ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಲೋಕಸಭಾ ಚುನಾವಣೆ ವೇಳೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ತಾವು ನೀಡಿದ್ದ ಭರವಸೆಯಂತೆ ಕಾವೇರಿ ನದಿ ನೀರು ಹಂಚಿಕೆ ಸೇರಿದಂತೆ ನಾಡಿನ ಜ್ವಲಂತ ಸಮಸ್ಯೆ ಬಗೆಹರಿಸಬೇಕು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಆಗ್ರಹಿಸಿದರು.ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ತಾವು ಮತ್ತು ತಮ್ಮ ತಂದೆ ಎಚ್.ಡಿ. ದೇವೇಗೌಡರು ನೀಡಿದ್ದ ಭರವಸೆಯನ್ನು ಚುನಾವಣೆ ಬಳಿಕ ಮರೆಯಬೇಡಿ. ತಾವು ಪ್ರಧಾನಿ ನರೇಂದ್ರ ಮೋದಿ ಅವರೊಡನೆ ಒಡನಾಟ ಹೊಂದಿದ್ದೀರಿ. ಕೇಂದ್ರದಲ್ಲಿ ಪ್ರಮುಖ ಖಾತೆ ಹೊಂದಿದ್ದೀರಿ. ಈ ವೇಳೆ ಮೇಕೆದಾಟು ಬಳಿ ಜಲಾಶಯ ನಿರ್ಮಾಣಕ್ಕೆ ಅನುಮತಿ ಕೊಡಿಸುತ್ತೀರಾ ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಬರಬೇಕಾದ ಜಿಎಸ್ ಟಿ ಬಾಕಿ ದೊರೆಯುವಂತೆ ಮಾಡುವಿರಾ? ಮಹದಾಯಿ ಯೋಜನೆಗೆ ಅನುಮತಿ ಕೊಡಿಸುತ್ತೀರಾ? ಕಸ್ತೂರಿ ರಂಗನ್ ವರದಿ ಸಮಸ್ಯೆ ಬಗೆಹರಿಸುತ್ತೀರಾ? ಪಾರಂಪರಿಕ ಅರಣ್ಯಹಕ್ಕು ಯೋಜನೆ ಅನುಷ್ಠಾನಗೊಳಿಸುತ್ತೀರಾ? ರೈತರಿಗೆ ಕೊಡಬೇಕಾದ ಬರ ಪರಿಹಾರ ಹಣ ಕೊಡಿಸುತ್ತೀರಾ ಎಂದು ಅವರು ಪ್ರಶ್ನೆಗಳ ಸುರಿಮಳೆಗೈದರು.ನ್ಯೂನತೆ ಸರಿಪಡಿಸಿ ಎಂದಿದ್ದೆ, ರದ್ದುಮಾಡಿ ಎಂದಿಲ್ಲ:
ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆ ರದ್ದುಪಡಿಸಿ ಎಂದಿಲ್ಲ. ಬದಲಿಗೆ ಇರುವ ನ್ಯೂನತೆ ಸರಿಪಡಿಸಿ ಎಂದಿದ್ದೆ. ಆದರೆ, ನಮ್ಮ ಹೇಳಿಕೆ ತಿರುಚಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.ತಿಂಗಳಿಗೆ 3 ಲಕ್ಷ ರು. ಸಂಬಳ ತೆಗೆದುಕೊಳ್ಳುತ್ತಿರುವವರಿಗೂ 200 ಯುನಿಟ್ ವಿದ್ಯುತ್ ಉಚಿತವಾಗಿ ದೊರೆಯುತ್ತಿದೆ. ಇಂಥಾದ್ದನ್ನು ಗಮನಿಸಬೇಕು ಹಾಗೂ ಕೆಲವು ನ್ಯೂನತೆಗಳಿದ್ದು ಅವುಗಳನ್ನು ಸರಿಪಡಿಸಬೇಕು ಎಂದಷ್ಟೇ ಹೇಳಿದ್ದೆ. ಸ್ಥಗಿತಗೊಳಿಸಬೇಕು ಎಂದಾಗಲಿ ಅಥವಾ ಸ್ಥಗಿತಗೊಳಿಸಲು ಮುಖ್ಯಮಂತ್ರಿ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದಾಗಲಿ ಹೇಳಿಲ್ಲ ಎಂದರು.
