ಮುರಳೀಧರ್‌ ಶಾಂತಳ್ಳಿಕನ್ನಡಪ್ರಭ ವಾರ್ತೆ ಸೋಮವಾರಪೇಟೆಪಟ್ಟಣದಲ್ಲಿ ಆರು ವರ್ಷಗಳ ನಂತರ ಹಾಕಿಪ್ರಿಯರಿಗೆ ಅಂತಾರಾಷ್ಟ್ರೀಯ ಆಟಗಾರರ ಹಾಕಿ ಕೈ ಚಳಕ ನೋಡುವ ಅವಕಾಶ ಒದಗಿ ಬಂದಿದೆ. ಕೋವಿಡ್‌ ನಂತರ ಇದೇ ಪ್ರಥಮ ಬಾರಿಗೆ ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಮತ್ತು ಡಾಲ್ಫಿನ್ಸ್‌ ಸ್ಪೋರ್ಟ್ಸ್‌ ಕ್ಲಬ್‌ ಆಶ್ರಯದಲ್ಲಿ ಟರ್ಫ್‌ ಮೈದಾನದಲ್ಲಿ ದಿ. ರಂಗಸ್ವಾಮಿ ಕಪ್‌ ಹಾಕಿ ಪಂದ್ಯಾವಳಿ ಗುರುವಾರ ಆರಂಭವಾಗುತ್ತಿದೆ. ಕ್ರೀಡಾಕೂಟದಲ್ಲಿ ಒಟ್ಟು ೧೦ ತಂಡಗಳು ಪಾಲ್ಗೊಳ್ಳಲಿದ್ದು, ಪ್ರತಿ ತಂಡವೂ ಐವರು ಅತಿಥಿ ಆಟಗಾರರನ್ನು ಆಡಿಸಬಹುದು. ಹೀಗಾಗಿ ಹಾಕಿ ಆಟವನ್ನು ಕ್ರೀಡಾಪ್ರೇಮಿಗಳು ನಾಲ್ಕು ದಿನಗಳು ಕಣ್ತುಂಬಿಕೊಳ್ಳಬಹುದಾಗಿದೆ. ದಕ್ಷಿಣ ಕೊಡಗಿನಲ್ಲಿ ಪ್ರತಿ ವರ್ಷ ಹಾಕಿ ಪಂದ್ಯಾವಳಿಗಳು ನಡೆಯುತ್ತಿದೆ. ಆದರೆ ಸೋಮವಾರಪೇಟೆ ಭಾಗದಲ್ಲಿ ಹಲವು ವರ್ಷಗಳಿಂದ ಹಾಕಿ ಪಂದ್ಯಾವಳಿಯೇ ಸ್ಥಗಿತಗೊಂಡಿತ್ತು. ೨೦೧೧ರಲ್ಲಿ ಆರಂಭವಾದ ಡಾಲ್ಫಿನ್ಸ್‌ ಕ್ಲಬ್‌ ೧೫ ವರ್ಷಗಳಲ್ಲಿ ಇಂದಿನ ಪಂದ್ಯಾವಳಿ ಸೇರಿದಂತೆ ಒಟ್ಟು ಐದು ಬಾರಿ ಹಾಕಿ ಕ್ರೀಡಾಕೂಟವನ್ನು ಆಯೋಜಿಸಿದ್ದು, ನಾಲ್ಕು ಪಂದ್ಯಾವಳಿಗಳು ಮಡ್‌ ಗ್ರೌಂಡ್‌ ನಲ್ಲಿ ಜರುಗಿದರೆ, ಮೊದಲ ಬಾರಿಗೆ ಡಾಲ್ಫಿನ್ಸ್‌ ಕ್ಲಬ್‌ ಅಸ್ಟ್ರೋಟರ್ಫ್ ಮೈದಾನದಲ್ಲಿ ಕ್ರೀಡಾಕೂಟ ಆಯೋಜಿಸಿದೆ. ಕೋವಿಡ್ ನಿಂದಾಗಿ ಆರು ವರ್ಷಗಳು ಹಾಕಿ ಪಂದ್ಯಾವಳಿಗಳು ನಿಂತು ಹೋಗಿತ್ತು.