ಸಾರಾಂಶ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಎಲ್ಲರಿಗಿಂತ ಭಿನ್ನರಾಗಿದ್ದಾರೆ. ಹೇಗೆಂದರೆ, ರಜೆ ಪಡೆಯದೇ, ಮದುವೆಯೂ ಆಗದೇ ಕೇವಲ ಸರ್ಕಾರಿ ಕೆಲಸಕ್ಕಾಗಿ ಜೀವನ ತೇಯ್ದಿದ್ದಾರೆ!!
ಶಿವಮೊಗ್ಗ : ಸರ್ಕಾರಿ ನೌಕರಿ ಸಿಕ್ಕರೆ ಸಾಕು ಅನೇಕರು ಸೋಮಾರಿಗಳಾಗಿ ಬಿಡುತ್ತಾರೆ. ಇನ್ನು ಯಾರ ಮಾತು ಕೇಳದಂತೆ ವರ್ತಿಸುವ ಅನೇಕ ಮಂದಿ ಸರ್ಕಾರಿ ನೌಕರಿಯಲ್ಲಿದ್ದಾರೆ. ಆದರೆ, ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡುವ ವ್ಯಕ್ತಿಯೊಬ್ಬರು ಎಲ್ಲರಿಗಿಂತ ಭಿನ್ನರಾಗಿದ್ದಾರೆ. ಹೇಗೆಂದರೆ, ರಜೆ ಪಡೆಯದೇ, ಮದುವೆಯೂ ಆಗದೇ ಕೇವಲ ಸರ್ಕಾರಿ ಕೆಲಸಕ್ಕಾಗಿ ಜೀವನ ತೇಯ್ದಿದ್ದಾರೆ!!
ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ವ್ಯಕ್ತಿಯೊಬ್ಬರು ತಮ್ಮ ಸೇವಾವಧಿಯಲ್ಲಿ ಒಂದೇ ಒಂದು ದಿನ ರಜಾ ಹಾಕಿಲ್ಲವೆಂದರೆ ನೀವು ನಂಬಲೇಬೇಕು. ಹೌದು, ಕುವೆಂಪು ವಿವಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಪಿ.ಸಿ.ಸೋಮಶೇಖರ್ ಇಂಥದೊಂದು ಅಪರೂಪದ ವ್ಯಕ್ತಿತ್ವ ಹೊಂದಿದವರು.
62 ವರ್ಷದ ಪಿ.ಸಿ.ಸೋಮಶೇಖರ ಅವರು ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಸಹಾಯಕನಾಗಿ ಸೇವೆ ಸಲ್ಲಿಸಿ ಎರಡು ವರ್ಷಗಳ ಹಿಂದೆ ನಿವೃತ್ತಿಯಾಗಿದ್ದಾರೆ. 30 ವರ್ಷ 7 ತಿಂಗಳು 17 ದಿನಗಳ ಕಾಲ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ ಪಿ.ಸಿ.ಸೋಮಶೇಖರ ಒಂದು ದಿನವೂ ಕೆಲಸಕ್ಕೆ ರಜೆಯನ್ನೇ ಹಾಕಿಲ್ಲ. ಎಲ್ಲ ನೌಕರರಿಗೆ ಇರುವಂತೆ ಇವರಿಗೂ ರಜೆಗಳ ಸೌಲಭ್ಯ ಇತ್ತು. ಆದರೆ, ಈ ದೀರ್ಘಾವಧಿ ಸೇವೆಯ ಸಂದರ್ಭದಲ್ಲಿ ಸೋಮಶೇಖರ್ ಒಂದೇ ಒಂದು ರಜೆಯನ್ನು ಪಡೆದಿಲ್ಲ. ಎಂಥಹ ಸಂದರ್ಭ ಬಂದರೂ ರಜೆ ಪಡೆಯದೇ ಸೇವೆ ನೀಡಿದ್ದಾರೆ.
ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸಹ ಸಿಬ್ಬಂದಿ ಪಾಲಿಗೆ ಸೋಮಣ್ಣ ಎಂದೇ ಆತ್ಮೀಯವಾಗಿ ಗುರುತಿಸಿಕೊಂಡಿರುವ ಇವರು ಶಿವಮೊಗ್ಗ ಜಿಲ್ಲೆ ಸೊರಬದವರು. ಸೋಮಣ್ಣ ಮೂಲತಃ ಸೊರಬ ಸಮೀಪದ ಹಳೆಯ ಸೊರಬದವರು. ಅವರು ಅಮ್ಮನ ಮಡಿಲಲ್ಲಿ ಇದ್ದಾಗಲೇ ಹಸಿ ಬಾಣಂತಿಯಾಗಿದ್ದ ತಾಯಿ ತೀರಿಕೊಂಡಿದ್ದಾರೆ. ಹೀಗಾಗಿ ಇವರಿಗೆ ಅಮ್ಮನ ಮುಖವೂ ನೆನಪಿಲ್ಲ. ಅಪ್ಪ ಇನ್ನೊಂದು ಮದುವೆ ಆಗಿ ಮನೆ ಅಳಿಯ ಆಗಿದ್ದರಿಂದ ಇವರು ಅನಿವಾರ್ಯವಾಗಿ ಅಜ್ಜ–ಅಜ್ಜಿಯ ಆಶ್ರಯದಲ್ಲಿ ಬೆಳೆದರು.
