ಕನ್ನಡಪ್ರಭ ವಾರ್ತೆ ಹಾಸನ ವಚನ ಸಾಹಿತ್ಯವು ಕನ್ನಡ ಸಾಹಿತ್ಯದ ಅತ್ಯಂತ ಅಮೂಲ್ಯ ಬಳುವಳಿಯಾಗಿದ್ದು, ಇಂದಿನ ಸಮಾಜ ಎದುರಿಸುತ್ತಿರುವ ಮಾನಸಿಕ ಅಶಾಂತಿ, ಸಾಮಾಜಿಕ ತಲ್ಲಣಗಳು ಹಾಗೂ ಕುಟುಂಬ ವ್ಯವಸ್ಥೆಯಲ್ಲಿನ ಮೌಲ್ಯಗಳ ಕುಸಿತಕ್ಕೆ ವಚನ ಸಂಸ್ಕೃತಿಯ ಬದುಕಿನ ತತ್ವಗಳು ಶಾಶ್ವತ ಪರಿಹಾರ ನೀಡಬಲ್ಲವು ಎಂದು ನಿವೃತ್ತ ಪ್ರಾಂಶುಪಾಲರಾದ ಜಿ. ಎನ್. ಅನುಸೂಯ ಅಭಿಪ್ರಾಯಪಟ್ಟರು.ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಾಸನ ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ಆಗಸ್ಟ್ ತಿಂಗಳ “ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ತಿಂಗಳ ತಿರುಳು” ಕಾರ್ಯಕ್ರಮವು ಬಳಗದ ಅಧ್ಯಕ್ಷೆ ರಾಜೇಶ್ವರಿ ಹುಲ್ಲೇನಹಳ್ಳಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಲೇಖಕಿ ಸ. ವೆಂ. ಪೂರ್ಣಿಮಾ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ ಸುಶೀಲಾ ಸೋಮಶೇಖರ್‌ ಅವರ "ವಚನ ಸಂಸ್ಕೃತಿ ಪ್ರಸ್ತುತ ತಲ್ಲಣಗಳು " ಕೃತಿಯನ್ನು ಪರಿಚಯಿಸಿದ ಜಿ. ಎನ್. ಅನುಸೂಯಾ, ೧೨ನೇ ಶತಮಾನದ ವಚನ ಸಾಹಿತ್ಯವು ಸಮಾಜದ ಸಾಮಾನ್ಯ ವ್ಯಕ್ತಿಗೂ ಆಧ್ಯಾತ್ಮಿಕ ಸಾಧನೆಯ ದಾರಿಯನ್ನು ತೆರೆದ ಮಹತ್ವದ ಸಾಹಿತ್ಯ ಚಳವಳಿಯಾಗಿದೆ ಎಂದರು. ವಚನಗಳು ಕಾಯಕ, ದಾಸೋಹ, ಸಮಾನತೆ, ಸರಳ ಜೀವನ, ಸದಾಚಾರ ಹಾಗೂ ಮಾನವೀಯ ಮೌಲ್ಯಗಳನ್ನು ಸಾರಿದ್ದು, ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದ ಅಪೂರ್ವ ಸಾಹಿತ್ಯ ಪರಂಪರೆಯಾಗಿದೆ. ಇಂದಿನ ಸಮಾಜದಲ್ಲಿ ಹೆಚ್ಚುತ್ತಿರುವ ದ್ವೇಷ, ಅಸಹಿಷ್ಣುತೆ, ಕುಟುಂಬಗಳಲ್ಲಿನ ಸಾಮರಸ್ಯದ ಕೊರತೆ, ಮಾನಸಿಕ ಒತ್ತಡ ಹಾಗೂ ಸಾಮಾಜಿಕ ತಲ್ಲಣಗಳಿಗೆ ವಚನ ಸಂಸ್ಕೃತಿಯ ತತ್ವಗಳನ್ನು ಅಳವಡಿಸಿಕೊಂಡರೆ ಆರೋಗ್ಯಕರ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.