ಉತ್ತರ ಕೊಡಗಿನಲ್ಲಿ ಹಾಕಿ ಆಟಕ್ಕೆ ಪ್ರೋತ್ಸಾಹ ನೀಡಿದ್ದೇ ಬ್ಲೂಸ್ಟಾರ್‌ ಹಾಕಿ ಕ್ಲಬ್‌. ಅನೇಕ ಅಂತಾರಾಷ್ಟ್ರೀಯ ಆಟಗಾರರನ್ನು ನೀಡಿದ ಕೊಡುಗೆ ಆ ಕ್ಲಬ್‌ ಗೆ ಸಲ್ಲುತ್ತದೆ. ನಂತರದಲ್ಲಿ ೨೦೧೧ ರಲ್ಲಿ ಸ್ಥಾಪನೆಗೊಂಡ ಡಾಲ್ಫೀನ್ಸ್‌ ಕ್ಲಬ್‌ ಕೂಡ ಹತ್ತು ಹಲವು ಆಟಗಾರರನ್ನು ಕ್ರೀಡಾ ಕ್ಷೇತ್ರಕ್ಕೆ ನೀಡಿರುವುದು ಸಾಧನೆಯೇ ಸರಿ.೭೦-೯೦ ರ ದಶಕದಲ್ಲಿ ಅಂದಿನ ಹಿರಿಯ ಆಟಗಾರರಾದ ಬ್ಲೂಸ್ಟಾರ್‌ ಕ್ಲಬ್‌ ನ ಸ್ಥಾಪಕ ಅಧ್ಯಕ್ಷ ಬಿ.ಎಸ್.ಪ್ರಕಾಶ್‌, ತಮಿಳುನಾಡು ಹಾಗೂ ಕರ್ನಾಟಕ ಎರಡೂ ರಾಜ್ಯಗಳನ್ನು ಹಾಕಿಯಲ್ಲಿ ಪ್ರತಿನಿಧಿಸಿ, ಭಾರತ ತಂಡಕ್ಕೆ ಆಯ್ಕೆಯಾಗುವಲ್ಲಿ ಕೊನೆ ಘಳಿಗೆಯಲ್ಲಿ ವಂಚಿತರಾದ ಮಿಂಚಿನ ಆಟಗಾರ ಬಿ.ಪಿ.ರಾಜು (ಕೃಷ್ಣ), ಅವರ ಸಹೋದರ ಬಿ.ಪಿ.ಚಂದ್ರಾಜು (ಇಂಡಿಯನ್‌ ಬ್ಯಾಂಕ್)‌ ಇಬ್ಬರೂ ಆಟಗಾರರು ಬಿ.ಪಿ.ಗೋವಿಂದ ಅವರ ಸಹೋದರರು, ಮೈಸೂರು ವಿವಿ ಆಟಗಾರ ಬಿ.ಎಂ.ಸುರೇಶ್‌, ಬಿ.ಕೆ.ಹಾಲಪ್ಪ(ರಾಷ್ಟ್ರೀಯ ಆಟಗಾರ), ‌ಗೋಲ್‌ ಕೀಪರ್‌ ಅಮ್ಮಾಟಂಡ ತಮ್ಮಯ್ಯ, ಮಿಂಚಿನ ಆಟಗಾರ ರೈಟ್‌ ಔಟ್‌ ಒಡಿಯಂಡ ಬಿದ್ದಪ್ಪ, ಸುರೇಶ್‌ ಹೆಬ್ಬಾಲೆ, ರೇಣುಕಾ ಪ್ರಸಾದ್‌ (ಮೂವರೂ ಸಿಐಎಲ್‌ ತಂಡಕ್ಕೆ ಆಯ್ಕೆಯಾದರು) ಡ್ರಿಬ್ಲರ್‌ ಎಸ್.ಬಿ.ಯಶವಂತ್, ಸೆಂಟರ್‌ ಫಾರ್ವರ್ಡ್ ಹಾಗೂ ಪೆನಾಲ್ಟಿ ತಜ್ಞ ಜಯರಾಮ್‌ (ಭದ್ರಾವತಿ ತಂಡಕ್ಕೆ) , ಐಟಿಐ ತಂಡಕ್ಕೆ ವಿನೋಬಾ ಮತ್ತು ಐ.ಡಿ.