ನಾಲ್ಕು ಚಿನ್ನದ ಪದಕ ದೇಣಿಗೆ:
1991ರಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಗೆ ಹಂಗಾಮಿ ನೌಕರನಾಗಿ ಕೆಲಸಕ್ಕೆ ಸೇರಿದ್ದ ಇವರು ಮುಂದೆ ಹುದ್ದೆ ಕಾಯಂ ಆಗಿ ಪ್ರಥಮ ದರ್ಜೆ ಸಹಾಯಕರಾಗಿದ್ದರು. ತಮ್ಮ ಈ ಸುದೀರ್ಘ 30 ವರ್ಷಗಳ ಸೇವಾವಧಿಯಲ್ಲಿ ಒಂದು ದಿನವೂ ರಜಾ ಹಾಕದೆ ಕೆಲಸ ಮಾಡಿದ ಇವರು (30/ಜೂನ್/2022) ನಿವೃತ್ತರಾಗಿದ್ದಾರೆ. ವಿಶೇಷ ಸಂಗತಿ, ಎಂದರೆ ತಮ್ಮ ದುಡಿಮೆಯ ಹಣ ಕೂಡಿಟ್ಟು ವಿಶ್ವವಿದ್ಯಾನಿಲಯದ ಕಲಾ, ವಿಜ್ಞಾನ, ವಾಣಿಜ್ಯ ಹಾಗೂ ಶಿಕ್ಷಣ ವಿಭಾಗದಲ್ಲಿ ತಲಾ ಒಂದೊಂದು ಚಿನ್ನದ ಪದಕ ದತ್ತಿ ಇಟ್ಟಿದ್ದಾರೆ. ಇವರ ಅವಿರತ ಸೇವೆಯನ್ನು ಪರಿಗಣಿಸಿ ವಿಶ್ವವಿದ್ಯಾಲಯ ಇವರನ್ನು ಸನ್ಮಾನಿಸಿದೆ.
ಸರ್ಕಾರಿ ಕೆಲಸ ದೇವರ ಕೆಲಸವೆಂದು ಅತ್ಯಂತ ಶಿಸ್ತು ಪ್ರಾಮಾಣಿಕವಾಗಿ ಸಮಯ ಪ್ರಜ್ಞೆಯಿಂದ ಕಚೇರಿ ಕರ್ತವ್ಯ ನಿರ್ವಹಿಸಿದ್ದಾರೆ. ಕಚೇರಿ ಕರ್ತವ್ಯದ ವೇಳೆಯಲ್ಲಿ ಟೀ, ಕಾಫಿಗೆ ಕ್ಯಾಂಟಿನ್‌ಗೂ ಇವರು ಹೋಗುತ್ತಿರಲಿಲ್ಲ. ಅಲ್ಲದೇ ವಿವಿಯಲ್ಲಿ ನಡೆಯುತ್ತಿದ್ದ ಎಲ್ಲ ಕಾರ್ಯಕ್ರಮದಲ್ಲೂ ಇವರು ಚಾಚು ತಪ್ಪದೇ ಹಾಜರಿರುತ್ತಿದ್ದರು. ತುರ್ತು ಸಂದರ್ಭದಲ್ಲಿ ರಜೆ ದಿನದಲ್ಲೂ ಕೆಲಸ ಮಾಡುತ್ತಿದ್ದ ಇವರು ಎಂದಿಗೂ ಬದಲಿ ರಜೆಯನ್ನೂ ತೆಗೆದುಕೊಂಡವರಲ್ಲ.