ಸುಶೀಲಾ ಸೋಮಶೇಖರ್‌ ಅವರ ಕೃತಿಯು ವೇದ, ಉಪನಿಷತ್ತು, ಪುರಾಣ ಹಾಗೂ ವಚನ ಸಾಹಿತ್ಯದ ತಾತ್ವಿಕ ನೆಲೆಗಳನ್ನು ಸಮಕಾಲೀನ ಬದುಕಿನೊಂದಿಗೆ ಸಮೀಕರಿಸಿ ವಿಶ್ಲೇಷಿಸಿರುವ ಮಹತ್ವದ ಕೃತಿಯಾಗಿದೆ. ಚೈತ್ರ ಪ್ರಕಾಶನದಿಂದ ಪ್ರಕಟಗೊಂಡಿರುವ ಈ ಕೃತಿಗೆ ಡಾ. ವಿಜಿ ಪ್ರಭಾಕರ್‌ ಮುನ್ನುಡಿ ಹಾಗೂ ಐಎಎಸ್ ಅಧಿಕಾರಿ ಡಾ. ಸಿ. ಸೋಮಶೇಖರ್‌ ಬೆನ್ನುಡಿ ಬರೆದಿದ್ದಾರೆ ಎಂದು ವಿವರಿಸಿದರು. ಇದಕ್ಕೂ ಮೊದಲು ಉಪನ್ಯಾಸಕಿ ಹಾಗೂ ಲೇಖಕಿ ಬಿ.ಎಂ. ಭಾರತಿ ಹಾದಿಗೆ "ಶಿಲ್ಪಶಾಸ್ತ್ರ ಮತ್ತು ಶಾಸನಶಾಸ್ತ್ರಗಳ ಅಧ್ಯಯನಕ್ಕೆ ಸ್ಫೂರ್ತಿ ಸ್ತ್ರೀ " ವಿಷಯದ ಕುರಿತು ಉಪನ್ಯಾಸ ನೀಡಿ, ಇತಿಹಾಸದಲ್ಲಿ ಮಹಿಳೆಯರ ಹೋರಾಟ, ತ್ಯಾಗ ಮತ್ತು ಸಾಮಾಜಿಕ ಪರಿವರ್ತನೆಯ ಪಾತ್ರವನ್ನು ವಿಶ್ಲೇಷಿಸಿದರು. ಆಗಸ್ಟ್ ತಿಂಗಳು ಮಹಿಳಾ ಇತಿಹಾಸದಲ್ಲಿ ವಿಶೇಷ ಮಹತ್ವ ಪಡೆದಿದ್ದು, ೧೯೧೦ರಲ್ಲಿ ಡೆನ್ಮಾರ್ಕ್‌ನ ಕೋಪನ್‌ಹೇಗನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಮಹಿಳಾ ಸಮ್ಮೇಳನದಲ್ಲಿ ಹೆರಿಗೆ ರಜೆ, ಆರೋಗ್ಯ ವಿಮೆ, ಮಹಿಳೆಯರ ಮತದಾನದ ಹಕ್ಕು, ಎಂಟು ಗಂಟೆಗಳ ದುಡಿಮೆ ಹಾಗೂ ಲಿಂಗ ಸಮಾನತೆಯ ಪರ ಘೋಷಣೆಗಳು ಮೊಳಗಿದವು ಎಂದು ಹೇಳಿದರು. ಆಗಸ್ಟ್ ೧ರಂದು ಆಚರಿಸುವ ವಿಶ್ವ ಸ್ತನ್ಯಪಾನ ದಿನದ ಮಹತ್ವ, ೧೯೪೨ರ ಭಾರತ ಬಿಡಿ ಚಳವಳಿಯಲ್ಲಿ ಮಹಿಳೆಯರ ಸಕ್ರಿಯ ಪಾಲ್ಗೊಳ್ಳುವಿಕೆ, ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಿಳೆಯರ ತ್ಯಾಗ ಹಾಗೂ ಸ್ವಾಮಿ ವಿವೇಕಾನಂದರ ಮೈಸೂರು ಭೇಟಿಯಂತಹ ಆಗಸ್ಟ್ ತಿಂಗಳ ಐತಿಹಾಸಿಕ ಘಟನೆಗಳನ್ನು ಅವರು ಸ್ಮರಿಸಿದರು. ಸಮಾಜದ ಒಳಿತಿಗಾಗಿ ಬದುಕನ್ನು ಸಮರ್ಪಿಸಿದ ಅನೇಕ ವೀರ ಮಹಿಳೆಯರ ಸಾಧನೆ ಇಂದಿನ ಪೀಳಿಗೆಗೆ ಸ್ಫೂರ್ತಿಯಾಗಿದೆ ಎಂದು ಹೇಳಿದರು. ಕೃತಿಕಾರ್ತಿ ಸುಶೀಲಾ ಸೋಮಶೇಖರ್‌ ಮಾತನಾಡಿ, ಒಂದು ಸಾಹಿತ್ಯ ಕಾರ್ಯಕ್ರಮದಲ್ಲಿ ತಾವು ಮಾಡಿದ ಭಾಷಣವೇ ಈ ಕೃತಿ ರಚನೆಗೆ ಪ್ರೇರಣೆಯಾಯಿತು. ಒಂದು ವಿಚಾರ ಅಥವಾ ಒಂದು ಮಾತು ಸಹ ಸಾಹಿತ್ಯ ಕೃತಿಯ ಜನ್ಮಕ್ಕೆ ಕಾರಣವಾಗಬಹುದು ಎಂದು ತಿಳಿಸಿದರು.ಅಧ್ಯಕ್ಷತೆ ವಹಿಸಿದ್ದ ರಾಜೇಶ್ವರಿ ಹುಲ್ಲೇನಹಳ್ಳಿ ಮಾತನಾಡಿ, ಮಹಿಳೆಯರ ತ್ಯಾಗ, ಲೋಕೋಪಕಾರ ಮತ್ತು ಬಲಿದಾನಗಳು ಇತಿಹಾಸದಲ್ಲಿ ಅಮರವಾಗಿವೆ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಮಹಾಸತಿಯರ ಸ್ಮರಣಾರ್ಥ ಪೂಜಿಸಲ್ಪಡುವ ಮಾಸ್ತಿಕಲ್ಲುಗಳು ಮಹಿಳೆಯರ ಮಹತ್ವಕ್ಕೆ ಸಾಕ್ಷಿಯಾಗಿವೆ. ಸಾಹಿತ್ಯ ಸಮಾಜವನ್ನು ರೂಪಿಸುವ ಶಕ್ತಿಯಾಗಿದ್ದು, ಒಂದು ಪದವೂ ಒಬ್ಬ ಸಾಹಿತಿಗೆ ಹೊಸ ಕೃತಿ ಬರೆಯುವ ಸ್ಫೂರ್ತಿಯಾಗಬಲ್ಲದು ಎಂದರು. ಕಾರ್ಯಕ್ರಮದಲ್ಲಿ ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ. ಶಿವಪ್ರಸಾದ್, ಹಿರಿಯ ಹಿನ್ನೆಲೆ ಗಾಯಕಿ ಎಸ್. ಜಾನಕಿ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಬಳಿಕ ಲೇಖಕಿಯರು ಕವನ, ಲೇಖನ, ಕಥೆ ಸೇರಿದಂತೆ ವಿವಿಧ ಸಾಹಿತ್ಯ ಪ್ರಕಾರಗಳ ತಮ್ಮ ಸ್ವರಚಿತ ಕೃತಿಗಳನ್ನು ವಾಚಿಸಿದರು. ಸ. ವೆಂ. ಪೂರ್ಣಿಮಾ ಅವರು ಎಸ್. ಜಾನಕಿ ಅವರ ಜನಪ್ರಿಯ ಗೀತೆಯನ್ನು ಹಾಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.ಮಂಜುಳಾ ಕುಮಾರಸ್ವಾಮಿ ಪ್ರಾರ್ಥನೆ ನೆರವೇರಿಸಿದರು. ವನಜಾ ಸುರೇಶ್ ವಂದನಾರ್ಪಣೆ ಸಲ್ಲಿಸಿದರು. ಗಿರಿಜಾಂಬಾ ಕಾರ್ಯಕ್ರಮವನ್ನು ನಿರೂಪಿಸಿದರು. ಸಾಹಿತ್ಯಾಸಕ್ತರು, ಲೇಖಕಿಯರು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.