ರಾಜೇಂದ್ರ, ಟೆಲಿಕಾಂ ತಂಡಕ್ಕೆ ಲೆಫ್ಟ್‌ ಔಟ್‌ ಬಿ.ಎಸ್.‌ ದಿವಾಕರ್‌, ಒಡಿಯಂಡ ತಿಮ್ಮಯ್ಯ, ಅಶೋಕ್‌, ರಂಜನ್‌ (ಮೈಕೋ) ಗೋಲ್‌ ಕೀಪರ್‌ ಅಂಜದ್‌ ಬಯ್ಯಾ(ಒಂದು ಡಿ ಯಿಂದ ಇನ್ನೊಂದು ಡಿವರೆಗೆ ಹಳೆ ಪ್ಯಾಡ್‌ ನಲ್ಲಿ ಒದಿಯುತ್ತಿದ್ದ ಆಟಗಾರ), ಭಯ್ಯಾ ಮೈದಾನಕ್ಕಿಳಿದರೆ ಇಡೀ ಕ್ರೀಡಾಪ್ರೇಮಿಗಳು ಭಯ್ಯಾ, ಭಯ್ಯಾ ಎಂದು ಸಿಳ್ಳೆ ಹೊಡೆದು ಕೂಗುತ್ತಿದ್ದದ್ದನ್ನು ಇಂದಿಗೂ ಕ್ರೀಡಾಪ್ರೇಮಿಗಳು ಸ್ಮರಿಸುತ್ತಾರೆ. ಗೋಲ್‌ ಕೀಪರ್‌ಗಳಾದ ಪಿ.ಎಲ್.ಮಂಜುನಾಥ್‌, ಮೇರಿಯಂಡ ಮಣಿ ಉತ್ತಪ್ಪ, ಕೃಪಾಲ್‌, ಎನ್.ಎಲ್.ಸುರೇಶ್‌ ಕುಮಾರ್‌ (ಪಿಟಿ ಮಾಸ್ಟರ್)‌, ಕೆ.ಎಲ್.‌ ಗಿರಿಧರ್‌ ಆಚಾರ್ಯ ಯಾವುದೇ ರಾಷ್ಟ್ರೀಯ ಮಟ್ಟದ ಆಟಗಾರರಿಗೆ ಕಡಿಮೆ ಇಲ್ಲದಂತೆ ಆಡುತ್ತಿದ್ದ ಪರಿ ಕ್ರೀಡಾಪ್ರೇಮಿಗಳನ್ನು ಮೂಕವಿಸ್ಮಿತರನ್ನಾಗಿಸಿತ್ತು. ಡ್ಯಾಶಿಂಗ್‌ ಆಟಗಾರ, ಕೊಡಗಿನಲ್ಲೇ ಪ್ರಥಮವಾಗಿ ರಾಷ್ಟ್ರೀಯ ರೆಫರಿಯಾಗಿ ಆಯ್ಕೆಯಾದ ತಂಬೂರಿ ಶಶಿಧರ್‌, ಸೆಂಟರ್‌ ಫಾರ್ವರ್ಡ್ ಸಿ.ಬಿ.ಜಗದೀಶ್‌‌ ಬಿದ್ದಯ್ಯ, ಜೂನಿಯರ್‌ ಧನರಾಜ್‌ ಪಿಳ್ಳೆ ಎಂದೇ ಖ್ಯಾತರಾಗಿದ್ದ ಸುದೇವ್‌, ಫುಲ್‌ ಬ್ಯಾಕ್‌ ಗಳಾದ ಬೊವಿಲ್ಯಾಂಡರ್‌ ರಾಮದೇವ್‌ ಮತ್ತು ಡಿ.ವಿ.ಯತೀಶ್‌, ವಿರೂಪಾಕ್ಷ , ಎಚ್‌.ಎಂ.ಕಾಳಪ್ಪ, ಬೊಳ್ಳು ಚಂಗಪ್ಪ, ಎಂ.ಎಸ್.ಉಮೇಶ್‌, ಲಕ್ಕಿ ಜಯರಾಂ, ಬಿ.ವಿ.ಜಯರಾಂ, ಕಸ್ಟಮ್ಸ್‌ ಸಹಾಯಕ ಆಯುಕ್ತ ಎ.ಟಿ.ಲಕ್ಷ್ಮಿಕಾಂತ್‌, ಫ್ಯಾಕ್ಟ್‌ ಲಕ್ಷ್ಮಯ್ಯ, ಭಾರತ ತಂಡದ ನಾಯಕ ಬಿ.