ಪ್ರಾಮಾಣಿಕ ಕರ್ತವ್ಯದ ಸೇವೆಗೆ ಸಾಧನ ಪುರಸ್ಕಾರ
ಸೋಮಣ್ಣನ ಈ ಸೇವೆಯನ್ನು ಮೆಚ್ಚಿ ಇವರ ಪ್ರಾಮಾಣಿಕ ಕರ್ತವ್ಯದ ಸೇವೆಗಾಗಿ ವಿಶ್ವವಿದ್ಯಾಲಯದಿಂದ 2002ರಲ್ಲಿ ಸಾಧನ ಪುರಸ್ಕಾರವನ್ನು ನೀಡಲಾಗಿದೆ. ವಿದ್ಯಾರ್ಥಿಗೆ ಪ್ರತಿ ವರ್ಷವು ಜರುಗುವ ಘಟಿಕೋತ್ಸವದಲ್ಲಿ ದತ್ತಿನಿಧಿ ಸ್ವರ್ಣಪದಕವನ್ನು ಪ್ರದಾನ ಮಾಡಲು ದತ್ತಿನಿಧಿ ಸ್ವರ್ಣಪದಕವನ್ನು ಸ್ಥಾಪಿಸಿರುವುದಕ್ಕೆ, 2018ರಲ್ಲಿ 2022ರಲ್ಲಿ ನಡೆದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣದಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಅಲ್ಲದೇ ಕಳೆದ ಜ.26ರಂದು ನಡೆದ 6ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರತ್ ಅನಂತಮೂರ್ತಿ ಸನ್ಮಾನಿಸಿದ್ದಾರೆ.
ರಜೆ ಹಾಕಬೇಕಾಗುತ್ತದೆ ಎಂದು ಮದುಮೆಯೇ ಆಗಲಿಲ್ಲ!
ನಾನು ಕೆಲಸಕ್ಕೆ ಸೇರಿದ ದಿನದಂದೇ ನಾನು ಯಾವತ್ತು ರಜೆ ತೆಗೆದುಕೊಳ್ಳಬಾರದು ಎಂದು ತೀರ್ಮಾನಿದ್ದೆ. ಹೀಗಾಗಿ ತನಗೆ ಹುಷಾರಿಲ್ಲ ಎಂದರೂ ವಿವಿ ಆವರಣದಲ್ಲೇ ಇರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೆಲ ಗಂಟೆಯಲ್ಲೇ ಮತ್ತೆ ಕೆಲಸಕ್ಕೆ ಹಾಜರಾಗುತ್ತಿದ್ದೆ. ಅಲ್ಲದೆ ಕೆಲಸಕ್ಕೆ ರಜೆ ಹಾಕಬೇಕಾಗುತ್ತದೆ ಎಂಬ ಕಾರಣಕ್ಕೆ ನಾನು ಮದುವೆಯೇ ಆಗಲಿಲ್ಲ.
ಸಂಬಂಧಿಕರ ಮನೆಯಲ್ಲಿ ಏನಾದರೂ ಸಭೆ, ಸಮಾರಂಭಗಳಿದ್ದರೂ ಎಂದೂ ರಜೆ ಹಾಕಿಕೊಂಡು ಸಮಾರಂಭಕ್ಕೆ ಹೋಗಿಲ್ಲ. ಬದಲಿಗೆ ರಜೆ ಇದ್ದಾಗ ಸಂಬಂಧಿಕರ ಮನೆಗೆ ಹೋಗಿ ಯೋಗ ಕ್ಷೇಮಾ ವಿಚಾರಿಸಿಕೊಂಡು ಬರುತ್ತಿದ್ದೆ. ನನಗೆ ಸರ್ಕಾರಿ ಕೆಲಸ ಸಿಕ್ಕಿದ್ದೆ ನನ್ನ ಪುಣ್ಯ. ಹೀಗಾಗಿ ನಾನೆಂದು ರಜೆಯನ್ನು ತೆಗೆದುಕೊಂಡಿಲ್ಲ.
ಅಲ್ಲದೇ ಸರ್ಕಾರಿ ನೌಕರರಿಗೆ ಸಿಗವ ಯಾವ ವಿಶೇಷ ಸೌಲಭ್ಯವೂ ಪಡೆದಿಲ್ಲ. ಯಾವುದೇ ಬ್ಯಾಂಕಿನಲ್ಲಿ ಸಾಲ ಪಡೆದಿಲ್ಲ. ಯಾವುದೇ ವಾಹನ ಖರೀದಿ ಮಾಡಿಲ್ಲ. ನನ್ನ ಹೆಸರಿನಲ್ಲಿ ಯಾವುದೇ ಆಸ್ತಿ ಮಾಡಿಲ್ಲ. ಈಗಲೂ ನಾನೂ ಬಾಡಿಗೆ ಮನೆಯಲ್ಲಿ ವಾಸವಿದ್ದೇನೆ. ನನಗೆ ಕೆಲಸ ಬಿಟ್ಟರೆ ಯಾವುದೇ ಹವ್ಯಾಸ ಇಲ್ಲ. ಮದುವೆ ಆಗಿದ್ದರೆ ಹೀಗೆ ಒಂದು ದಿನವೂ ರಜೆ ಪಡೆಯದೇ ಕೆಲಸ ಮಾಡಲು ಆಗುತ್ತಿರಲಿಲ್ಲವೇನೋ ಎಂದು ಪಿ.ಸಿ.ಸೋಮಶೇಖರ್ ನಗೆ ಚಟಾಕಿ ಹಾರಿಸಿದರು.