ಸೋಮವಾರಪೇಟೆಯ ಕ್ರೀಡಾಪಟು ತರುಣ್ ಮುರಳೀಧರ್ ರಾಷ್ಟ್ರಮಟ್ಟಕ್ಕೆ ಆಯ್ಕೆ

| Published : Aug 26 2024, 01:41 AM IST

ಸಾರಾಂಶ

ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕ್ರೀಡಾಪಟು ತರುಣ್‌ ಮುರಳೀಧರ್‌ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್‌ ಪಂದ್ಯಾವಳಿಗೆ ಆಯ್ಕೆಯಾಗಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ರಾಜ್ಯಮಟ್ಟದ ಪದವಿಪೂರ್ವ ಕಾಲೇಜುಗಳ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಕ್ರೀಡಾಪಟು ತರುಣ್ ಮುರಳೀಧರ್ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಆಯ್ಕೆಯಾಗಿದ್ದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕರ್ನಾಟಕ ವಿದ್ಯಾಭಾರತಿ ಸಂಸ್ಥೆಯು ಬೆಂಗಳೂರಿನ ಜೈಗೋಪಾಲ್ ಗರೋಡಿಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಫೈನಲ್‍ನಲ್ಲಿ ಬೆಂಗಳೂರು ಜಿಲ್ಲಾ ತಂಡವನ್ನು ಪರಾಭವಗೊಳಿಸಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿದ್ದ ಕೊಡಗಿನ ಸೋಮವಾರಪೇಟೆಯ ವಿದ್ಯಾರ್ಥಿ ತರುಣ್ ಪ್ರಥಮ ಸ್ಥಾನ ಪಡೆದುಕೊಂಡಿದ್ದು, ಸೆ.27ರಂದು ದೆಹಲಿಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ತಂಡದಲ್ಲಿ ಮಂಗಳೂರಿನ ಶಕ್ತಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ತರುಣ್ ಮುರಳೀಧರ್, ಪುತ್ತೂರಿನ ವಿವೇಕಾನಂದ ಕಾಲೇಜಿನ ವಿದ್ಯಾರ್ಥಿಗಳಾದ ಯಶಸ್, ಯಶಸ್ವಿನ್‍ಗೌಡ, ಅಕ್ಷಯ್ ನಾಯಕ್, ಧನ್ವಿತ್ ರೈ ಅವರನ್ನೊಳಗೊಂಡ ತಂಡದಲ್ಲಿ ಪಾಲ್ಗೊಂಡಿದ್ದರು. ಶಕ್ತಿ ಕಾಲೇಜಿನ ಕೋಚ್ ಮನೋಜ್ ಹಾಗೂ ವಿವೇಕಾನಂದ ಕಾಲೇಜಿನ ಕೋಚ್ ಡಾ. ಜ್ಯೋತಿ ಅವರು ಕ್ರೀಡಾಪಟುಗಳಿಗೆ ತರಬೇತಿ ನೀಡಿದ್ದರು.

ಸೋಮವಾರಪೇಟೆಯ ಪತ್ರಕರ್ತ ಮುರಳೀಧರ್- ಸರಿತ ದಂಪತಿಗಳ ಪುತ್ರನಾಗಿರುವ ತರುಣ್ ಅವರಿಗೆ ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ ಹಾಗೂ ನಾವು ಪ್ರತಿಷ್ಠಾನ ಸಂಸ್ಥಾಪಕ ಗೌತಮ್ ಕಿರಗಂದೂರು ಅವರು ಶಾಲಾ ಹಂತದಲ್ಲಿ ತರಬೇತಿ ನೀಡಿದ್ದರು.