ಪಿ.ಗೋವಿಂದ ಅವರ ಹಿರಿಯ ಸಹೋದರ ಬಿ.ಪಿ.ನಾರಾಯಣ ಅವರ ಪುತ್ರಿ ಭಾರತೀಯ ತಂಡದ ಆಟಗಾರ್ತಿ ಪ್ರಸ್ತುತ ರೈಲ್ವೆಸ್ ನಲ್ಲಿರುವ ಬಿ.ಎನ್.ಹೇಮಲತಾ,‌ ಎಲೈಸಿ ತಂಡದ ಬೆಂಗಳೂರು ವಿವಿ ಆಟಗಾರ ಕೆ.ಟಿ.ಉತ್ತಪ್ಪ, ಚಂಗಣಿ , ಬಿ.ಟಿ.ಗಣೇಶ್‌, ಅರುಣ್‌ ಬಿ.ಈ, ಎ.ಬಿ. ಅರುಣ್‌ ಕುಮಾರ್‌ ( ಇಂಡಿಯನ್‌ ಒವರ್‌ ಸೀಸ್‌ ಬ್ಯಾಂಕ್)‌, ಅಶೋಕ್(ಡಾಲ್ಫಿನ್ಸ್‌ ಸ್ಥಾಪಕ ಅಧ್ಯಕ್ಷ), ಮಾಟ್ನಳ್ಳಿ ಮಹೇಶ್ (ಡಾಲ್ಫಿನ್ಸ್‌ ‍ಅಧ್ಯಕ್ಷ), ಬಿ.ಎಂ.ರಾಮಪ್ರಸಾದ್‌, ಬಿ.ಎಸ್.ರವಿಚಂದ್ರ (ಬೆಂಗಳೂರು ಕ್ರೀಡಾ ನಿಲಯದ ಆಟಗಾರ), ಬಿ.ಟಿ.ಪೂರ್ಣೇಶ್ (‌ಹಾಕಿ ಕೋಚ್‌ ಮತ್ತು ಪಿಟಿ ಟೀಚರ್‌), ಅಭಿಷೇಕ್‌ ಗೋವಿಂದಪ್ಪ, ದಿ. ಚಂಗಣಿ ಅವರ ರಿವರ್‌ ಸೈಡರ್ಸ್‌ ತಂಡದ ಹಲವು ಆಟಗಾರರು ಭಾರತದ ಹಾಕಿ ತಂಡವನ್ನೇ ಹೋಲುವಷ್ಟರ ಮಟ್ಟಿಗೆ ಹಾಗೂ ಆಟದಲ್ಲೂ ಕೂಡ ಯಾವುದೇ ರಾಷ್ಟ್ರೀಯ ತಂಡಕ್ಕೆ ಕಡಿಮೆ ಇಲ್ಲದಂತೆ ಆಡುತ್ತಿದ್ದ ಆಟದ ವೈಖರಿ ಈಗಲೂ ಕ್ರೀಡಾಪ್ರೇಮಿಗಳಲ್ಲಿ ಅಚ್ಚಳಿಯದೇ ಉಳಿದಿದೆ. ಭಾರತೀಯ ಹಾಕಿ ತಂಡದ ನಾಯಕ, ಹಾಕಿ ದಂತ ಕತೆ ಬಿ.ಪಿ.ಗೋವಿಂದ ಅವರು ಕೂಡ ಬ್ಲೂಸ್ಟರ್ಸ್‌ ತಂಡಕ್ಕೆ ಆಡಿದ್ದಲ್ಲದೇ ಮಹಾಪೋಷಕರಾಗಿಯೂ ಸಹಕಾರ ನೀಡಿದ್ದರು.ನಾಲ್ಕು ದಶಕಗಳ ಹಿಂದಕ್ಕೆ ಸರಿದರೆ, ಅಂದು ಕೆಎಸ್‌ಆರ್‌ಪಿ ತಂಡದ ನಾಯಕ ರ‍್ದಾರ್‌, ಎಂಇಜಿ ತಂಡದ ಆಟಗಾರ ಪಿ.