ಸಾರಾಂಶ
ಹರಳಹಳ್ಳಿಯಲ್ಲಿ ಗ್ರಾಪಂ ನೂತನ ಕಟ್ಟಡ ಉದ್ಘಾಟನೆ ಸಮಾರಂಭದಲ್ಲಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಸಲಹೆ
- - - ಕನ್ನಡಪ್ರಭ ವಾರ್ತೆ ಹೊನ್ನಾಳಿಗ್ರಾಮಾಡಳಿತ ನಡೆಸುವವರು ಇ-ಸ್ವತ್ತು, ಶೌಚಾಲಯ, ಚರಂಡಿ, ಬೀದಿದೀಪ, ಗ್ರಾಮ ಸ್ವಚ್ಛತೆಯಂತಹ ಸಣ್ಣಪುಟ್ಟ ಕೆಲಸಗಳಿಗೂ ಶಾಸಕರು, ಸಂಸದರ ಕಡೆಗೆ ವ್ಯಕ್ತಿಗಳನ್ನು ಕಳಿಸಿಕೊಡಬಾರದು. ಇವುಗಳೆಲ್ಲವನ್ನು ಪಿಡಿಒ, ಗ್ರಾ.ಪಂ. ಕಾರ್ಯದರ್ಶಿಗಳು ತಮ್ಮ ಹಂತದಲ್ಲಿಯೇ ಬಗೆಹರಿಸಬೇಕು. ಆಗ ಮಾತ್ರ ಗ್ರಾಪಂ ಆಡಳಿತ ಸಮರ್ಪಕವಾಗಿದೆ ಎಂದರ್ಥ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ತಾಕೀತು ಮಾಡಿದರು.
ಶುಕ್ರವಾರ ತಾಲೂಕಿನ ಹರಳಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ₹60 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ಗ್ರಾಮ ಪಂಚಾಯಿತಿ ನೂತನ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಶಾಸಕರು, ಸಂಸದರಿಂದ ರಸ್ತೆ ಅಭಿವೃದ್ಧಿಗೆ, ಶಾಲಾ ಕಟ್ಟಡಗಳಿಗೆ, ದೊಡ್ಡ ದೊಡ್ಡ ಯೋಜನೆಗಳಿಗೆ ಬೇಡಿಕೆ ಸಲ್ಲಿಸಿದರೆ ಅದಕ್ಕೆ ಒಂದು ಅರ್ಥವಿರುತ್ತದೆ ಎಂದರು.ಹರಳಹಳ್ಳಿ ಗ್ರಾಪಂ ನೂತನ ಕಟ್ಟಡದಲ್ಲಿ ಅಂಚೆ ಕಚೇರಿ, ಗ್ರಂಥಾಲಯ ಸೇವೆ, ಗ್ರಾಮ ಒನ್ ಸೇವೆಯಂತಹ ಎಲ್ಲ ಸೇವೆಗಳು ಸಿಗುವಂತೆ ಯೋಜನೆ ರೂಪಿಸಿ, ಅದರಂತೆ ಕಟ್ಟಡ ನಿರ್ಮಾಣ ಮಾಡಿದ್ದು ನಿಜಕ್ಕೂ ಶ್ಲಾಘನೀಯ. ದಾವಣಗೆರೆ ಜಿಲ್ಲೆಯಲ್ಲಿಯೇ ಇದೊಂದು ಮಾದರಿ ಗ್ರಾ.ಪಂ. ಕಟ್ಟಡ ಎಂದರು.
ತಾಲೂಕಿನಲ್ಲಿ ಮಹಿಳೆಯರಿಗೆ ಉದ್ಯೋಗ ಕೊಡುವ ದೃಷ್ಠಿಯಿಂದ ಗಾರ್ಮೆಂಟ್ ಫ್ಯಾಕ್ಟರಿ ಸ್ಥಾಪನೆಗೆ ಚಿಂತನೆ ನಡೆಸಲಾಗಿದೆ. ಜಿಲ್ಲೆಯ ಸಾರಥಿ ಬಳಿ "ಐಟಿ ಬಿಟಿ " ಕಂಪನಿ ಸ್ಥಾಪನೆಗೆ ಸಂಬಂಧಪಟ್ಟ ಕೇಂದ್ರ ಸಚಿವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸೂರಗೊಂಡನಕೊಪ್ಪದಲ್ಲಿ ರೈಲ್ವೆ ನಿಲ್ದಾಣ ಕುರಿತು ಈಗಾಗಲೇ ಸರ್ವೇ ಸಮೀಕ್ಷೆ ಕೂಡ ನಡೆದಿದೆ ಎಂದರು.ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ಘನತ್ಯಾಜ್ಯ ವಿಲೇವಾರಿ ಘಟಕ ನಿಧಾನವಾಗಿ ಸ್ಥಗಿತಗೊಳ್ಳುತ್ತಿವೆ. ತ್ಯಾಜ್ಯ ವಿವೇವಾರಿಗಾಗಿ ತರಿಸಿದ ಆಟೋ ವಾಹನಗಳು ಕೆಲಸವಿಲ್ಲದೇ ಹಾಳಾಗುತ್ತಿವೆ. ತ್ಯಾಜ್ಯ ವಿವೇವಾರಿ ಘಟಕದ ಮಹಿಳೆಯರಿಗೆ ಕೆಲಸವಿಲ್ಲದೇ ಇರುವುದರಿಂದ ಅವರಿಗೆ ಕೊಡಬೇಕಾದ ವಂತಿಕೆಯನ್ನು ಜನರು ಕೊಡುತ್ತಿಲ್ಲ. ಆದ್ದರಿಂದ ವಿಧಾನ ಪರಿಷತ್ತು ಸದಸ್ಯರು ಪರಿಷತ್ತಿನಲ್ಲಿ ಚರ್ಚೆ ಮಾಡಿ, ಆ ಮಹಿಳೆಯರಿಗೆ ನೇರವಾಗಿ ವಂತಿಕೆ ಕೊಡುವಂತೆ ತೀರ್ಮಾನ ಕೈಗೊಳ್ಳಬೇಕು ಎಂದು ಸದಸ್ಯ ಡಿ.ಎಸ್. ಅರುಣ್ ಕುಮಾರ್ ಅವರಿಗೆ ಮನವಿ ನೀಡಿದರು.
