ಸಾರಾಂಶ
ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೋಮೇಶ್ವರ ಶತಕ ಅಪ್ರತಿಮ ಕೃತಿಯಾಗಿದೆ. ನೀತಿ ಬೋಧನೆ ಮಾಡುವ ಕೃತಿಯಾಗಿದೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು.
ಲಕ್ಷ್ಮೇಶ್ವರ: ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಸೋಮೇಶ್ವರ ಶತಕ ಅಪ್ರತಿಮ ಕೃತಿಯಾಗಿದೆ. ನೀತಿ ಬೋಧನೆ ಮಾಡುವ ಕೃತಿಯಾಗಿದೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು. ಗುರುವಾರ ಸಂಜೆ ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ಅರ್ಚಕರ ಸೇವಾ ಸಮಿತಿಯಿಂದ ಶಿವರಾತ್ರಿ ಉತ್ಸವ ನಿಮಿತ್ತ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಹಾಶಿವರಾತ್ರಿಯು ನಮ್ಮ ಪರಂಪರೆ ಹಾಗೂ ಸಂಸ್ಕೃತಿಯ ಪ್ರತೀಕವಾಗಿದೆ. ಪಟ್ಟಣದ ಸೋಮೇಶ್ವರ ದೇವಾಲಯವು ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ದೇವಸ್ಥಾನ. ನಮ್ಮ ಸಂಸ್ಕೃತಿ ಮತ್ತು ಪರಂಪರೆ ಪಸರಿಸುವ ಕಾರ್ಯಕ್ರಮಗಳು ಮನುಷ್ಯನನ್ನು ಮೌಲ್ಯಯುತವಾಗಿ ವ್ಯಕ್ತಿಯನ್ನಾಗಿ ಮಾಡಲು ಸಹಕಾರಿಯಾಗುತ್ತವೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಅರ್ಚಕರ ಸೇವಾ ಸಮಿತಿ ಅಧ್ಯಕ್ಷ ವಿ.ಎಲ್. ಪೂಜಾರ ಮಾತನಾಡಿದರು.ಕಾರ್ಯಕ್ರಮದಲ್ಲಿ ಸ್ಥಳೀಯ ಸಂಗೀತ ಕಲಾವಿದ ರಾಘವೇಂದ್ರ ಕ್ಷತ್ರಿಯ, ಉಸ್ತಾದ ಶೇಖ ಅಬ್ದುಲ್ ಖಾಜಿ ಶಿಷ್ಯ ಬಾನ್ ಸೂರಿ ವಾದನದಲ್ಲಿ ರಾಗ ಶ್ಯಾಮ ಕಲ್ಯಾಣದಿಂದ ಪ್ರಾರಂಭಿಸಿದರು. ದುನ್ ದಲ್ಲಿ ರಾಗ ಕಂಬಾವತಿ ನುಡಿಸಿದರು. ಕೃಷ್ಣಕುಮಾರ ಕುಲಕರ್ಣಿ ತಬಲಾ ಸಾಥ್ ನೀಡಿದರು.