ಜಿ. ಗಣೇಶ್‌, ಚಂಗಣಿಯವರ ರಿವರ್‌ ಸೈರ್ಸ್‌ ತಂಡಕ್ಕೆ ಅತಿಥಿ ಆಟಗಾರರಾಗಿ ಬರುತ್ತಿದ್ದ ರಾಜಶೇಖರ್‌, ಗುಣಶೇಖರನ್‌ (ಮಿಂಚಿನ ಆಟಗಾರ), ಐಟಿಐ ಹಸ್ತ, ಪ್ರಸ್ತುತ ಹಾಕಿ ಕರ್ನಾಟಕದ ಅಂಜಪರವಂಡ ಬಿ.ಸುಬ್ಬಯ್ಯ (ಸುಭಾಷ್‌), ಐಟಿಐನ ಅಂಜಪರವಂಡ ಕಾರ್ಯಪ್ಪ, ಬ್ಲೂಸ್ಟಾರ್‌ ತಂಡದ ಒಡಿಯಂಡ ಉತ್ತಪ್ಪ, ಡೈನಮೈಟ್ಸ್‌ ತಂಡದ ದತ್ತ ಕರುಂಬಯ್ಯ, ವಾಂಡರರ್ಸ್‌ ತಂಡದ ಗಿರಿ ಮಾಚಯ್ಯ, ನಾಣಯ್ಯ, ಚುಮ್ಮಿ ದೇವಯ್ಯ, ಭಾರತ ತಂಡದ ಆಟಗಾರ ಒಲಂಪಿಯನ್‌ ಬಿ.ಸಿ.ಪೂಣಚ್ಚ,ಭಾರತ ಹಾಕಿ ತಂಡದ ನಾಯಕರಾಗಿದ್ದ ಎಂ.ಎಂ.ಸೋಮಯ್ಯ, ಬಿ.ಕೆ.ಸುಬ್ರಮಣಿ , ಬಿ.ಎ.ಚಂಗಪ್ಪ(ಬೆಂಗಳೂರು ಕ್ರೀಡಾನಿಲಯ) ಅವರುಗಳು ಕೂಡ ಸೋಮವಾರಪೇಟೆಯ ಮೈದಾನದಲ್ಲಿ ಆಟ ಆಡಿದ್ದು ವಿಶೇಷ. ವಾಂಡರರ್ಸ್‌ ತಂಡದ ನೆರವಂಡ ಭರತ್‌, ಸಿವಿಎಸ್‌ ರಾಮು,ಬ್ಲೂಸ್ಟಾರ್ಸ್ ಹಾಗೂ ವಾಂಡರರ್ಸ್ ತಂಡದ ಆಟಗಾರ ಎಸ್.ಎ.ಗಣೇಶ್‌ (ವಾಂಡರರ್ಸ್ ತಂಡದ ನಾಯಕ), ನಾಪೋಕ್ಲು ಕಾಟುಮಣಿರ ಉಮೇಶ್‌, ಸಿಐಎಲ್‌ ತಂಡದ ನಗುಂಬಾಲನ್‌, ಕೆಜಿಎಫ್‌ ಬೆಮೆಲ್‌ ತಂಡದ ದಕ್ಷಿಣ ಭಾರತ ತಂಡದ ನಾಯಕನಾಗಿ ಮಿಂಚಿದ್ದ ಪೊನ್ನುಮಧುರೈ , ಅವರ ಸ್ಟಿಕ್‌ ಗೆ ಬಾಲ್‌ ಸಿಕ್ಕಿತೆಂದರೆ ಇಡೀ ಮೈದಾನ ಪರ‍್ತಿ ಡ್ರಿಬಲ್‌ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಿದ್ದ ಪರಿ ಭಾರತದ ಹಾಕಿ ತಂಡದ ದಂತಕತೆ ಮೇಜರ್‌ ಧ್ಯಾನ್‌ಚಂದ್‌ ಅವರನ್ನು ನೆನಪಿಸುವಂತೆ ಆಡುತ್ತಿದ್ದ ಅದ್ಭುತ ಆಟಗಾರ ಎಂದು ಹಿರಿಯ ಹಾಕಿ ಆಟಗಾರ ಮತ್ತು ತರಬೇತುದಾರ ಎಸ್‌.ಬಿ.