ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬಂತೆ ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ಜನರ ತೆರಿಗೆ ಹಣದಲ್ಲಿ ಮಜಾ ಮಾಡಲು ಕಾಂಗ್ರೆಸ್ ಸರ್ಕಾರದವರು ಅಲ್ಲಿಗೆ ಹೋಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ‍ಆರೋಪಿಸಿದ್ದಾರೆ.

- ಜನರ ತೆರಿಗೆ ಹಣದಲ್ಲಿ ಮಜಾ ಮಾಡಲು ಕಾಂಗ್ರೆಸ್ ಸರ್ಕಾರದವರು ಅಲ್ಲಿಗೆ ಹೋಗಿದ್ದಾರೆ: ರೇಣುಕಾಚಾರ್ಯ ಟೀಕೆ- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಯಾರದ್ದೋ ದುಡ್ಡು, ಯಲ್ಲಮ್ಮನ ಜಾತ್ರೆ ಎಂಬಂತೆ ರಾಜ್ಯ ಸರ್ಕಾರವು ಬೆಳಗಾವಿಯಲ್ಲಿ ಕಾಟಾಚಾರಕ್ಕೆ ಅಧಿವೇಶನ ನಡೆಸುತ್ತಿದೆ. ಜನರ ತೆರಿಗೆ ಹಣದಲ್ಲಿ ಮಜಾ ಮಾಡಲು ಕಾಂಗ್ರೆಸ್ ಸರ್ಕಾರದವರು ಅಲ್ಲಿಗೆ ಹೋಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ‍ಆರೋಪಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಉತ್ತರ ಕರ್ನಾಟಕದ ರೈತರು, ಜನರ ಸಮಸ್ಯೆ ಆಲಿಸಲು, ಪರಿಹಾರ ಕಲ್ಪಿಸಲು ಈ ಹಿಂದೆ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಸುವರ್ಣ ಸೌಧ ಕಟ್ಟಿಸಲಾಗಿತ್ತು. ಆದರೆ ಅಲ್ಲಿ ಅದ್ಯಾವುದೂ ಚರ್ಚೆಯಾಗುತ್ತಿಲ್ಲ ಎಂದರು.

ಅಧಿವೇಶನದಲ್ಲಿ ಯಾವುದೇ ಭರವಸೆಗಳೂ ಈಡೇರಿಲ್ಲ. ಅಧಿಕಾರಾರೂಢ ಕಾಂಗ್ರೆಸ್ ಪಕ್ಷವೇ ಈಗ ಇಬ್ಭಾಗವಾಗುವ ಸ್ಥಿತಿಯಲ್ಲಿದೆ. ಕಾಂಗ್ರೆಸ್ ಸರ್ಕಾರವು ಕಾಮಿಡಿ ಪೀಸ್ ಆಗಿದ್ದು, ರಾಜ್ಯದ ಜನತೆಗೆ ಪುಕ್ಕಟೆ ಮನರಂಜನೆ ಸಿಗುತ್ತಿದೆ. ಯಾವುದೇ ಕಾಮಗಾರಿಗಳಿಗೆ ಹಣವನ್ನೇ ಬಿಡುಗಡೆ ಮಾಡುತ್ತಿಲ್ಲ. ನಮ್ಮ ಸರ್ಕಾರವಿದ್ದಾಗ ಅಧಿವೇಶನದಲ್ಲಿ ಚರ್ಚಿಸಿ, ಹಣ ಬಿಡುಗಡೆ ಮಾಡುತ್ತಿದ್ದೆವು. ಆದರೆ, ಕಾಂಗ್ರೆಸ್ ಸರ್ಕಾರ ಕಾಟಾಚಾರಕ್ಕೆ ಅಧಿವೇಶನ ನಡೆಸಿದೆ ಎಂದು ಕಿಡಿಕಾರಿದರು.

ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಪ್ರಬುದ್ಧ ರಾಜಕಾರಣಿ ಆಗಬೇಕಾಗಿತ್ತು. ವೋಟ್ ಚೋರಿ ಅಂತಾ ಸುಳ್ಳು ಆರೋಪ ಮಾಡಿ, ಸಿಎಂ- ಡಿಸಿಎಂ ಅಲ್ಲಿ ಹೋಗಿದ್ದು ಅದು ದೊಡ್ಡ ಸುದ್ದಿ. ಆದರೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಭೋಜನ ಕೂಟದಲ್ಲಿ ಉಪ ಮುಖ್ಯಮಂತ್ರಿ ಭಾಗವಹಿಸಿದ್ದರು. ಈ ಭೋಜನಕೂಟಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳಿಗೇ ಆಹ್ವಾನ ಇರಲಿಲ್ಲ ಎಂದು ವ್ಯಂಗ್ಯವಾಡಿದ ಅವರು, ಕಾಂಗ್ರೆಸ್ ತಂತ್ರಗಾರಿಕೆ ಮಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಬಾಯಿಂದಲೇ ರಾಜೀನಾಮೆ ನೀಡುವೆ ಅಂತಾ ಹೇಳಿಸುತ್ತಾರೆ. ನಿಮ್ಮ ಕಚ್ಚಾಟ ನಿಲ್ಲಿಸದಿದ್ದರೆ ಚುನಾವಣೆಗೆ ಬನ್ನಿ ಎಂಬುದಾಗಿ ಸವಾಲು ಹಾಕಿದರು.

ಪಕ್ಷದ ಮುಖಂಡರಾದ ಬಿ.ಜಿ.ಅಜಯಕುಮಾರ, ರಾಜು ವೀರಣ್ಣ, ಪ್ರವೀಣ ಜಾಧವ್, ಜಿ.ದಯಾನಂದ, ಚೇತನಕುಮಾರ, ಅಜಯ್, ರವಿಗೌಡ, ಪಂಜು ಪೈಲ್ವಾನ್, ಜಯಣ್ಣ, ತಿಪ್ಪೇಶ ಇತರರು ಇದ್ದರು.

- - -

(ಬಾಕ್ಸ್‌) * ಕಾಂಗ್ರೆಸ್ಸಿಗರು ಪಲಾಯನವಾದಿಗಳು ಮುಖ್ಯಮಂತ್ರಿ ಆಪ್ತರು ಸಿಎಂ ಹುದ್ದೆ ಖಾಲಿ ಇಲ್ಲವೆಂದು ಹೇಳುತ್ತಾರೆ, ಡಿಸಿಎಂ ಆಪ್ತ ಶಾಸಕರು ಡಿ.6ರವರೆಗೆ ಕಾದು ನೋಡಿ ಎನ್ನುತ್ತಾರೆ. ಒಬ್ಬರು ಸಂಕ್ರಾಂತಿಗೆ ಕ್ರಾಂತಿ ಅಂತಾ ಒಬ್ಬರು ಹೇಳುತ್ತಾರೆ. ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾದಂತಾಗಿದೆ. ಶಾಲಾ ಕಟ್ಟಡ, ರಸ್ತೆ, ಕುಡಿಯುವ ನೀರಿನ ಯೋಜನೆಗೆ ಯಾವುದೇ ಹಣ ಬಿಡುಗಡೆ ಆಗಿಲ್ಲ. ಗೃಹಲಕ್ಷ್ಮಿ ಹಣವನ್ನೇ ಈ ಸರ್ಕಾರಕ್ಕೆ ಬಿಡುಗಡೆ ಮಾಡಲಾಗಿಲ್ಲ. ಕಾಂಗ್ರೆಸ್ಸಿಗರು ಪಲಾಯನವಾದಿಗಳು. ಕತ್ತಲ ರಾತ್ರಿ, ಮತಗಳ್ಳತನ ಮಾಡಿ, ಕಾಂಗ್ರೆಸ್‌ ಪಕ್ಷದವರು ಅಧಿಕಾರಕ್ಕೆ ಬಂದರು. ಇಂಡಿ ಒಕ್ಕೂಟದ ಸದಸ್ಯರೇ ಈಗ ಕಾಂಗ್ರೆಸ್ಸಿನವರ ಜೊತೆಗೆ ನಿಲ್ಲುತ್ತಿಲ್ಲ. ರಾಹುಲ್ ಗಾಂಧಿ ಅಪ್ರಬುದ್ಧ ರಾಜಕಾರಣ, ರಾಜಕೀಯವಾಗಿ ಇನ್ನೂ ಎಳಸು ಎಂದು ರೇಣುಕಾಚಾರ್ಯ ವಾಗ್ದಾಳಿ ನಡೆಸಿದರು.

- - -

-16ಕೆಡಿವಿಜಿ2, 3: ದಾವಣಗೆರೆಯಲ್ಲಿ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.