ಸೋಮೇಶ್ವರ ಕುಂಟೆ ಒತ್ತುವರಿ: ಸೂಕ್ತ ಕ್ರಮಕ್ಕೆ ಆಗ್ರಹ

| Published : Mar 30 2025, 03:04 AM IST

ಸೋಮೇಶ್ವರ ಕುಂಟೆ ಒತ್ತುವರಿ: ಸೂಕ್ತ ಕ್ರಮಕ್ಕೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರಲ್ಲಿ 2 ಎಕರೆ 4 ಗುಂಟೆ ಜಾಗವಿದ್ದು, ಇದು ಸರ್ಕಾರಿ ಭೂಮಿಯಾಗಿದೆ. ಸೋಮೇಶ್ವರ ಕುಂಟೆ ಎಂದು ದಾಖಲಾತಿಗಳಲ್ಲಿ ನಮೂದಾಗಿರುತ್ತದೆ. ಇದನ್ನು ಕುಂಟೆಯಾಗಿ ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಒತ್ತಾಯಿಸಿದರು.

ದೊಡ್ಡಬಳ್ಳಾಪುರ: ತಾಲೂಕಿನ ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರಲ್ಲಿ 2 ಎಕರೆ 4 ಗುಂಟೆ ಜಾಗವಿದ್ದು, ಇದು ಸರ್ಕಾರಿ ಭೂಮಿಯಾಗಿದೆ. ಸೋಮೇಶ್ವರ ಕುಂಟೆ ಎಂದು ದಾಖಲಾತಿಗಳಲ್ಲಿ ನಮೂದಾಗಿರುತ್ತದೆ. ಇದನ್ನು ಕುಂಟೆಯಾಗಿ ಉಳಿಸಿ ಅಭಿವೃದ್ಧಿಪಡಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಕನ್ನಡಿಗರ ಬಣದ ರಾಜ್ಯಾಧ್ಯಕ್ಷ ಬಿ.ಎಸ್.ಚಂದ್ರಶೇಖರ್ ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೊಡ್ಡಬಳ್ಳಾಪುರ ತಾಲೂಕು, ಕಸಬಾ ಹೋಬಳಿ ಗಂಗಾಧರಪುರ ಗ್ರಾಮದ ಸರ್ವೆ ನಂಬರ್ 17 ರಲ್ಲಿ 2ಎಕರೆ 4 ಗುಂಟೆ ಈ ಜಾಗವು ಸರ್ಕಾರಿ ಕುಂಟೆಯ ಜಾಗವಾಗಿದ್ದು, ಇದು ಸ್ವಯಂಭುವೇಶ್ವರ ದೇವಸ್ಥಾನದ ಹತ್ತಿರವಿದೆ. ಆದರೆ ಇದೀಗ ಕಂಡು ಬಂದಂತೆ ಪಹಣಿಯಲ್ಲಿ 0.00 ಎಂದು ನಮೂದು ಆಗಿರುವುದು ಆಶ್ಚರ್ಯಕರ ಸಂಗತಿ. ಈ ಹಿಂದೆ ಇದೇ ಸದರಿ ಜಾಗದಲ್ಲಿ ಬಡವರೊಬ್ಬರು ಮನೆ ಕಟ್ಟಿದ್ದರು, ಅದು ಅಕ್ರಮವೆಂದು ಆ ಮನೆಯನ್ನು ಕೆಡವಿದ್ದು ಇದೆ. ಆದರೆ ಇದೀಗ ಸದರಿ ಜಾಗದ ವಿಸ್ತೀರ್ಣ 2.04 ಎಕರೆ ಬದಲಿಗೆ 0.00 ಎಂದು ನಮೂದಾಗಿರುವುದು ಕುತೂಹಲಕ್ಕೆ ಕಾರಣವಾಗಿದೆ. ಈ ಸಂಬಂಧ ಈಗಾಗಲೇಶಾಸಕರು, ಜಿಲ್ಲಾಧಿಕಾರಿಗಳು, ತಹಸೀಲ್ದಾರ್ ಉಪವಿಭಾಗಾಧಿಕಾರಿಗಳು ಹಾಗೂ ಪೌರಾಯುಕ್ತರಿಗೆ ಹಾಗೂ ಭೂದಾಖಲೆಗಳ ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದೇವೆ ಎಂದರು.

