ಸೋಮವಾರಪೇಟೆ: ಬಸ್‌ಗಳಿಗಾಗಿ ಮಹಿಳೆಯರು ವಿದ್ಯಾರ್ಥಿಗಳು ಕುಳಿತು ಕಾಯುವ ಸ್ಥಳದಲ್ಲಿ ಮದ್ಯಪ್ರಿಯರು ಮತ್ತು ದುರ್ವಸನಿಗಳಿಗೆ ಆಶ್ರಯತಾಣವಾಗಿ ಬದಲಾಗಿದ್ದು, ಬಸ್ ನಿಲ್ದಾಣದೊಳಗೆ ಹೋಗದ ಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಧರಣಿ ಸ್ವ ಸಹಾಯ ಸಂಘದ ಮಹಿಳಾ ಘಟಕ ಶುಚಿತ್ವಕ್ಕೆ ಚಾಲನೆ ನೀಡಿದೆ.
ಸಮೀಪದ ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಬ್ಬಿಣ ಸೇತುವೆ ಕಾಮಗಾರಿ ನಡೆಯುತ್ತಿದ್ದು, ಜಂಕ್ಷನ್‌ನಲ್ಲಿ ಬಸ್‌ಗಳಲ್ಲಿ ಸಂಚರಿಸಲು ಜನರು ನಿಲ್ಲಬೇಕಿದೆ. ಆದರೆ, ರಾತ್ರಿಯಾದೊಡನೆ ಇಲ್ಲಿ ಬೆಳಕಿನ ವ್ಯವಸ್ಥೆ ಇಲ್ಲದಿರುವುದರಿಂದ ಮದ್ಯ ಮತ್ತು ಧೂಮಪಾನ ಮಾಡಲು ಸೂಕ್ತ ಸ್ಥಳವಾಗಿದೆ. ಇದರೊಳಗೆ ಬೀಡಿ ಸಿಗರೇಟು, ಖಾಲಿ ಮದ್ಯದ ಬಾಟಲಿಗಳು ಹಾಗೂ ಎಲ್ಲೆಂದರಲ್ಲಿ ಉಗುಳುವುದರಿಂದ ದುರ್ವಾಸನೆಯಿಂದ ಕೂಡಿದೆ. ಮಳೆಗಾಲದಂತೂ ಇದು ಅವರ ವ್ಯಸನ ತೀರಿಸಿಕೊಳ್ಳಲು ಒಳ್ಳೆಯ ಸ್ಥಳವಾಗಿದೆ.ಇದರ ದುರ್ವ್ಯವಸ್ಥೆಯನ್ನು ಮನಗಂಡ ಸ್ಥಳೀಯ ಧರಣಿ ಸ್ವ ಸಹಾಯ ಸಂಘದ ಮಹಿಳಾ ಘಟಕ ಸೋಮವಾರ ಇದನ್ನು ಸ್ವಚ್ಛ ಮಾಡಿ, ಒಳಗೆ ತುಂಬಿದ್ದ ತ್ಯಾಜ್ಯವನ್ನು ಸಂಗ್ರಹಿಸಿ, ಚೀಲದಲ್ಲಿ ತುಂಬಿ ಬೇರೆಡೆಗೆ ವರ್ಗಾಯಿಸಿದರು. ಸ್ವಚ್ಛತಾ ಕಾರ್ಯದಲ್ಲಿ ಸಂಘದ ಸದಸ್ಯರಾದ ಸಬಿತಾ ಚೆನ್ನಕೇಶವ, ರೂಪಾ ದಾಮೋದರ, ಗೀತಾ ಆನಂದ, ಬಾರನ ಅನಿತ ಮತ್ತು ರೇಣುಕಾ ಗಣೇಶ್ ಪಾಲ್ಗೊಂಡಿದ್ದರು.