ಸಾರಾಂಶ
ಹೂವಿನಹಡಗಲಿ: ಇಲ್ಲಿನ ಪಂಚಮಸಾಲಿ ಸಮುದಾಯ ಭವನದಲ್ಲಿ ಮಂಗಳವಾರ ಜಿಲ್ಲಾಡಳಿತ, ತಾಲೂಕು ಆಡಳಿತ ಆಯೋಜಿದ್ದ ಜನಸ್ಪಂದನ ಕಾರ್ಯಕ್ರಮಕ್ಕೆ ಶಾಸಕ ಕೃಷ್ಣನಾಯ್ಕ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರ ಜನ ಸ್ಪಂದನದಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಸಮಸ್ಯೆಗಳಿಗೆ ಸ್ಥಳದಲ್ಲೇ ಸೂಕ್ತ ಪರಿಹಾರ ನೀಡುವಂತಹ ಉತ್ತಮ ವೇದಿಕೆಯಾಗಿದೆ. ಇದರ ಉಪಯೋಗವನ್ನು ಜನ ಸದುಪಯೋಗ ಪಡಿಸಿಕೊಳ್ಳಬೇಕಿದೆ ಎಂದರು.ಗ್ರಾಮೀಣ ಮಟ್ಟದಲ್ಲಿ ಅತಿ ಹೆಚ್ಚು ಸಮಸ್ಯೆಗಳಿವೆ. ಅವುಗಳ ಪರಿಹಾರಕ್ಕೆ ಆಯಾ ಗ್ರಾಪಂ ಅಧಿಕಾರಿಗಳು ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ. ಈ ಕುರಿತು ಬಹಳ ದೂರುಗಳಿವೆ. ಜಿಲ್ಲಾ ಮಟ್ಟದ ಅಧಿಕಾರಿಗಳು ಅವರಿಗೆ ಸೂಕ್ತ ಮಾರ್ಗದರ್ಶನ ನೀಡಿ, ಜನರ ಕೆಲಸ ಮಾಡುವಂತೆ ಸಲಹೆ ನೀಡಬೇಕೆಂದು ಹೇಳಿದರು.
ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮಾತನಾಡಿ, ಸರ್ಕಾರದ ನಿರ್ದೇಶನದಂತೆ ರಾಜ್ಯದಲ್ಲಿ ಜನ ಸ್ಪಂದನ ಕಾರ್ಯಕ್ರಮ ನಡೆಯುತ್ತಿದೆ. ಜನರಿಂದ ಉತ್ತಮ ಸ್ಪಂದನೆ ಇದ್ದು, ವಿವಿಧ ಇಲಾಖೆಗಳ ಅರ್ಜಿಗಳು ಸಲ್ಲಿಕೆಯಾಗಿವೆ. ಜನರ ಸಮಸ್ಯೆಗಳಿಗೆ ಸ್ಥಳದಲ್ಲೇ ಅಧಿಕಾರಿಗಳ ಮುಂದೆ ಬಗೆಹರಿಸುವಂತಹ ಕೆಲಸವಾಗುತ್ತಿದೆ ಎಂದರು.ಕಂದಾಯ ಇಲಾಖೆಗೆ ಸಂಬಂಧಪಟ್ಟಂತೆ ಮುಖ್ಯವಾಗಿ ಹಕ್ಕುಪತ್ರ ನೀಡಿರುವ ಕುರಿತು ಪತ್ರಗಳು ಜನರ ಬಳಿ ಇವೆ. ಆದರೆ ಮೂಲ ದಾಖಲಾತಿ, ಇನ್ನಿತರ ದಾಖಲಾತಿಗಳು ಸಿಗುತ್ತಿಲ್ಲ. ನಮ್ಮ ಸಮಸ್ಯೆ ಬಗೆ ಹರಿಸಿಕೊಡಿ ಎಂದು ಹತ್ತಾರು ಅರ್ಜಿಗಳು ಬಂದಿವೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.
ಹ್ಯಾರಡ ಗ್ರಾಮದ ಮಲಿಯಮ್ಮನ ಕೆರೆಯಲ್ಲಿ ಸಾಕಷ್ಟು ಜನ ಸರ್ಕಾರಿ ಭೂಮಿ ಒತ್ತುವರಿ ಮಾಡಿ, ಉಳುಮೆ ಮಾಡುತ್ತಿದ್ದಾರೆ. ಅದನ್ನು ತೆರವು ಮಾಡಬೇಕೆಂದು ಗ್ರಾಮಸ್ಥರು ಅರ್ಜಿ ಸಲ್ಲಿಸಿದ್ದರು.ಹ್ಯಾರಡ ಕೆರೆಯು 161 ಎಕರೆ ಜಮೀನು ಇದೆ. ಇದು ಪಹಣಿಯಲ್ಲಿ ಸರ್ಕಾರ ಎಂದು ನಮೂದಾಗಿದೆ. ಇದನ್ನು ಕೂಡಲೇ ಪಟ್ಟಾ ನೀಡಿದ ಜಮೀನು ಬಿಟ್ಟು ಅಕ್ರಮವಾಗಿ ಉಳುಮೆ ಮಾಡುವ ಜಾಗ ತೆರವು ಮಾಡಿ, 161 ಎಕರೆಯಲ್ಲಿ ಕೆರೆ ಎಂದು ಪಹಣಿಯಲ್ಲಿ ನಮೂದು ಮಾಡಲು ಕ್ರಮ ಕೈಗೊಳ್ಳುತ್ತೇವೆಂದು ರೈತರಿಗೆ ಡಿಸಿ ಮಾಹಿತಿ ನೀಡಿದರು.