ಸಂಸದರು ಗಾರ್ಮೆಂಟ್ ಘಟಕ ಮಂಜೂರು ಮಾಡಿಸಿಕೊಂಡು ಬಂದರೆ ತಾಲೂಕಿನಲ್ಲಿ 10 ಎಕರೆ ಜಮೀನು ಮಂಜೂರು ಮಾಡುತ್ತೇನೆ. ಗ್ರಾಮದಲ್ಲಿ ಜಗಜ್ಯೋತಿ ಬಸವೇಶ್ವರ ಸಮುದಾಯ ಭವನಕ್ಕೆ ₹10 ಲಕ್ಷ ಅನುದಾನ ಕೊಡುವುದಾಗಿ ಹೇಳಿದರು.ವಿಧಾನ ಪರಿಷತ್ತು ಸದಸ್ಯ ಡಿ.ಎಸ್. ಅರುಣ್‍ಕುಮಾರ್ ಮಾತನಾಡಿ, ಗ್ರಾ.ಪಂ.ಗಳು ಸ್ವಾವಲಂಬಿಗಳಾಗಬೇಕು. ಇತ್ತೀಚೆಗೆ ಗ್ರಾಪಂ ಅನುದಾನ ಕೂಡ ಕಡಿಮೆಯಾಗುತ್ತಿದೆ. ಈ ಬಗ್ಗೆ ಶಾಸಕರು ಗಮನಹರಿಸಬೇಕು. ನನ್ನ ಅನುದಾನದಡಿ ಹರಳಹಳ್ಳಿ ಗ್ರಾಪಂ ಕಟ್ಟಡಕ್ಕೆ ಮೇಲ್ಚಾವಣಿ ಶೀಟ್ ಹಾಕಿಸಿಕೊಡುವುದಾಗಿ ಹೇಳಿದರು.
ಜಿಪಂ ಮಾಜಿ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ಗ್ರಾಮ ಪಂಚಾಯಿತಿಗಳು ಜನರಿಗೆ ಮೂಲಸೌಲಭ್ಯಗಳನ್ನು ತುರ್ತಾಗಿ ಕಲ್ಪಿಸಬೇಕು. ಹೀಗಾದರೆ ದೇಶದ ಬಹುಪಾಲು ಸಮಸ್ಯೆಗೆ ಸ್ಥಳೀಯ ಆಡಳಿತದಿಂದಲೇ ಪರಿಹಾರ ಸಿಕ್ಕಂತಾಗುತ್ತದೆ. ಗೋಮಾಳವನ್ನು ರಕ್ಷಿಸುವ ಹೊಣೆಗಾರಿಕೆಯೂ ಗ್ರಾ.ಪಂ.ಗೆ ಸೇರಿದ್ದು, ಅದನ್ನು ಕಾಪಾಡಿಕೊಳ್ಳಬೇಕಾಗಿದೆ ಎಂದರು.ಜಿಪಂ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಸ್ವಾಗತ ಸಮಿತಿ ಅಧ್ಯಕ್ಷ ಎಚ್.ಬಿ. ಬೆನಕಪ್ಪ ಮಾತನಾಡಿದರು. ಪಿಡಿಒ ಎಂ.ವಿ. ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾ.ಪಂ. ಅಧ್ಯಕ್ಷೆ ಆಶಾ ಬಸವರಾಜ್, ಉಪಾಧ್ಯಕ್ಷೆ ಗಾಯಿತ್ರಿ ಸುರೇಶ್, ಸದಸ್ಯರಾದ ನಿರ್ಮಲ ವಿರೂಪಾಕ್ಷಪ್ಪ, ರಾಧ ನವೀನ್‍ಕುಮಾರ್, ಎಚ್.ಬಿ. ವೀರೇಶ್, ಒ.ಎಚ್. ವೆಂಕಟೇಶ್, ಕೆ.ಎನ್. ನಿಂಗಪ್ಪ, ಡಿ. ಹಾಲೇಶಪ್ಪ, ಸುನೀತ ರಾಜಪ್ಪ, ಎಚ್.ಡಿ. ವಿಜೇಂದ್ರಪ್ಪ, ಸಣ್ಣಕ್ಕಿ ಬಸವನಗೌಡ ಇತರರು ಉಪಸ್ಥಿತರಿದ್ದರು.
- - - -8ಎಚ್‌ಎಎಲ್.ಐ1:ಸಮಾರಂಭವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಉದ್ಘಾಟಿಸಿದರು.