ಸಾರಾಂಶ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಗೆ ತುಮಕೂರಿನಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚಿಸಿದರೆ ಸ್ಪರ್ಧೆ ಮಾಡುವೆ ಎಂದು ಮಾಜಿ ಸಚಿವ ಸಚಿವ ವಿ.ಸೋಮಣ್ಣ ಹೇಳಿದ್ದಾರೆ. ಗುರುವಾರ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ಬಳಿ ನಾನು ರಾಜ್ಯಸಭೆಗೆ ಅವಕಾಶ ನೀಡುವಂತೆ ಕೇಳಿದ್ದೆ. ಇದೀಗ ಹೈಕಮಾಂಡ್ ತುಮಕೂರಿನಿಂದ ನನಗೆ ಟಿಕೆಟ್ ಕೊಡುವ ಬಗ್ಗೆ ಒಂದು ಹಂತಕ್ಕೆ ಬಂದಿದೆ ಎಂಬ ಮಾಹಿತಿ ನನಗೆ ಬಂದಿದೆ. ಹೈಕಮಾಂಡ್ ಹೇಳಿದಂತೆ ಮಾಡುವೆ ಎಂದರು. ನಿಷ್ಠುರವಾಗಿ ಕೆಲಸ ಮಾಡುವ, ಸತ್ಯ ಮಾತನಾಡುವ, ಕೆಲಸವೇ ದೇವರು ಎಂದು ನಂಬಿಕೊಂಡವನು ನಾನು. ಎಲ್ಲರೂ ಸೋಮಣ್ಣ ಆಗಲು ಸಾಧ್ಯವಿಲ್ಲ. ಸೋಮಣ್ಣನಲ್ಲಿ ದೊಡ್ಡ ಕಟ್ಟುಪಾಡುಗಳಿವೆ. ಸಂಕಲ್ಪ ಇದೆ. ಚಿಂತನೆ ಇದೆ. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತೇನೆ ಎಂದರು.ಪ್ರಧಾನಿ ಮೋದಿ ಅವರ ಜನಪರ ಕಾರ್ಯಕ್ರಮಗಳು, ದೂರದೃಷ್ಟಿಯ ಚಿಂತನೆ, ಕೈಗೊಂಡಿರುವ ಐತಿಹಾಸಿಕ ತೀರ್ಮಾನಗಳು ಶೆಟ್ಟರ್ ಅವರು ಪಕ್ಷಕ್ಕೆ ವಾಪಸ್ ಬರಲು ಸಹಕಾರಿಯಾಗಿವೆ. ನಮ್ಮ ಹೈಕಮಾಂಡ್ ತೀರ್ಮಾನವನ್ನು ಸ್ವಾಗತಿಸುವೆ. ಯಾವ ಯಾವ ಸಮಯಕ್ಕೆ ಏನೇನಾಗಬೇಕು ಎಂಬುದು ಪ್ರಕೃತಿ ಮತ್ತು ವಿಧಿ ನಿಯಮ ಎಂದರು.
ಹೀಗಾಗಿ ಜಗದೀಶ್ ಶೆಟ್ಟರ್ ಅವರು ಮೋದಿ ಅವರನ್ನು ಮತ್ತೆ ಪ್ರಧಾನಿ ಮಾಡಲು ನಮ್ಮ ಪಕ್ಷಕ್ಕೆ ವಾಪಸ್ ಬಂದಿದ್ದು, ಸ್ವಾಗತಿಸುವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.