ಮುಳಬಾಗಿಲಿನಲ್ಲಿ ನೀರಿನ ಸಮಸ್ಯೆ ಪರಿಹರಿಸಿ

| Published : Jul 24 2024, 12:16 AM IST

ಸಾರಾಂಶ

ಮುಳಬಾಗಿಲು ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ವ್ಯವಸ್ಥೆ ಮಾಡಲು ಎರಡು ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕೂಡಲೇ ಕಾಮಗಾರಿಗಳಿಗೆ ಟೆಂಡರ್ ಕರೆದು ಕ್ರಿಯಾಯೋಜನೆಗೆ ಅನುಮೋದನೆ ನೀಡಿ ನೀರಿನ ಸಮಸ್ಯೆ ಪರಿಹರಿಸಲಿ

ಕನ್ನಡಪ್ರಭ ವಾರ್ತೆ ಕೋಲಾರ

ಮುಳಬಾಗಿಲು ನಗರಸಭೆ ವ್ಯಾಪ್ತಿಯ ೩೧ ವಾರ್ಡ್ ಗಳಿಗೂ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಮುಖಂಡ ಆದಿನಾರಾಯಣ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷರಿಗೆ ಮನವಿ ಸಲ್ಲಿಸಿದರು.

ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಆದಿನಾರಾಯಣ ಮಾತನಾಡಿ, ಮುಳಬಾಗಿಲು ನಗರಸಭೆಯ ಎಲ್ಲಾ ವಾರ್ಡ್ ಗಳಲ್ಲಿ ನೀರಿನ ಸಮಸ್ಯೆಗೆ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ೪ ರಡಿ ಎರಡು ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಕೂಡಲೇ ಕುಡಿಯುವ ನೀರಿನ ಕಾಮಗಾರಿಗಳಿಗೆ ಟೆಂಡರ್ ಕರೆದು ಕ್ರಿಯಾಯೋಜನೆಗೆ ಅನುಮೋದನೆ ನೀಡಿ ನೀರಿನ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿದರು.ಬೊರ್‌ವೆಲ್‌ಗೆ ಪಂಪ್‌ ಮೋಟಾರ್‌

ಮುಳಬಾಗಿಲು ನಗರಸಭೆ ವ್ಯಾಪ್ತಿಯಲ್ಲಿನ ೩೧ ವಾರ್ಡ್ ಗಳಿಗೂ ಸರಕಾರದ೧೪ ಮತ್ತು ೧೫ನೇ ಹಣಕಾಸು ಯೋಜನೆಯಡಿಯಲ್ಲಿ ಹೊಸದಾಗಿ ಕೊರೆದಿರುವ ಕೊಳವೆ ಬಾವಿಗಳಿಗೆ ಪಂಪ್-ಮೋಟರ್ ಅಳವಡಿಸಬೇಕು. ವಾರ್ಡ್ ನಂ.೨೩ರಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪನೆ ಹಾಗೂ ಇತರೇ ಕಾಮಗಾರಿಗಳನ್ನು ಪೂರಣಗೊಳಿಸಿದರೆ ಜನತೆ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ಕೊನೆಯಾಗುತ್ತದೆ ಎಂದು ಮನವಿಯಲ್ಲಿ ವಿವರಿಸಿದ್ದಾರೆ.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ನೀರಿನ ಸಮಸ್ಯೆಗೆ ಸಂಬಂಧಿಸಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಕೂಡಲೇ ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗುತ್ತದೆ.

ಈ ಸಂದರ್ಭದಲ್ಲಿ ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಆರ್.ಆರ್ ರಾಜೇಂದ್ರಗೌಡ, ಗುಜ್ಜನಹಳ್ಳಿ ಮಂಜುನಾಥ್, ಮಾಜಿ ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್, ಗ್ರಾಪಂ ಉಪಾಧ್ಯಕ್ಷ ಜಮ್ಮನಹಳ್ಳಿ ಕೃಷ್ಣಪ್ಪ, ನಗರಸಭೆ ಸದಸ್ಯರಾದ ನಾಗರಾಜ್, ಶಾಹಿನ್ ಪಾಷ, ಸ್ಟಾರ್ ಇಮ್ರಾನ್, ಅಪ್ಪಿ, ಮೊಹಮ್ಮದ್ ಜಬಿ ಉಲ್ಲಾ, ಮತ್ತಿತರರು ಇದ್ದರು.