ಇನ್ನು ಕ್ಷಮೆ ಇಲ್ಲ. ನಾಗರಿಕರು ನಮ್ಮ ಗಮನಕ್ಕೆ ತಂದ ಸಮಸ್ಯೆಗಳನ್ನು ಮಳೆಗಾಲ ಆರಂಭವಾಗುವುದರೊಳಗೆ ಸರಿಪಡಿಸಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಇನ್ನು ಕ್ಷಮೆ ಇಲ್ಲ. ನಾಗರಿಕರು ನಮ್ಮ ಗಮನಕ್ಕೆ ತಂದ ಸಮಸ್ಯೆಗಳನ್ನು ಮಳೆಗಾಲ ಆರಂಭವಾಗುವುದರೊಳಗೆ ಸರಿಪಡಿಸಬೇಕು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಶಾಸಕ ಎಸ್.ಎನ್.ಚನ್ನಬಸಪ್ಪ ಸೂಚಿಸಿದರು.

ನಗರದ ಶಾಸಕರ ಕಚೇರಿಯಲ್ಲಿ ಶುಕ್ರವಾರ ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ದೂರಿನ ಹಿನ್ನೆಲೆ ಮಹಾನಗರಪಾಲಿಕೆ, ಮೆಸ್ಕಾಂ, ಸ್ಮಾರ್ಟ್‌ಸಿಟಿ, ಪಿಡಬ್ಲ್ಯೂಡಿ, ಒಳಚರಂಡಿ, ಕುಡಿಯುವ ನೀರಿನ ಸರಬರಾಜು ಮೊದಲಾದ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಯುಜಿ ಕೇಬಲ್ ಕಾಮಗಾರಿಗೆ ಸಂಬಂಧಿಸಿದ ಇನ್ನೂ 849 ವಿದ್ಯುತ್ ಕಂಬಗಳನ್ನು ತೆಗೆಯುವುದು ಬಾಕಿಯಿದ್ದು, ಇನ್ನು ನಾಲ್ಕು ತಿಂಗಳಲ್ಲಿ ಕಾಮಗಾರಿ ಮುಗಿಸಲಾಗುವುದು. ಈ ಕುರಿತಂತೆ ಎಸ್ಟಿಮೇಟ್ ಆಗಿದೆ. ಭೂಮಿ ಅಗೆದರೆ ಸಾರ್ವಜನಿಕರಿಂದ ಆಕ್ಷೇಪ ವ್ಯಕ್ತವಾಗುತ್ತದೆ. ಈ ಹಿನ್ನಲೆಯಲ್ಲಿ ಆ ಕಾಮಗಾರಿ ವಿಳಂಬವಾಗುತ್ತಿದೆ ಎಂದು ಸ್ಮಾರ್ಟ್‌ಸಿಟಿ ಮತ್ತು ಮೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.