ಈಗಾಗಲೇ ಅಂತರ್ಜಲದ ಮಟ್ಟ ಕುಸಿತ ಕಂಡಿದ್ದೇವೆ. ನಗರದ ಮಧ್ಯೆ ಭಾಗದಲ್ಲಿರುವ ಈ ಕುಂಟೆಯನ್ನು ಉಳಿಸಿ, ಅಭಿವೃದ್ಧಿ ಪಡಿಸುವುದರಿಂದ ನಮಗೆ ಹಾಗೂ ಮುಂದಿನ ಪೀಳಿಗೆಗೆ ಸಹಾಯವಾಗುತ್ತದೆ ಹಾಗೂ ನಮ್ಮ ಊರಿನ ಪರಿಸರಕ್ಕೂ ಕೊಡುಗೆಯಾಗುತ್ತದೆ. ಅಲ್ಲದೆ ಕುಂಟೆಯನ್ನು ಸ್ವಚ್ಛಗೊಳಿಸಿ, ಗಿಡ ಮರ ನೆಟ್ಟು ನವೀಕರಿಸುವುದರಿಂದ ಆಕರ್ಷಕವಾಗುವುದಲ್ಲದೆ ನಗರದ ಜನರಿಗೆ ಪರಿಸರದ ಕಡೆ ಒಲವು ಬೆಳೆಯಲು ಅನುವಾಗುತ್ತದೆ. ಈ ವಿಚಾರದ ಕಡೆಗೆ ಗಮನ ಹರಿಸಿ, ಸದ್ಯ ನಮ್ಮ ನಗರದ ಮಧ್ಯೆ ಇರುವ ಈ ಸೋಮೇಶ್ವರ ಕುಂಟೆಯನ್ನು ಉಳಿಸಿ ಅಭಿವೃದ್ಧಿ ಪಡಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು.

ಈ ಹಿಂದೆ ಅಧಿಕಾರಿಗಳು ಸರ್ವೆ ನಂ.111ರ ಪೊಲೀಸ್ ವಸತಿ ಜಾಗವನ್ನು ಭೂಗಳ್ಳರಿಂದ ಕಾಪಾಡಿ ಮತ್ತೆ ಪೋಲೀಸ್ ಕ್ವಾರ್ಟಸ್ ಹೆಸರಿಗೆ ಆಗುವುದಕ್ಕೆ ನಮ್ಮೊಂದಿಗೆ ಸಹಕರಿಸಿದ್ದಾರೆ, ಈ ಹಿಂದಿನ ಜಿಲ್ಲಾಧಿಕಾರಿಗಳಾದ ಶಿವಶಂಕರ್, ಉಪವಿಭಾಗಾಧಿಕಾರಿಗಳಾದ ದುರ್ಗ ಶ್ರೀ, ತಹಸೀಲ್ದಾರ್ ವಿಭಾ ವಿಧ್ಯಾ ರಾಥೋಡ್ ಹಾಗೂ ಪೌರಾಯುಕ್ತರಾದ ಕಾರ್ತಿಕೇಶ್ವರ್ ಅವರಿಗೆ ಧನ್ಯವಾದಗಳು ಹಾಗೂ ಅಭಿನಂದನೆಗಳನ್ನು ತಿಳಿಸುತ್ತೇವೆ. ಸೋಮೇಶ್ವರ ಕುಂಟೆ ಉಳಿಸಲು ಈ ಬಾರಿಯೂ ಕೂಡ ಅಧಿಕಾರಿಗಳು ಸಹಕರಿಸುತ್ತಾರೆ ಎಂಬ ಭರವಸೆ ಇದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್.ರಮೇಶ್, ಜಿಲ್ಲಾಧ್ಯಕ್ಷ ಪುನೀತ್, ಕಾರ್ಯದರ್ಶಿ ತಾಯೆಗೌಡ, ವಾಸು, ತಾಲ್ಲೂಕು ಅಧ್ಯಕ್ಷ ವಿನಯ್ ಕುಮಾರ್, ಉಪಾಧ್ಯಕ್ಷ ಅಶ್ವತ್ಥನಾರಾಯಣ್, ಕಾರ್ಯಾಧ್ಯಕ್ಷ ಪ್ರದೀಪ್ ಕುಮಾರ್, ಕಾರ್ಮಿಕ ಘಟಕದ ಅಧ್ಯಕ್ಷ ಶಿವಶಂಕರ್ ರೆಡ್ಡಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್ ಗೌಡ, ಮುಖಂಡರಾದ ಪ್ರಶಾಂತ್, ವೇಣು, ಗವಿಸ್ವಾಮಿ ಮುಂತಾದವರು ಉಪಸ್ಥಿತರಿದ್ದರು.29ಕೆಡಿಬಿಪಿ5- ದೊಡ್ಡಬಳ್ಳಾಪುರದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ಮುಖಂಡರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.