ಗಂಟೆಯ ವೇಳೆಗೆ ಅಧಿಕಾರಿಗಳು ಒಬ್ಬೊಬ್ಬರಾಗಿ ಜಾಗ ಖಾಲಿ ಮಾಡಲು ಆರಂಭಿಸಿದರು.