ಯಶವಂತ್ ಹೆಮ್ಮೆ ವ್ಯಕ್ತಪಡಿಸುತ್ತಾರೆ. ೯೦ರ ದಶಕದಲ್ಲಿ ಕರ್ನಾಟಕ ರಾಜ್ಯ ಹಾಕಿ ತಂಡಕ್ಕೆ ಸತತ ೧೦ ವರ್ಷ ನಾಯಕನಾಗಿ ಆಯ್ಕೆಯಾಗಿ ಮುನ್ನೆಡೆಸಿದ್ದ ಹಾಗೂ ಜೂನಿಯರ್‌ ಇಂಡಿಯಾ ಕ್ಯಾಂಪ್‌ ನಲ್ಲಿದ್ದ ಕೆನರಾ ಬ್ಯಾಂಕ್‌ ತಂಡದ ಆಟಗಾರರಾದ ವಿ.ರಾಮು ಮತ್ತೋರ್ವ ಆಟಗಾರರಾದ ಕೆನರಾ ಬ್ಯಾಂಕ್‌ ತಂಡದ ಬಿ.ಎಸ್.ವಿಜಯಕುಮಾರ್, ಹರಪ್ಪಳ್ಳಿ ಕಾಳಪ್ಪ, ಎ.ಡಿ.ಶುಭಾಕರ, ಜಿತೇಂದ್ರ(ಸೆಂಟ್ರಲ್‌ ಎಕ್ಸೈಸ್)‌, ಗೌತಮ್(ಬೆಂಗಳೂರು ವಿವಿ ಆಟಗಾರ), ಬಿ.ಎಂ.ಗಣೇಶ್‌ (ಎಎಸ್‌ಸಿ), ಬಿ.ಎನ್.ಪ್ರದೀಪ್(ಬೆಂಗಳೂರು ವಿವಿ ತಂಡದ ನಾಯಕ), ಬಿ.ಆರ್.ಮನೋಹರ್‌(ಬೆಂಗಳೂರು ವಿವಿ ತಂಡದ ಉಪನಾಯಕ), ಎಸ್‌.ಎಸ್‌.ಮನೋಹರ್(ಮಂಗಳೂರು ವಿವಿ ತಂಡದ ಆಟಗಾರ) ಬಾಬಿ ಮಿಲನ್‌ ಮತ್ತು ಸೂರ್ಯಕಾಂತ್ ( ಎಜಿಒಆರ್‌ಸಿ), ದರ್ಶನ್ (ಕೆಸ್ಸಾರ್ಪಿ), ಬಿ.ಎಂ.ಲಿಖಿತ್‌, ರಾಜ್ಯ ಕಿರಿಯರ ತಂಡದ ನಾಯಕನಾಗಿ ಮಿಂಚುತ್ತಿರುವ ಧ್ರುವ ಶ್ಯಾಮ್‌ ಪ್ರಸಾದ್ ಸೇರಿದಂತೆ ಹಲವು ಆಟಗಾರರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಮಿಂಚಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದವರು!ಹಿರಿಯ ಆಟಗಾರ ಹಾಲಪ್ಪನವರ ಪುತ್ರ ಅರ್ಜುನ್ ಹಾಲಪ್ಪ ಭಾರತ ತಂಡದ ನಾಯಕನಾಗಿ ಸೋಮವಾರಪೇಟೆಯ ಹಾಗೂ ಕೊಡಗಿನ ಕೀರ್ತಿ ಪತಾಕೆ ಹಾರಿಸಿದ್ದಾರೆ. ಭಾರತ ತಂಡದ ಆಟಗಾರ ವಿಕ್ರಂ ಕಾಂತ್‌, ಭಾರತ ತಂಡದ ಉಪನಾಯಕನಾಗಿ ಗಮನ ಸೆಳೆದಿದ್ದ ಮಿಂಚಿನ ಆಟಗಾರ ಎಸ್.