ಮಾಗಳ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಜಾಗ ಇಲ್ಲದೇ ರಸ್ತೆ ಬದಿ ಶವಗಳನ್ನು ಸುಡುತ್ತಿದ್ದಾರೆ. ಈ ಕುರಿತು ಕೂಡಲೇ ಸರ್ಕಾರಿ ಜಾಗವನ್ನು ಗುರುತು ಮಾಡಿ ಗ್ರಾಮಸ್ಥರಿಗೆ ಸ್ಮಶಾನಕ್ಕೆ ಜಾಗ ಮಂಜೂರು ಮಾಡಲು ಕಡತಗಳನ್ನು ಸಿದ್ಧತೆ ಮಾಡಲು ಅಧಿಕಾರಿಗಳಿಗೆ ಡಿಸಿ ನಿರ್ದೇಶನ ನೀಡಿದರು.ಸಿಂಗಟಾಲೂರು ಏತ ನೀರಾವರಿ ಹಿನ್ನೀರಿನಲ್ಲಿ 61 ಎಕರೆ ಜಮೀನಿಗೆ ಇನ್ನು ಪರಿಹಾರ ನೀಡಿಲ್ಲ. ಆದರೆ ಹಿನ್ನೀರು ಜಮೀನುಗಳಿಗೆ ನುಗ್ಗಿದೆ. ಈ ಕುರಿತು 15 ದಿನದೊಳಗೆ ಸರ್ವೇ ಮಾಡಿ ಕ್ರಮ ಕೈಗೊಂಡು, ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಲು ಸಭೆಯಲ್ಲಿ ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ವಿಕಲಚೇತನರ ಮಾಸಾಶನ ಪ್ರತಿ ತಿಂಗಳು ವಿವಿಧ ಕಾರಣಗಳಿಂದ 150ರಿಂದ 200 ವಿಕಲಚೇತನರ ಮಾಸಾಶನ ಸ್ಥಗಿತಗೊಳ್ಳುತ್ತಿದ್ದು, ಕೆಲವರು ಕಚೇರಿ, ಬ್ಯಾಂಕ್ ಗೆ ಅಲೆದಾಡಿ ಪುನರಾರಂಭ ಮಾಡಿಸಿಕೊಂಡಿದ್ದಾರೆ. ಏನೂ ತಿಳಿಯದೇ ಇರುವ ಇನ್ನು ಕೆಲವರಿಗೆ ಮಾಹಿತಿ ಸಿಗದೇ 700ರಿಂದ 800 ವಿಕಲಚೇತನರ ಮಾಸಾಶನ ನಿಲುಗಡೆಯಾಗಿವೆ. ಅವರಲ್ಲಿ ಎಲ್ಲರೂ ಸರ್ಕಾರದ ಈ ಮಾಸಾಶನ ನಂಬಿಕೊಂಡೇ ಜೀವನ ನಡೆಸುತ್ತಿದ್ದಾರೆ. ಅಂತವರಿಗೆ ಇದರಿಂದ ಬಹಳ ತೊಂದರೆಯಾಗಿದೆ. ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ತಾಲೂಕ ಅಂಗವಿಕಲರ ಹಾಗೂ ಪಾಲಕ ಒಕ್ಕೂಟದ ಅದ್ಯಕ್ಷ ಎಸ್. ಚಂದ್ರಪ್ಪ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಿದರು. ಮಂಜೂರಾಗಿದ್ದ ಮಾಸಾಶನ ಪತ್ರಗಳನ್ನು 4 ಮಹಿಳಾ ಫಲಾನುಭವಿಗಳಿಗೆ ವಿತರಿಸಲಾಯಿತು.101 ಅರ್ಜಿ ಸಲ್ಲಿಕೆ:
ಕಂದಾಯ-58, ಭೂಮಾಪನ-4, ಸಾರಿಗೆ-3, ಪುರಸಭೆ-7, ಸಮಾಜ ಕಲ್ಯಾಣ-3, ಅಲ್ಪಸಂಖ್ಯಾತ -2, ಬಿಸಿಎಂ-3, ಜೆಸ್ಕಾಂ-3, ಸಣ್ಣ ನೀರಾವರಿ-3, ತಾಪಂ-9, ಲೋಕೋಪಯೋಗಿ, ಶಿಕ್ಷಣ, ಕೃಷಿ, ಪೊಲೀಸ್, ಗ್ರಾಮೀಣ ಕುಡಿವ ನೀರು ತಲಾ ಒಂದೊಂದು ಅರ್ಜಿ ಸಲ್ಲಿಕೆಯಾಗಿದ್ದವು.ಈ ಸಂದರ್ಭದಲ್ಲಿ ಜಿಪಂ ಸಿಇಒ ಸದಾಶಿವ ಪ್ರಭು, ಎಸಿ ಚಿದಾನಂದ ಗುರುಸ್ವಾಮಿ, ಕೃಷಿ ಜೆಡಿ ಶರಣಪ್ಪ, ತಹಸೀಲ್ದಾರ್ ಅಂಬರೀಷ, ತಾಪಂ ಇಒ ಉಮೇಶ, ಅಧಿಕಾರಿಗಳು ಉಪಸ್ಥಿತರಿದ್ದರು.