ದಲಿತರ ಸಮಸ್ಯೆಗಳನ್ನು ಬಗೆಹರಿಸಿ: ರಿಷಿ ಆನಂದ್‌

| Published : Dec 21 2023, 01:15 AM IST

ಸಾರಾಂಶ

ಗ್ರಾಮೀಣರ ಸಮಸ್ಯೆಗಳನ್ನು ಹೊತ್ತು ತರುವ ದಲಿತ ಮುಖಂಡರನ್ನು ಸರ್ಕಾರಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜೊತೆಗೆ ಅವರನ್ನು ಗೌರವದಿಂದ ಕಾಣಬೇಕು ಎಂದು ಉಪವಿಭಾಗಾಧಿಕಾರಿ ರಿಷಿ ಆನಂದ್‌ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆ

ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮೀಣರ ಸಮಸ್ಯೆಗಳನ್ನು ಹೊತ್ತು ತರುವ ದಲಿತ ಮುಖಂಡರನ್ನು ಸರ್ಕಾರಿ ಅಧಿಕಾರಿಗಳು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಜೊತೆಗೆ ಅವರನ್ನು ಗೌರವದಿಂದ ಕಾಣಬೇಕು ಎಂದು ಉಪವಿಭಾಗಾಧಿಕಾರಿ ರಿಷಿ ಆನಂದ್‌ ತಾಲೂಕು ಮಟ್ಟದ ಅಧಿಕಾರಿಗಳಿಗೆ ಸಲಹೆ ನೀಡಿದರು.

ಇಲ್ಲಿನ ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ಮಂಗಳವಾರ ನಡೆದ ಉಪವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದಲಿತ ಮುಖಂಡರು ಗ್ರಾಮೀಣ ಪ್ರೇಶದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ಕಚೇರಿಗಳಿಗೆ ಬರುತ್ತಾರೆ. ಅವರು ಬಂದಾಗ ಅಧಿಕಾರಿಗಳು ಸೌಜನ್ಯದಿಂದ ವರ್ತಿಸಿ ಅವರ ಸಮಸ್ಯೆ ಆಲಿಸಿ ಕೆಲಸ ಮಾಡುವುದು ಎಲ್ಲರ ಕರ್ತವ್ಯವಾಗಿದೆ. ದಲಿತರ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಂಡು ದಲಿತರ ಹಿತ ಕಾಪಾಡಲು ಬದ್ಧವಾಗಿದ್ದೇವೆ ಎಂದು ಸಭೆಗೆ ತಿಳಿಸಿದರು.

ಮಿಡಿಗೇಶಿ ಅಂಬೇಡ್ಕರ್‌ ಭವನ ಕಾಮಗಾರಿ ಅರ್ಧಕ್ಕೆ ನಿಂತಿರುವ ವಿಚಾರ ಚರ್ಚೆಗೆ ಬಂದಾಗ ಯಾವ ಕಾರಣಕ್ಕಾಗಿ ಕಾಮಗಾರಿ ವಿಳಂಬವಾಗಿದೆ ಎಂಬ ಬಗ್ಗೆ ಕೂಲಂಕುಷವಾಗಿ ಪರಿಶೀಲಿಸಿ ಆದಷ್ಟು ಬೇಗ ಕಾಮಗಾರಿ ಆರಂಭಿಸುವಂತೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶಿವಣ್ಣ ಅವರಿಗೆ ಸೂಚಿಸಿದರು.

ಎಂ.ವೈ. ಶಿಕುಮಾರ್‌ ಮಾತನಾಡಿ, ಪುರಸಭೆ ಅಂಗಡಿ ಮಳಿಗೆ ಹರಾಜು ಪ್ರಕ್ರಿಯೆಯಲ್ಲಿ ದಲಿತರಿಗೆ ಮೀಸಲಾತಿ ಅನ್ವಯ ನೀಡಿಲ್ಲ. ಈ ವಿಚಾರವಾಗಿ ಹೈರ್ಕೋರ್ಟ್‌ ಮತ್ತು ಜಿಲ್ಲಾಧಿಕಾರಿಗಳು ಸ್ಪಷ್ಟ ನಿರ್ದೇಶನ ನೀಡಿದ್ದರೂ ನಿಯಮ ಪಾಲಿಸಿಲ್ಲ, ಆದ್ದರಿಂದ ಉಪವಿಭಾಗಾಧಿಕಾರಿಗಳು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ಮಾಡಿದ್ದು, ಅದನ್ನು ರದ್ದು ಪಡಿಸಿ ಎಸ್ಸಿ, ಎಸ್ಟಿ ಸಮುದಾಯಗಳಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಿ ಕೊಡುವಂತೆ ಒತ್ತಾಯಿಸಿದಾಗ ಇದಕ್ಕೆ ಉತ್ತರಿಸಿದ ಪುರಸಭೆ ಮುಖ್ಯಾಧಿಕಾರಿ ಸುರೇಶ್‌ ಮುಂದಿನ ವಾರದಲ್ಲಿ ಇದರ ಬಗ್ಗೆ ಪ್ರತ್ಯೇಕ ಸಭೆ ನಡೆಸುವುದಾಗಿ ಸಭೆಗೆ ತಿಳಿಸಿದರು.

