ರಾಜಕೀಯ ವ್ಯಭಿಚಾರಕ್ಕೆ ಸೋಮಶೇಖರ್ ಸಾಕ್ಷಿ: ಶೋಭಾ ಕರಂದ್ಲಾಜೆ

| Published : Feb 29 2024, 02:09 AM IST

ಸಾರಾಂಶ

ಅಧಿಕಾರ ಇಲ್ಲದಿದ್ದಾಗ ಬರುವುದು, ಅಧಿಕಾರ ಹೋದಾಗ ವಾಪಾಸ್ ಹೋಗುವುದು, ಇದು ಅವರಿಗೆ ಪಕ್ಷ ನಿಷ್ಠೆ, ಸಮಾಜದ ಮೇಲೆ ಭಕ್ತಿ ಇಲ್ಲ ಎಂಬುದಕ್ಕೆ ಸಾಕ್ಷಿ ಶೋಭಾ ಅಸಮಾಧಾನ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿರಾಜ್ಯಸಭಾ ಚುನಾವಣೆಯಲ್ಲಿ ಎಸ್.ಟಿ.ಸೋಮಶೇಖರ್ ನಡೆದುಕೊಂಡ ರೀತಿ ನಿಜಕ್ಕೂ ದುಃಖ ತಂದಿದೆ. ರಾಜಕೀಯದಲ್ಲಿ ಯಾವ ರೀತಿಯ ವ್ಯಭಿಚಾರ ಆಗಬಹುದು ಎಂಬುದಕ್ಕೆ ಇದು ಸಾಕ್ಷಿ ಎಂದು ಕೇಂದ್ರ ಸಚಿವ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ವಿರುದ್ಧ ಮತದಾನ ಮಾಡಿದ ಸೋಮಶೇಖರ್ ಮೇಲೆ ಪಕ್ಷ ಏನು ಕ್ರಮ ಕೈಗೊಳ್ಳಬೇಕೋ ಅದನ್ನು ಮಾಡುತ್ತದೆ, ಆದರೆ ಮತದಾರರು ಮಾತ್ರ ಅವರ ಮೇಲೆ ಸರಿಯಾದ ಕ್ರಮ ಕೈಗೊಳ್ಳುತ್ತಾರೆ ಎಂದವರು ಎಚ್ಚರಿಕೆ ನೀಡಿದರು.ಕಾಂಗ್ರೆಸ್‌ನಿಂದ ಬಿಜೆಪಿಗೆ ಬಂದಾಗ ಅವರಿಗೆ ಮಂತ್ರಿ ಮಾಡಿ ಒಳ್ಳೆಯ ಖಾತೆಗಳನ್ನೇ ಅವರಿಗೆ ನೀಡಲಾಗಿತ್ತು. ಈಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಅಧಿಕಾರಕ್ಕೆ ಮತ್ತೆ ಆ ಕಡೆ ತಿರುಗುವ ಅವರ ಮಾನಸಿಕತೆಗೆ ನನ್ನ ಧಿಕ್ಕಾರ ಇದೆ ಎಂದರು.ಅಧಿಕಾರ ಇಲ್ಲದಿದ್ದಾಗ ಬರುವುದು, ಅಧಿಕಾರ ಹೋದಾಗ ವಾಪಾಸ್ ಹೋಗುವುದು, ಇದು ಅವರಿಗೆ ಪಕ್ಷ ನಿಷ್ಠೆ, ಸಮಾಜದ ಮೇಲೆ ಭಕ್ತಿ ಇಲ್ಲ ಎಂಬುದಕ್ಕೆ ಸಾಕ್ಷಿ. ಅವರು ಬಿಜೆಪಿ ಸೇರಿದಾಗ ಯಶವಂತಪುರದಲ್ಲಿ ನಾನೇ ನಿಂತು ಚುನಾವಣೆ ಮಾಡಿದ್ದೆ, ಕ್ಷೇತ್ರದಲ್ಲಿ ಸೋಮಶೇಖರ್ ಬಗ್ಗೆ ವಿರೋಧವಿದ್ದರೂ ಕಾರ್ಯಕರ್ತರ ಮನವೊಲಿಸಿದ್ದೆವು. ಆದರೆ ಈಗ ಸೋಮಶೇಖರ್ ನಡೆದುಕೊಂಡ ರೀತಿ ನಿಜಕ್ಕೂ ದುಃಖ ತಂದಿದೆ ಎಂದವರು ಬೇಸರಿಸಿದರು.

ಈ ಬಾರಿಯ ರಾಜ್ಯಸಭೆ ಚುನಾವಣೆಗೆ ಬಿಜೆಪಿ-ಜೆಡಿಎಸ್‌ ಮೈತ್ರಿಕೂಟದಿಂದ ಐದನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಆದ್ದರಿಂದ ಈ ಅಭ್ಯರ್ಥಿಯನ್ನು ಗೆಲ್ಲಿಸಲು ಮೈತ್ರಿಕೂಟ ಹಲವು ರೀತಿಯ ಪ್ರಯತ್ನಪಟ್ಟಿತ್ತು. ಆದರೆ ಬಿಜೆಪಿ ಶಾಸಕ ಸೋಮಶೇಖರ್‌ ಅಡ್ಡಮತದಾನ ಮಾಡಿದ್ದು, ಬಿಜೆಪಿಗೆ ಮುಜುಗರ ತಂದಿತ್ತು. ಸೋಮಶೇಖರ್‌ ನಡೆಗೆ ಬಿಜೆಪಿ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಅವರ ಸದಸ್ಯತ್ವ ಅಮಾನತಾಗುವ ಸಾಧ್ಯತೆ ಇದೆ.