ಸಾರಾಂಶ
ಕನ್ನಡಪ್ರಭ ವಾರ್ತೆ ಹುಮನಾಬಾದ್
ಪಟ್ಟಣದ ತಹಸೀಲ್ ಕಚೇರಿಯಲ್ಲಿ ಜಿಲ್ಲಾಡಳಿತದಿಂದ ಜನಸ್ಪಂದನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ದೂರುಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು, ಒಟ್ಟು 57 ಅರ್ಜಿಗಳನ್ನು ಸ್ವಿಕರಿಸಿದ ಜಿಲ್ಲಾಧಿಕಾರಿಗಳು ತಹಶೀಲ್ದಾರ್ ಸ್ಥಳೀಯ ಹಂತದಲ್ಲಿ ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಸೂಚಿಸಿದರು.ಅರ್ಜಿಗಳಿಗೆ ಒಂದು ವಾರ ಅಥವಾ ಹದಿನೈದು ದಿನದಲ್ಲಿ ಪರಿಹಾರ ನೀಡಬೇಕು. ನಾನೂ ಸಹ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಹಾರಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಯಾವ ಕ್ರಮ ಕೈಗೊಂಡಿದ್ದಾರೆ ಕುರಿತು ಪರಿಶೀಲನೆ ನಡೆಸುತ್ತೇನೆ ಎಂದು ಹೇಳಿದರು.
ಮಾಣಿಕನಗರ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಗಡವಂತಿ ಗ್ರಾಮಕ್ಕೆ ಹೊಂದಿಕೊಂಡಿರುವ ಗೌಠಾಣ ಜಮೀನಿನಲ್ಲಿ ಅನಧಿಕೃತವಾಗಿ ಲೇಔಟ್ ನಿರ್ಮಿಸಿ ನಿವೇಶನ ಮಾರಾಟ ಮಾಡಲಾಗುತ್ತಿದೆ ಎಂದು ಮಾಣಿಕನಗರ ಗ್ರಾಪಂ ಸದಸ್ಯ ದಿಲೀಪಕುಮಾರ ಮರಪಳ್ಳಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದರು.ಬಸವಕಲ್ಯಾಣ ಆಯುಕ್ತರಿಗೂ ದೂರು ನೀಡಿದಾಗ ಪರಿಶೀಲಿಸಲಾಗುವುದು ಎಂದು ಹಿಂಬರಹ ನೀಡಲಾಗಿದೆ. ಆದರೆ ಕಾರ್ಯರೂಪಕ್ಕೆ ಇಲ್ಲಿಯವರೆಗೂ ಬಂದಿಲ್ಲ ಎಂದು ತಿಳಿಸಿದಾಗ ಸರ್ವೆ ಇಲಾಖೆ ಅಧಿಕಾರಿಗಳು ಕೂಡಲೇ ಸರ್ವೆ ಕಾರ್ಯ ನಡೆಸಿ, ಗೌಠಾಣಾ ಜಮೀನು ಎಷ್ಟು ಎನ್‌ಎ ಲೇಔಟ್ ಇರುವ ಭೂಮಿ ಕುರಿತು ಪರಿಶೀಲನೆ ನಡೆಸಿ ತಹಸೀಲ್ದಾರ್ ಮೂಲಕ ತಕ್ಷಣ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಸೂಚಿಸಿದರು.
ಪಟ್ಟಣದ ತಾಲೂಕು ಆಡಳಿತ ಕಚೇರಿಯಲ್ಲಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಪಂ ಸಿಇಒ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್‌ಎಲ್ ಅವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವ ಜನಸ್ಪಂದನ ಕಾರ್ಯಕ್ರಮದ ಮೂಲಕ ವಿವಿಧ ಇಲಾಖೆಯ ಅಹವಾಲು ಸ್ವೀಕರಿಸಲಾಯಿತು.ಪುರಸಭೆ ಸದಸ್ಯ ರಮೇಶ ಕಲ್ಲೂರ ಯುಜಿಡಿ ಕಾಮಗಾರಿ ಇಂದಿಗೂ ಪೂರ್ಣಗೊಂಡಿಲ್ಲ. 28 ಕೋಟಿ ರು. ಮಣ್ಣುಪಾಲು ಮಾಡಿದವರ ವಿರುದ್ಧ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಸಮಗ್ರ ತನಿಖೆ ನಡೆಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಪತ್ರದ ಮೂಲಕ ಆಗ್ರಹಿಸಿದರು.