ನಂತರ ಬೆಂಗಳೂರಿನ ಭರತನಾಟ್ಯ ಕಲಾವಿದೆ ದೀಪಿಕಾ ಎಚ್.ಎಸ್. ಇವರು ಶಿವಶಕ್ತಿ ಆರಾಧನೆ ಪ್ರಸ್ತುತಿ ಪಡಿಸಿದರು. ಲಕ್ಷ್ಮೇಶ್ವರದ ಗುರು ಗಂಧರ್ವ ಸಂಗೀತ ಸಭಾದ ಪರಶುರಾಮ ಭಜಂತ್ರಿ ಹಾಗೂ ತಂಡದಿಂದ ಸಂಗೀತ ಕಚೇರಿ ನಡೆಯಿತು. ಒಡೆಯರ ಮಲ್ಲಾಪುರದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಸಂಗೀತ ಶಿಕ್ಷಕ ಡಾ.ಅರ್ಜುನ ವಠಾರ ಹಾಗೂ ತಂಡದಿಂದ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಅದ್ಭುತವಾಗಿ ನಡೆಯಿತು. ಹುಬ್ಬಳ್ಳಿಯ ಸಂಕಲ್ಪ ನೃತ್ಯ ಹಾಗೂ ಸಾಂಸ್ಕೃತಿಕ ಸಂಸ್ಥೆ ಸಹನಾ ಬನ್ನಿಗಿಡದ ಅವರ 12 ಜನರ ತಂಡವು ಭರತನಾಟ್ಯದಲ್ಲಿ ಗಣೇಶನ ಸ್ತುತಿ ದೊಂದಿಗೆ ಪ್ರಾರಂಭಗೊಳಿಸಿದರು.ಬಸವಣ್ಣನವರ ವಚನ ಜನಪದ ನೃತ್ಯ, ಕಂಸಾಳೆ ನೃತ್ಯ ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಪಾತ್ರರಾದರು.ಲಕ್ಷ್ಮೇಶ್ವರದ ವೀರೇಶ ನಡಕಟ್ಟಿನ ಹಾಗೂ ತಂಡದಿಂದ ವೀರಗಾಸೆ ನಡೆಯಿತು.ನಂತರ ಕಲಾ ಸುಜಯ ತಂಡ ವಿದ್ವಾನ್ ಗುರು ಸುಜಯ ಶಾನಭಾಗ ಶಿಷ್ಯಂದಿರು ಹುಬ್ಬಳ್ಳಿ ಲಕ್ಷ್ಮೇಶ್ವರ ಶಾಖೆಯ ಭರತನಾಟ್ಯ ಕಲಾವಿದೆ ಚಂದನಾ ಕಳಸಾಪುರ, ಸಾನ್ವಿ ಸುಣಗಾರ, ದಾನೇಶ್ವರಿ ಮಾದಾಪುರಮಠ, ಸ್ಪಂದನಾ ಡಿ.ಎನ್, ಶ್ರೀಷಾ ಸುಣಗಾರ, ಸಿಂಚನಾ ಆದಿ ಅದ್ಭುತ ನೃತ್ಯ ಪ್ರಸ್ತುತಪಡಿಸಿದರು. ಬೆಂಗಳೂರಿನ ಭರತನಾಟ್ಯ ಕಲಾವಿದೆ ತೇಜೋಮಯಿ ಗದ್ದಿ ಹಾಗೂ ಅಮೃತವಾಣಿ ಆರ್., ಇವರಿಂದ ಗಣೇಶನ ಸ್ತುತಿ, ವಿಷ್ಣುವಿನ ದಶಾವತಾರ ಹಾಗೂ ಶಿವನ ನಾಗೇಂದ್ರ ಹಾರಾಯ ನೃತ್ಯ ಮಾಡುವ ಮೂಲಕ ಗಮನ ಸೆಳೆದರು.ಈ ವೇಳೆ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ, ವಸಂತ ಪಾಟೀಲ ಕುಲಕರ್ಣಿ, ಸೋಮೇಶ್ವರ ಜಾತ್ರಾ ಕಮಿಟಿ ಅಧ್ಯಕ್ಷ ಕುಬೇರಪ್ಪ ಮಹಾಂತಶೆಟ್ಟರ, ಅರ್ಚಕ ಸೋಮನಾಥ ಪೂಜಾರ, ರಾಘವೇಂದ್ರ ಪೂಜಾರ, ಸಮೀರ ಪೂಜಾರ ಸೇರಿದಂತೆ ಅನೇಕರು ಹಾಜರಿದ್ದರು.ದರ್ಶಿನಿ ಪೂಜಾರ, ಪ್ರಾರ್ಥಿಸಿದರು. ಶ್ವೇತಾ ಕುಲಕರ್ಣಿ, ದಿಗಂಬರ ಪೂಜಾರ ನಿರೂಪಿಸಿದರು.