ಲೋಕಸಭಾ ಚುನಾವಣೆಯಲ್ಲಿ 6,56,241 ಮತದಾರರು ನನಗೆ ಮತ ನೀಡಿದ್ದಾರೆ. ಸೋತ ಕಾರಣಕ್ಕೆ ನಾನು ಮತದಾರರನ್ನು ಸ್ಯಾಡಿಸ್ಟ್ ಗಳು ಎಂದಿಲ್ಲ. ಈ ವಿಷಯದಲ್ಲೂ ದೃಶ್ಯ ಮಾಧ್ಯಮದವರು ನನ್ನ ಹೇಳಿಕೆ ತಿರುಚಿದ್ದಾರೆ. ನಾನು, ಸಂಕಷ್ಟದಲ್ಲಿರುವ ವ್ಯಕ್ತಿಗೆ ಮತ್ತಷ್ಟು ಸಂಕಷ್ಟ ನೀಡುವ ವ್ಯವಸ್ಥೆಯು ಸ್ಯಾಡಿಸ್ಟ್ ಆಗಿದೆ ಎಂದು ಹೇಳಿದ್ದೆ. ಮತದಾರರ ಬಗ್ಗೆ ಗೌರವವಿದೆ. ಮೈಸೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಅವರ ಕುಂದುಕೊರತೆಯನ್ನು ಶಾಸಕರು, ಸಚಿವರ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದರು.ಮತದಾರರಿಗೆ ಅಪಮಾನ: ಎಂ.ಲಕ್ಷ್ಮಣ ಕ್ಷಮೆಯಾಚನೆಗೆ ಆಗ್ರಹಕನ್ನಡಪ್ರಭ ವಾರ್ತೆ ಮೈಸೂರುಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಎಂ.ಲಕ್ಷ್ಮಣ ಅವರು ಹೀನಾಯ ಸೋಲನ್ನು ಅನುಭವಿಸಿದ ನಂತರ ಮೈಸೂರಿನ ಜನತೆಯ ಬಗ್ಗೆ ಮತ್ತು ಮತದಾರರ ಬಗ್ಗೆ ಅವಮಾನಕಾರಿಯಾಗುವ ರೀತಿಯಲ್ಲಿ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಜಾನಪದ ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಕೆ.ವಸಂತ್ ಕುಮಾರ್ ಆಗ್ರಹಿಸಿದ್ದಾರೆ.ಮೈಸೂರಿನ ಜನತೆ ಮತ್ತು ಮತದಾರರು ಸ್ಯಾಡಿಸ್ಟ್ ಗಳು ಎನ್ನುವ ಹೇಳಿಕೆ ನೀಡಿರುವುದು ಇಡೀ ಜನತೆಗೆ ಮತದಾರರಿಗೆ ಮಾಡಿದಂತಹ ಅವಮಾನ ಎಂದು ಅವರು ಕಿಡಿಕಾರಿದ್ದಾರೆ.
ಚುನಾವಣೆಗಳು ಬರುತ್ತವೆ ಹೋಗುತ್ತವೆ, ಆದರೆ, ಯಾವುದೇ ಒಬ್ಬ ನಾಯಕ ಮತದಾರ ಪ್ರಭುವಿನಿಂದ ಆಯ್ಕೆಯಾಗಬೇಕಾದರೆ ಅವನಲ್ಲಿರುವ ಒಳ್ಳೆಯ ಗುಣಗಳನ್ನು ಸಹಜವಾಗಿ ನೋಡುತ್ತಾರೆ. ಈ ರೀತಿ ಮನೋಭಾವ ಹೊಂದಿರುವಂತಹ ವ್ಯಕ್ತಿಗಳು ಒಂದೊಮ್ಮೆ ಚುನಾವಣೆಯಲ್ಲಿ ಗೆದ್ದರೆ ಇಡೀ ಮತದಾರರನ್ನು ಮತ್ತು ಜನತೆಯನ್ನು ಕೂಲಿ ಆಳುಗಳ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ, ಹಾಗಾಗಿ ಯಾವುದೇ ಮತದಾರ ಮತದಾನ ಮಾಡುವ ಮುನ್ನ ತಮಗೆ ಬೇಕಾದ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಳದಳುವುದು ಅವರ ಹಕ್ಕು ಎಂದು ತಿಳಿಸಿದ್ದಾರೆ.ಎಂ.ಲಕ್ಷ್ಮಣ ಸೋಲಿನ ಹತಾಶೆಯಿಂದ ಇಡೀ ಮತದಾರರನ್ನು ಅವಹೇಳನ ಮಾಡುವುದು ಸರಿಯಲ್ಲ, ಜೊತೆಗೆ ನಮಗೆ ಮತದಾನ ಮಾಡಿಲ್ಲ ಹಾಗಾಗಿ ಪಂಚ ಭಾಗ್ಯಗಳನ್ನು ಕೂಡಲೇ ನಿಲ್ಲಿಸುವ ಪರಾಮರ್ಶೆ ಮಾಡಬೇಕು ಎನ್ನುವಂತಹ ಹೇಳಿಕೆ ಹಾಸ್ಯಸ್ಪದವಾದದ್ದು, ಜನರಿಗೆ ಪಂಚ ಭಾಗ್ಯಗಳು ತಲುಪಬೇಕು ಎನ್ನುವಂತಹ ಮನೋಭಾವ ಇವರಿಗಿಲ್ಲ, ಬದಲಾಗಿ ಚುನಾವಣೆಯ ಗಿಮಿಕ್ಕಿಗೋಸ್ಕರವಾಗಿಯೇ ಪಂಚಭಾಗ್ಯ ಯೋಜನೆಗಳನ್ನು ಜಾರಿಗೆ ತರುವ ಮುಖಾಂತರವಾಗಿ ಜನರಿಗೆ ಮಂಕುಬೂದಿ ಎರಚಿರುವುದನ್ನು ಇಂದು ಬಹಿರಂಗವಾಗಿ ಅವರೇ ಒಪ್ಪಿಕೊಳ್ಳುತ್ತಿರುವಂತದ್ದು, ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.