ಕಾನೂನು ಚೌಕಟ್ಟಿನಲ್ಲಿ ಬಗರ್‌ ಹುಕುಂ ಸಮಸ್ಯೆ ಬಗೆಹರಿಸಿ

| Published : Sep 03 2024, 01:42 AM IST

ಕಾನೂನು ಚೌಕಟ್ಟಿನಲ್ಲಿ ಬಗರ್‌ ಹುಕುಂ ಸಮಸ್ಯೆ ಬಗೆಹರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಸೊರಬ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಬಗರ್‌ ಹುಕುಂ ಸಮಿತಿ ಸಭೆಯಲ್ಲಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸೊರಬ

ಹಲವು ವರ್ಷಗಳಿಂದ ಬಗರ್‌ಹುಕುಂ ಸಾಗುವಳಿ ಮಾಡಿ ಜೀವನ ನಿರ್ವಹಣೆ ಮಾಡುತ್ತಿರುವ ರೈತರನ್ನು ಇದ್ದಕ್ಕಿದ್ದಂತೆ ಒಕ್ಕಲೆಬ್ಬಿಸುವುದರಿಂದ ಆ ಕುಟುಂಬಗಳು ಬೀದಿಗೆ ಬರುವ ಮೂಲಕ ಜೀವನ ಇನ್ನಷ್ಟು ಬಿಗಡಾಯಿಸುತ್ತದೆ. ಆದ್ದರಿಂದ ಅಧಿಕಾರಿಗಳು ಮಾನವೀಯತೆಯಿಂದ ಮತ್ತು ಕಾನೂನಿನ ಚೌಕಟ್ಟಿನಲ್ಲಿ ಬಗರ್‌ಹುಕುಂ ಸಮಸ್ಯೆ ಪರಿಹರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.

ಸೋಮವಾರ ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಬಗರ್‌ಹುಕುಂ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾನು, ಸೊಪ್ಪಿನಬೆಟ್ಟ ಪ್ರದೇಶಗಳಲ್ಲಿ ಹಲವಾರು ವರ್ಷಗಳಿಂದ ಪಾರಂಪರಿಕವಾಗಿ ಸಾಗುವಳಿ ಮಾಡಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ರೈತರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಬಗರ್‌ಹುಕುಂ ಸಮಸ್ಯೆ ಕಳೆದ 50-60 ವರ್ಷಗಳಿಂದಲೂ ಇರುವ ಸಮಸ್ಯೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ನವರೊಂದಿಗೆ ಸಮಾಲೋಚನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಬಗರ್‌ ಹುಕುಂ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ವಿಷಯದಲ್ಲಿ ಅಧಿಕಾರಿಗಳು ತೆಗೆದುಕೊಳ್ಳುವ ಕಠಿಣ ಕ್ರಮ ಮತ್ತು ದುರ್ವರ್ತನೆ ನಿಲ್ಲಬೇಕಿದೆ. ಬಡ ರೈತರಿಗೆ ವಿನಃ ಕಾರಣ ತೊಂದರೆ ನೀಡಿದರೆ ಅಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ.

ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಅರಣ್ಯ ಇಲಾಖಾ ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆ ತಿಳಿಸಿದರು.

ಬಗರ್‌ ಹುಕುಂ ಸಾಗುವಳಿ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಬಗರ್‌ ಹುಕುಂ ಸಮಿತಿಯಲ್ಲಿ ಅರ್ಜಿಗಳನ್ನು ತಿರಸ್ಕರಿಸುವ ಮೊದಲು ತಮ್ಮ ಗಮನಕ್ಕೆ ತರುವಂತೆ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಸಮಿತಿಗೆ ಸೂಚಿಸಿದ ಅವರು, ಕೆಲವು ಸಂದರ್ಭಗಳಲ್ಲಿ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಕ್ಷಾತೀತವಾಗಿ ಸಾರ್ವಜನಿಕರೊಂದಿಗೆ ಚರ್ಚಿಸುವ ಅಗತ್ಯತೆ ಇದೆ. ಈ ಕಾರಣದಿಂದ ಕೂಲಂಕುಶವಾಗಿ ಸ್ಥಳ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.ತಹಸೀಲ್ದಾರ್ ಮಂಜುಳಾ ಹೆಗಡಾಳ್ ಮಾತನಾಡಿ, ಬಗರ್‌ ಹುಕುಂ ಜಮೀನು ಮಂಜೂರಾತಿಗೆ ಸಂಬಂಧಿಸಿದಂತೆ ಈಗಾಗಲೇ ಆನ್‌ಲೈನ್ ಮೂಲಕ ಸಕ್ರಮಕ್ಕಾಗಿ ಫಾರಂ ನಂ. 53ರಲ್ಲಿ 152ಅರ್ಜಿಗಳು ಫಾರಂ ನಂ. 57ರಲ್ಲಿ 5113 ಅರ್ಜಿಗಳು ದಾಖಲಾಗಿದ್ದು, ಅವುಗಳನ್ನು ಶೀಘ್ರದಲ್ಲಿಯೇ ಬಗರ್‌ಹುಕುಂ ಸಮಿತಿಗೆ ಮಂಡಿಸಲಾಗುವುದು. ಈ ಹಿಂದೆ ಮಂಜೂರು ಮಾಡಿದ 91 ಅರ್ಜಿಗಳಿಗೆ ಹಕ್ಕುಪತ್ರ ನೀಡಬೇಕು. ಈಗಾಗಲೇ 10 ಅರ್ಜಿಗಳು ಉಪ ವಿಭಾಗಾಧಿಕಾರಿಗಳ ಬಳಿಯಲ್ಲಿವೆ ಎಂದು ತಿಳಿಸಿದರು. ಸಭೆಯಲ್ಲಿ ಬಗರ್‌ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಸದಸ್ಯರಾದ ಹುಚ್ಚಪ್ಪ ಮಂಡಗಳಲೆ, ಶಿವಕುಮಾರ್, ಅಂಜಲಿ ಸಂಜೀವ್, ಸಾಗರ ಉಪ ವಿಭಾಗಾಧಿಕಾರಿ ಡಾ. ಯತೀಶ್, ಡಿಎಫ್ಒಡಿ ಮೋಹನ್‌ಕುಮಾರ್, ತಾಪಂ ಕಾರ್ಯನಿರ್ವಾಹಣಾಧಿಕಾರಿ ಪ್ರದೀಪ್‌ಕುಮಾರ್, ವಲಯ ಸಂರಕ್ಷಣಾಧಿಕಾರಿ ಸುರೇಶ್, ವಲಯ ಅರಣ್ಯಾಧಿಕಾರಿಗಳಾದ ಜಾವೇದ್ ಭಾಷಾ ಅಂಗಡಿ, ಪರಶುರಾಮ್, ಉಪ ತಹಶೀಲ್ದಾರ್ ನಾಗರಾಜ್, ನಿರ್ಮಲ ಹಾಜರಿದ್ದರು.