ನಾವು ಇನ್ನೂ ಸಮಯ ಕೊಡಲಾಗುವುದಿಲ್ಲ. ಗುತ್ತಿಗೆದಾರರನ್ನು ಜವಾಬ್ದಾರರನ್ನಾಗಿ ಮಾಡಿ. ಮಳೆಗಾಲ ಆರಂಭವಾಗುತ್ತಿದೆ. ಅಷ್ಟರೊಳಗೆ ಕಾಮಗಾರಿ ಮುಗಿಸಿ ಎಂದು ನಾಗರಿಕ ಹಿತರಕ್ಷಣಾ ವೇದಿಕೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ವಿ.ವಸಂತ್‌ಕುಮಾರ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಆರು ಹೊಸ ಬಡಾವಣೆಗಳಲ್ಲಿ ಐದು ಕೋಟಿ ರುಪಾಯಿ ವೆಚ್ಚದಲ್ಲಿ ಯು.ಜಿ. ಕೇಬಲ್ ಅಳವಡಿಸಬೇಕಾಗಿತ್ತು. ಆದರೆ, ಅದು ಅಪೂರ್ಣವಾಗಿದೆ. ಬಸವನಗುಡಿಯಲ್ಲಿ ವಿದ್ಯುತ್ ಕಂಬ, ದೀಪ ಇದೆ, ಆದರೆ ದೀಪ ಹತ್ತುತ್ತಿಲ್ಲ. ತಿಲಕ್‌ನಗರದಲ್ಲಿ ಮರಕ್ಕೆ ಲೈನ್ ಎಳೆದಿದ್ದೀರಿ ಅಲ್ಲಿಯೂ ಕಾಮಗಾರಿ ಅಪೂರ್ಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಶಾಸಕರು, ಇ-ಶೌಚಾಲಯ ನಿರ್ಮಾಣವಾಗಿ ಮೂರ್‍ನಾಲ್ಕು ವರ್ಷಗಳು ಕಳೆದರೂ ಇನ್ನೂ ಬಳಕೆಗೆ ತೆರೆದುಕೊಂಡಿಲ್ಲ. ಆಗಲೇ ಅವು ದುರಸ್ತಿ ಹಂತಕ್ಕೆ ಬಂದಿದ್ದು ವಿಷಾದನೀಯ ಎಂದು ಅಸಮಾಧಾನ ವ್ಯಕ್ತಪಡಿಸಿದಾಗ, ಈಗಾಗಲೇ 18 ಇ-ಶೌಚಾಲಯಗಳನ್ನು ಗುರುತಿಸಲಾಗಿದ್ದು, ಅವುಗಳಲ್ಲಿ 14 ಉಪಯೋಗವಾಗುತ್ತಿವೆ ಎಂದು ಪೌರಾಯುಕ್ತ ಕೆ.ಮಾಯಣ್ಣ ಗೌಡ ಹೇಳಿದರು. ಕೇವಲ ಮಹಿಳೆಯರಿಗಷ್ಟೇ ಅಲ್ಲ ಪುರುಷರಿಗೂ ಉಚಿತ ಟಾಯ್‌ಲೆಟ್ ವ್ಯವಸ್ಥೆಯಾಗಬೇಕು ಎಂದು ಒಕ್ಕೂಟದ ಪದಾಧಿಕಾರಿಗಳು ಆಗ್ರಹಿಸಿದರು.

