ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ಶ್ರಮಿಸಬೇಕು

| Published : Feb 17 2025, 12:31 AM IST

ಸಾರಾಂಶ

ಶಿಕ್ಷಕರು ಸಮಾಜದ ಏಳಿಗೆಗಾಗಿ ಶ್ರಮಿಸಿ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಮಾನವೀಯ ಮೌಲ್ಯಗಳನ್ನು ಬೆಳೆಸು

ಕನ್ನಡಪ್ರಭ ವಾರ್ತೆ ಮೈಸೂರು

ಭವಿಷ್ಯದಲ್ಲಿ ಬೋಧನ ವೃತ್ತಿಯನ್ನು ಆಯ್ದುಕೊಳ್ಳುವ ವಿದ್ಯಾರ್ಥಿಗಳು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಸಚಿವ ಪ್ರೊ.ಕೆ.ಬಿ. ಪ್ರವೀಣ ಸಲಹೆ ನೀಡಿದರು.

ನಗರದ ಸೋಮಾನಿ ಬಿ.ಇಡಿ ಕಾಲೇಜಿನಲ್ಲಿ ಆಯೋಜಿಸಿದ್ದ 2022- 24ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿಕ್ಷಕರು ಸಮಾಜದ ಏಳಿಗೆಗಾಗಿ ಶ್ರಮಿಸಿ ಹಾಗೂ ವಿದ್ಯಾರ್ಥಿಗಳಲ್ಲಿ ನೈತಿಕ ಮೌಲ್ಯ, ಮಾನವೀಯ ಮೌಲ್ಯಗಳನ್ನು ಬೆಳೆಸುವುದರ ಮುಖಾಂತರ ಉತ್ತಮ ಸಮಾಜವನ್ನು ರೂಪಿಸುವಲ್ಲಿ ಮತ್ತು ಪ್ರಮುಖ ವ್ಯಕ್ತಿಗಳನ್ನಾಗಿ ಮಾಡಲು ಶಿಕ್ಷಕರ ಪಾತ್ರ ಪ್ರಮುಖವಾಗಿರುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಸಂಪನ್ಮೂಲ ಭರಿತ ವ್ಯಕ್ತಿಯಾಗಿ ರೂಪುಗೊಳ್ಳಬೇಕು ಎಂದು ಹೇಳಿದರು.

ಸಂಸ್ಥೆಯ ಅಧ್ಯಕ್ಷ ಎಂ. ಪುಟ್ಟಸ್ವಾಮಿ ಮಾತನಾಡಿ, ಪದವೀಧರರು ಸ್ವಾವಲಂಬಿ ಜೀವನ ನಡೆಸಲು ಸಾಮರ್ಥ್ಯ ಹಾಗೂ ಕೌಶಲ್ಯ ಮುಖ್ಯ. ಜೀವನದಲ್ಲಿ ಯಶಸ್ಸನ್ನು ಗಳಿಸಲು ಪರಿಶ್ರಮ ಅಗತ್ಯ ಎಂದರು.

ಕಾಲೇಜಿನ ಪ್ರಾಂಶುಪಾಲೆ ಡಾ.ಆರ್.ಜಿ. ಉಷಾ ಮಾತನಾಡಿ, ಗುಣಾತ್ಮಕ ಶಿಕ್ಷಣಕ್ಕೆ ಒತ್ತು ನೀಡುವ ಕೌಶಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಕರಾಗಿ ಸಮಾಜದ ಅಭಿವೃದ್ಧಿಯಲ್ಲಿ ಪಾಲ್ಗೊಳ್ಳಿ ಹಾಗೂ ಶಿಕ್ಷಕ ವೃತ್ತಿಯನ್ನು ಗೌರವಿಸಿ ಎಂದು ತಿಳಿಸಿದರು.

ಬಿ.ಇಡಿ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದಂತಹ ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣ ಪತ್ರ, ನಗದು ಬಹುಮಾನ, ಪದಕಗಳನ್ನ ನೀಡಿ ಗೌರವಿಸಲಾಯಿತು. ನಂತರ ಪ್ರತಿಯೊಂದು ಬೋಧನಾ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದಂತಹ ಹಿರಿಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪದಕವನ್ನು ನೀಡಿ ಸನ್ಮಾನಿಸಲಾಯಿತು.

ಡಾ.ಎಂ. ವಿನುತಾ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ರಾಜೀವ್ ಶರ್ಮ ಅತಿಥಿಗಳನ್ನು ಪರಿಚಯಿಸಿ ಪದವೀಧರರ ಪಟ್ಟಿಯನ್ನು ಓದಿದರು. ಕಾರ್ಯಕ್ರಮದ ಸಂಯೋಜಕಿ ಕೆ.ಆರ್. ಪವಿತ್ರ ಸ್ವಾಗತಿಸಿದರು. ವಿದ್ಯಾರ್ಥಿನಿ ಸವಿತಾ ವಂದಿಸಿದರು.