ಸೋಮವಾರಪೇಟೆ: ಮೀನುಗಾರಿಕಾ ಇಲಾಖೆಯಿಂದ ಮೀನು ಮೊಬೈಲ್ ಕ್ಯಾಂಟಿನ್‌ಗೆ ಚಾಲನೆ

| Published : Feb 04 2025, 12:31 AM IST

ಸಾರಾಂಶ

ತಾಲೂಕು ಪಂಚಾಯಿತಿ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರಾರಂಭವಾದ ಮೀನು ಕ್ಯಾಂಟಿನ್‌ಗೆ ಸೋಮವಾರ ಚಾಲನೆ ನೀಡಲಾಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಪೌಷ್ಠಿಕ ಆಹಾರವಾಗಿರುವ ಮೀನಿನ ಊಟವನ್ನು ಕೈಗೆಟುಕುವ ದರದಲ್ಲಿ ಜನರಿಗೆ ಸಿಗಬೇಕೆಂಬ ಉದ್ದೇಶದಿಂದ ಮೀನು ಮೊಬೈಲ್ ಕ್ಯಾಂಟಿನ್ ಪ್ರಾರಂಭಿಸಲಾಗಿದೆ ಎಂದು ಶಾಸಕ ಡಾ.ಮಂತರ್‌ಗೌಡ ಹೇಳಿದರು.ತಾಲೂಕು ಪಂಚಾಯಿತಿ ಮತ್ತು ಮೀನುಗಾರಿಕಾ ಇಲಾಖೆ ವತಿಯಿಂದ ಮತ್ಸ್ಯ ಸಂಜೀವಿನಿ ಯೋಜನೆಯಡಿ, ಪಟ್ಟಣದ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಪ್ರಾರಂಭವಾದ ಮೀನು ಕ್ಯಾಂಟಿನ್‌ಗೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.ಹಾರಂಗಿ ಹಿನ್ನೀರು, ಕೆರೆಗಳು, ನದಿಗಳಲ್ಲಿ ಮೀನುಸಾಕಾಣಿಕೆ ನಡೆಯುತ್ತಿದೆ. ತಾಜಾ ಮೀನುಗಳ ಆಹಾರವೂ ಇಲ್ಲಿನ ಜನರಿಗೆ ಸಿಗಬೇಕು. ಕ್ಯಾಂಟಿನ್ ಮಾಲೀಕರು ಮೀನುಗಾರಿಕೆ ಇಲಾಖೆಯಿಂದ ಸಿಗುವ ಸೌಲಭ್ಯವನ್ನು ಪಡೆದುಕೊಂಡು ಕಡಿಮೆ ದರದಲ್ಲಿ ಮೀನಿನ ಊಟ ನೀಡಬೇಕು. ಆಹಾರದಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪಟ್ಟಣದೊಳಗೆ ಎಲ್ಲಿ ಬೇಕಾದರೂ ಆಟೋವನ್ನು ನಿಲ್ಲಿಸಿಕೊಂಡು ಊಟ ನೀಡಬಹುದು. ಪಂಚಾಯಿತಿ ಆಡಳಿತ ಕೂಡ ಮೊಬೈಲ್ ಕ್ಯಾಂಟಿನ್‌ಗೆ ಸೌಲಭ್ಯವನ್ನು ಒದಗಿಸಿ ಕೊಡಬೇಕು ಎಂದು ಹೇಳಿದರು.ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಮಿಲನಾ ಭರತ್ ಮಾತನಾಡಿ, ಕೊಡಗಿನ ಪ್ರವಾಸೋದ್ಯಮ ಸ್ಥಳಗಳಲ್ಲಿ ಮೀನಿನ ಮೊಬೈಲ್ ಕ್ಯಾಂಟಿನ್ ಪ್ರಾರಂಭಿಸಲು ಇಲಾಖೆ ಯೋಜನೆ ರೂಪಿಸಿದೆ. ಜಿಲ್ಲೆಯ ಮಟ್ಟಿಗೆ ಮೊದಲ ಕ್ಯಾಂಟಿನ್ ಸೋಮವಾರಪೇಟೆ ಪಟ್ಟಣದಲ್ಲಿ ಪ್ರಾರಂಭವಾಗಿದೆ. ಕುಶಾಲನಗರ ಹಾಗೂ ಹಾರಂಗಿಯಲ್ಲಿ ಮುಂದಿನ ದಿನಗಳಲ್ಲಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದರು.ಮಲೆನಾಡು ಪ್ರದೇಶದ ಸಿಹಿ ನೀರಿನಲ್ಲಿ ಬೆಳೆಯುವ ಮೀನು ಉತ್ತಮ ಪೌಷ್ಠಿಕಾಂಶಯುಕ್ತ ಆಹಾರವಾಗಿದೆ. ಇತ್ತೀಚಿನ ದಿನಗಳಲ್ಲಿ ಯಥೇಚ್ಛವಾಗಿ ಮೀನು ದೊರೆಯುತ್ತಿದೆ. ಅನೇಕ ರೈತರು ಮೀನು ಕೃಷಿಯನ್ನು ಮುಖ್ಯ ಕಸುಬು ಮಾಡಿಕೊಂಡಿದ್ದಾರೆ. ಮೀನುಕೃಷಿ ಲಾಭದಾಯಕವಾಗಿದೆ ಎಂದು ಹೇಳಿದರು.

ಇಲ್ಲಿನ ಶಾಸಕರು ಮೀನು ಕೃಷಿಗೆ ಹೆಚ್ಚಿನ ಆಸಕ್ತಿ ವಹಿಸಿದ್ದಾರೆ. ಅನೇಕ ಯೋಜನೆಗಳು ಕಾರ್ಯಗತವಾಗಲು ಕಾರಣಕರ್ತರಾಗಿದ್ದಾರೆ. ಕ್ಯಾಂಟಿನ್ ಸೌಲಭ್ಯವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದರು.ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಆರ್.ಮಹೇಶ್, ಪಪಂ ಮುಖ್ಯಾಧಿಕಾರಿ ಸತೀಶ್, ಪ್ರಮುಖರಾದ ಕೆ.ಎಂ.ಲೋಕೇಶ್, ಎಚ್.ಎ.ನಾಗರಾಜ್ ಇದ್ದರು.೩ಎಸ್‌ಪಿಟಿ೨- ಸೋಮವಾರಪೇಟೆ ಮೀನುಗಾರಿಕೆ ಇಲಾಖೆ ವತಿಯಿಂದ ಪಟ್ಟಣದಲ್ಲಿ ಪ್ರಾರಂಭವಾದ ಮೊಬೈಲ್ ಮೀನಿನ ಕ್ಯಾಂಟಿನ್ ಅನ್ನು ಶಾಸಕ ಡಾ.ಮಂತರ್‌ಗೌಡ ಚಾಲನೆ ನೀಡಿದರು. ನಾಗರಾಜ್, ಲೋಕೇಶ್, ಮಿಲನ ಇದ್ದರು.