ಸಾಮಾಜಿಕ ಕಾರ್ಯಕರ್ತರಾದ ಸೈಯದ್ ಯಾಸೀನ್ ಅಲಿ ಹಾಗೂ ಪ್ರಶಾಂತ ಒಳಖಂಡಿ ತಾಲೂಕಿನಲ್ಲಿ ಆಡಳಿತ ವೈಫಲ್ಯ ಕುರಿತು ಡಿ.28ರಂದು ಶಾಸಕರ ಡಾ. ಸಿದ್ದು ಪಾಟೀಲ್ ಅವರ ಮನೆ ಎದುರಿಗೆ ಪ್ರತಿಭಟನೆ ಮಾಡುವ ಕುರಿತು ಮಾಹಿತಿ ನೀಡಿದರು. ಇದಕ್ಕೆ ಜಿಲ್ಲಾಧಿಕಾರಿಗಳು ಮಾತನಾಡಿ, ಯಾರ ಮನೆ ಎದುರಿಗೂ ಪ್ರತಿಭಟನೆ ಮಾಡಲು ಅವಕಾಶ ಇರುವುದಿಲ್ಲ. ಯಾವುದೇ ಸಮಸ್ಯೆಗಳು ಇದ್ದರೆ ಧರಣಿ ನಡೆಸಬೇಕಾದರೆ ತಹಸೀಲ್ದಾರ್ ಕಚೇರಿ ಎದುರಿಗೆ ಮಾಡಬಹುದು ತಾಲೂಕು ಆಡಳಿತ ಸ್ಪಂದಿಸುವ ಕೆಲಸ ಮಾಡುತ್ತದೆ ಎಂದರು.ಒಟ್ಟು 57 ಅರ್ಜಿ ಸ್ವೀಕಾರ: ಜಿಲ್ಲಾಡಳಿತದಿಂದ ಸಾರ್ವಜನಿಕರ ದೂರುಗಳಿಗೆ ಉತ್ತಮ ಸ್ಪಂದನೆ ದೊರೆತಿದ್ದು, ತಹಸೀಲ್ದಾರ್ ಕಚೇರಿ 20, ತಾಪಂ 12, ಭೂ ದಾಖಲೆಗಳ ಇಲಾಖೆ 5, ಪುರಸಭೆ 3, ಅರಣ್ಯ ಇಲಾಖೆ 2, ಕೃಷಿ ಇಲಾಖೆ 1, ಸಾರಿಗೆ ಇಲಾಖೆ 2, ಆಹಾರ ಇಲಾಖೆ 1, ಯೋಜನಾ ನಿರ್ದೇಶಕರು ಬೀದರ್ 2, ಜಿಲ್ಲಾಧಿಕಾರಿಗಳ ಕಚೇರಿ 2, ಪೊಲೀಸ್ ಇಲಾಖೆ 2, ಎಸಿ ಕಚೇರಿ 3, ಸಮಾಜ ಕಲ್ಯಾಣ ಇಲಾಖೆ 2 ಹೀಗೆ ಒಟ್ಟು 57 ಅರ್ಜಿಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ, ತಹಸೀಲ್ದಾರ್‌ಗಳು ಸ್ಥಳೀಯ ಹಂತದಲ್ಲಿ ಸಮಸ್ಯೆಗಳಿಗೆ ಪರಿಹಾರಕ್ಕೆ ಕ್ರಮವಹಿಸಬೇಕು ಎಂದರು.
ಮುಂದಿನ ಬಾರಿ ನಡೆಯುವ ಜನಸ್ಪಂದನ ಕಾರ್ಯಕ್ರಮದಲ್ಲಿ ಸಮಸ್ಯೆಗಳ ಸಂಖ್ಯೆ ಇಳಿಮುಖವಾಗಬೇಕು. ಇಲ್ಲಿಗೆ ಬಂದಿರುವ ಬಹುತೇಕ ಅರ್ಜಿಗಳು ತಾಲೂಕು ಮಟ್ಟದ ಹಂತದಲ್ಲಿ ಪರಿಹಾರ ನೀಡುವಂತಹ ಅರ್ಜಿಗಳಾಗಿದ್ದು, ಸ್ಥಳೀಯ ಹಂತದಲ್ಲಿ ಪರಿಹಾರಕ್ಕೆ ಅಧಿಕಾರಿಗಳು ಮುಂದಾಗಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಜಿಪಂ ಸಿಇಒ ಶಿಲ್ಪಾ ಎಂ, ತಹಸೀಲ್ದಾರ ಅಂಜುಮ್ ತಬಸುಮ್, ಬಸವಕಲ್ಯಾಣ ಸಹಾಯಕ ಆಯುಕ್ತರಾದ ಪ್ರಕಾಶ ಕೆ, ಡಿವೈಎಸ್‌ಪಿ ಜೆಎಸ್ ನ್ಯಾಮೇಗೌಡರ, ಸಿಪಿಐ ಗುರುಪಾಟೀಲ್, ತಹಸೀಲ್ದಾರ್ ಮಂಜುನಾಥ ಪಾಂಚಾಳ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.