ಮಖಂಡ ಸಂಜೀವಯ್ಯ ಮಾತನಾಡಿ, ಜಿಪಂ ಇಇ ದಲಿತರು ಹಾಗೂ ಸಾರ್ವಜನಿಕರು ಕಚೇರಿಗೆ ಹೋದಾಗ ಸೌಜನ್ಯದಿಂದ ಮಾತನಾಡಿಸದೇ ನಿರ್ಲಕ್ಷ್ಯ ಮಾಡುತ್ತಿದ್ದು, ದಲಿತರ ಸಭೆಗಳಿಗೂ ಬಾರದೇ ಉದ್ಧಟತನ ತೋರುತ್ತಾರೆ. ಹಾಗಾಗಿ ಇವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ದೊಡ್ಡೇರಿ ಕಣಿಮಯ್ಯ ಮಾತನಾಡಿ, ದಲಿತರಿಗೆ ಮೀಸಲಿರುವ ಶೇ.25 ಅನುದಾನದ ಹಣವನ್ನು ಯಾವುದೇ ಇಲಾಖೆಗಳು ಸಮರ್ಪಕವಾಗಿ ವಿನಿಯೋಗಿಸಿಲ್ಲ. ವಿವಿಧ ಇಲಾಖೆಗಳಲ್ಲಿ ಬರುವ ಎಸ್ಸಿಪಿ ,ಟಿಎಸ್‌ಪಿ ಅನುದಾನಗಳನ್ನು ದಲಿತರಿಗೆ ನೀಡಿಲ್ಲ, ಇದರ ಬಗ್ಗೆ ಮಾಹಿತಿ ಒದಗಿಸಬೇಕು ಎಂದರು.

ದಲಿತ ಸಾಹಿತ್ಯ ಪರಿಷತ್‌ ಅಧ್ಯಕ್ಷ ಡಾ. ಮಹಾರಾಜು ಮಾತನಾಡಿ, ಗ್ರಾಮಗಳಲ್ಲಿನ ದೇಗುಲಗಳಿಗೆ ಇಂದಿಗೂ ದಲಿತರಿಗೆ ಪ್ರವೇಶವಿಲ್ಲ. ಆದ ಕಾರಣ ತಾಲೂಕು ಆಡಳಿತ ನಾಮ ಫಲಕಗಳನ್ನು ಹಾಕುವ ಮೂಲಕ ಎಲ್ಲರಿಗೂ ಪ್ರವೇಶ ಕಲ್ಪಿಸಬೇಕು. ಅಲ್ಲದೆ ಸರ್ಕಾರದಿಂದ ದೊರೆಯುವ ಎಲ್ಲ ಸವತ್ತುಗಳನ್ನು ಒದಗಿಸಿ ಕೊಡಬೇಕು ಎಂದು ಆಗ್ರಹಿಸಿದರು.

ರಂಟವಳಲು ಮಂಜುನಾಥ್‌ ,ಡಿ.ಎಚ್‌. ನರಸಿಂಹಮೂರ್ತಿ, ಸಂಚಾಲಕ ರಂಗನಾಥ್‌, ನೇರಳೇಕೆರೆ ರಂಗನಾಥ್‌ ದಲಿತರ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನ ಸಳೆದರು.

ತಹಸೀಲ್ದಾರ್‌ ಸಿಗ್ಬತ್‌ ವುಲ್ಲಾ ಮುಖಂಡರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಪುರವರ ಹೋಬಳಿ, ಮಿಡಿಗೇಶಿಯ ರೆಡ್ಡಿಹಳ್ಳಿ ದಲಿತ ಸಾಗುವಳಿ ಜಮೀನಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಹಾಯ ನಿರ್ದೇಶಕ ಶಿವಣ್ಣ, ಕೃಷಿ ಇಲಾಖೆ ದೀಪಾಶ್ರೀ, ಪಿಡಬ್ಲ್ಯೂಡಿ ಸುರೇಶ್‌ ರೆಡ್ಡಿ, ಪಿಎಸ್‌ಐ ವಿಜಯ್‌ ಕುಮಾರ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಟಿ. ಲಕ್ಷ್ಮೀನರಸಯ್ಯ, ಉಪ ವಲಯ ಅರಣ್ಯಾಧಿಕಾರಿ ಮುತ್ತು ರಾಜ್‌, ಸರ್ಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಂಗಾಧರ್‌, ತಾಪಂ ಯೋಜನಾಧಿಕಾರಿ ಮಧುಸೂದನ್‌, ಸರ್ಕಾರಿ ನೌಕರರ ಸಂಘದ ಖಜಾಂಚಿ ಚಿಕ್ಕರಂಗಪ್ಪ, ದಲಿತ ಮುಖಂಡರಾದ ರಂಟವಳಲು ಕೃಷ್ಣಪ್ಪ, ರಂಗಸ್ವಾಮಿ, ನಾಗೇಂದ್ರ, ಚಿಕ್ಕಮ್ಮ, ಮೈಲಾರಪ್ಪ, ಬಾಲಕೃಷ್ಣ, ಭರತ್‌ ಕುಮಾರ್‌, ಮರಿಯಪ್ಪ ವಿವಿಧ ದಲಿತಪರ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಅಧಿಕಾರಿಗಳು ಇದ್ದರು.ಫೋಟೊ

ನಗರದ ತಾಪಂ ಆವರಣದ ಸಾಮರ್ಥ್ಯ ಸೌಧದಲ್ಲಿ ನಡೆದ ವಿಭಾಗ ಮಟ್ಟದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕುಂದು ಕೊರತೆ ಸಭೆಯಲ್ಲಿ ಉಪವಿಭಾಗಾಧಿಕಾರಿ ರಿಷಿ ಆನಂದ್‌ ಮಾತನಾಡಿದರು. ಜತೆಗೆ ಮತ್ತಿತರರು ಇದ್ದರು.