ಸ್ಮಾರ್ಟ್‌ಸಿಟಿಯಿಂದ ನಿರ್ಮಾಣವಾದ ಫುಟ್‌ಪಾತ್ ಮತ್ತು ರೇಲಿಂಗ್ಸ್ ದುರಸ್ತಿ ಬಗ್ಗೆ ಯಾವ ಬಾಬತ್ತಿನಿಂದ ಹಣ ವೆಚ್ಚ ಮಾಡಬೇಕು ಎಂಬುದರ ಬಗ್ಗೆ ಸರ್ಕಾರದಿಂದ ಇನ್ನೂ ಸ್ಪಷ್ಟತೆ ಬಂದಿಲ್ಲ ಎಂದು ಪೌರಾಯುಕ್ತರು ಸಭೆಯ ಗಮನಕ್ಕೆ ತಂದರು. ಲಕ್ಷ್ಮೀಟಾಕೀಸ್‌ನಿಂದ ಉಷಾ ನರ್ಸಿಂಗ್ ಹೋಂ ರಸ್ತೆಯಲ್ಲಿ ಬಲಗಡೆಯ ಫುಟ್‌ಪಾತ್ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಪಾದಚಾರಿಗಳಿಗೆ ಓಡಾಡದ ಸ್ಥಿತಿಯಾಗಿದೆ. ಗುತ್ತಿಗೆದಾರರಿಗೆ ನೋಟೀಸ್ ನೀಡಿ ಅದನ್ನು ಸರಿಪಡಿಸಬೇಕು. ಅಲ್ಲದೆ ಉಷಾನಸಿಂಗ್ ಹೋಂ ವೃತ್ತದಲ್ಲಿ ಫುಟ್‌ಪಾತ್ ಇಲ್ಲದೆ ಹೊಸ ರಸ್ತೆ ನಿರ್ಮಾಣವಾಗಿದ್ದು, ನಾಲ್ಕೂ ಕಡೆ ಫುಟ್‌ಪಾತ್ ನಿರ್ಮಿಸಬೇಕೆಂದು ಆಗ್ರಹಿಸಲಾಯಿತು.ಇ-ಖಾತೆಗೆ ಸಂಬಂಧಿಸಿದಂತೆ, ಎಸ್‌ಐಆರ್, ಗಣತಿ ಕೆಲಸಗಳಿಗೆ ಕಂದಾಯ ನಿರೀಕ್ಷಕರು ತೆರಳಿರುವುದರಿಂದ ಇ-ಖಾತಾ ನೀಡುವುದು ವಿಳಂಬವಾಗುತ್ತಿದೆ. 1.25 ಲಕ್ಷ ಖಾತಾಗಳಿಗೆ ಅರ್ಜಿ ಸ್ವೀಕರಿಸಲಾಗಿದೆ. ಇಲ್ಲಿಯವರೆಗೆ 30 ಸಾವಿರ ಖಾತಾಗಳನ್ನು ನೀಡಲಾಗಿದೆ. ಈ ಕುರಿತಂತೆ ಆಯುಕ್ತರ ಸಪ್ತಾಹಿಕ ಖಾತಾ ಅದಾಲತ್ ಬಳಸಿಕೊಳ್ಳಬೇಕು ಎಂದು ಆಯುಕ್ತ ಮಾಯಣ್ಣಗೌಡ ವಿನಂತಿಸಿದರು.

ಬಿ.ಎಚ್.ರಸ್ತೆಯಲ್ಲಿರುವ ತುಂಗಾನದಿಯ ಹಳೆಯ ಸೇತುವೆ ಇರುವ ಜಾಗದಲ್ಲಿ ಹೊಸಸೇತುವೆ ನಿರ್ಮಾಣಕ್ಕೆ ಈಗಾಗಲೇ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಜೊತೆ ಚರ್ಚಿಸಿದ್ದು, ಪ್ರಸ್ತಾವನೆ ಸಲ್ಲಿಸುವಂತೆ ಅವರು ತಿಳಿಸಿದ್ದಾರೆ. ಸಧ್ಯದಲ್ಲಿಯೇ ಹಳೆಸೇತುವೆಯ ಜಾಗದಲ್ಲಿ ಹೊಸಸೇತುವೆ ತಲೆ ಎತ್ತಲಿದೆ ಎಂದು ಶಾಸಕ ಎಸ್‌.ಎನ್‌.ಚನ್ನಬಸಪ್ಪ ತಿಳಿಸಿದರು.

ಪೌರಾಯುಕ್ತ ಕೆ.ಮಾಯಣ್ಣಗೌಡ, ಮೆಸ್ಕಾಂನ ವೀರೇಂದ್ರ, ಇಲೆಕ್ಟ್ರಿಕ್ ಎಇ ತೇಜಪ್ರಸಾದ್, ಅಧಿಕಾರಿಗಳಾದ ಪುಷ್ಪಾವತಿ, ಜೀವನ್, ನಾಗರಿಕ ಹಿತರಕ್ಷಣಾ ವೇದಿಕೆಯ ಒಕ್ಕೂಟದ ಡಾ.ಸತೀಶ್‌ಕುಮಾರ್ ಶೆಟ್ಟಿ, ಡಾ.ಬಾಲಕೃಷ್ಣ ಹೆಗಡೆ, ನಾರಾಯಣಮೂರ್ತಿ, ಜನಮೇಜಿರಾವ್, ಚನ್ನವೀರ ಗಾಮನಗಟ್ಟಿ ಮತ್ತಿತರರು ಇದ್ದರು.