ವಿ.ಸುನಿಲ್‌, ಗೌಡಳ್ಳಿ ಹರಿಪ್ರಸಾದ್‌, ಆಭರಣ್‌ ಸುದೇವ್‌, ವಚನ್‌ ಅಶೋಕ್‌ ಹಾಗೂ ಮರಾಠಾ ಲೈಟ್‌ ಇನ್‌ಫ್ಯಾಂಟ್ರಿಯಲ್ಲಿ ಹಿರಿಯ ಹಾಕಿ ಆಟಗಾರನಾಗಿ ನಂತರ ಭಾರತ ಹಾಕಿ ತಂಡದ ಕಿರಿಯರ ವಿಭಾಗದ ಕೋಚ್‌ ಆಗಿ ಆಯ್ಕೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಸಿ.ಬಿ.ಜನಾರ್ದನ್, ಇಂಡಿಯನ್‌ ಆರ್ಮಿ ತಂಡದ ಹಾಕಿ ಕೋಚ್‌ ಆಗಿದ್ದ ಸಿ.ಬಿ.ದೇವದಾಸ್‌, ಏರ್‌ ಇಂಡಿಯಾ ತಂಡದಲ್ಲಿ ಆಡಿ ಭಾರತ ಕಿರಿಯರ ತಂಡವನ್ನು ಪ್ರತಿನಿಧಿಸಿದ್ದ ಕಿಶೋರ್‌ ಬಿದ್ದಯ್ಯ, ಐಗೂರಿನ ಕೆ.ಪಿ.ರಾಯ್‌ ಭಾರತದ ಕಿರಿಯರ ತಂಡವನ್ನು ಪ್ರತಿನಿಧಿಸಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಪಿಕಾರ್ಡ್‌ ಬ್ಯಾಂಕ್‌ ನಿರ್ಧೇಶಕ ಬಿ.ಎನ್.ಮಂಜುನಾಥ್‌ ಹೇಳುತ್ತಾರೆ. ೧೯೬9ರಲ್ಲಿ ಒಮ್ಮೆ ಭಾರತೀಯ ಹಾಕಿ ತಂಡದ ದಂತ ಕತೆ ಮತ್ತು ನಾಯಕ ಮೇಜರ್‌ ಧ್ಯಾನ್‌ ಚಂದ್‌ ಅವರು ಕೂಡ ಸೋಮವಾರಪೇಟೆಯ ಚಿಕ್ಕಬಸಪ್ಪ ಕ್ಲಬ್ ಗೆ ಬಂದಿದ್ದರು ಎಂದರೆ ಸೋಮವಾರಪೇಟೆಯಲ್ಲಿ ಹಾಕಿ ಪ್ರೇಮ ಎಷ್ಟಿತ್ತೆಂಬುದನ್ನು ನೆನಪಿಸಿಕೊಳ್ಳಬಹುದು.

ಕ್ರೀಡಾಕೂಟದಲ್ಲಿ ಮಡಿಕೇರಿಯ ಚಾರ್ಮರ್ಸ್, ಕೂಡಿಗೆ ಸ್ಪೋರ್ಟ್ಸ್‌ ಹಾಸ್ಟೆಲ್, ಬಿಬಿಸಿ ಗೋಣಿಕೊಪ್ಪ, ಬರ‍್ಲಿನಾಡು ತಂಡ, ಕುಂದ ತಂಡ, ಅಂಜಿಗೆರಿನಾಡ್‌, ಕೂರ್ಗ್ ಚಾಲೆಂಜರ್ಸ್, ಕೋಣನಕಟ್ಟೆ, ಮಲ್ಮ ಕಕ್ಕಬ್ಬೆ ಹಾಗೂ ಸ್ಥಳೀಯ ಡಾಲ್ಫಿನ್ಸ್‌ ಕ್ಲಬ್‌ ನ ತಂಡ ಸೇರಿದಂತೆ ಒಟ್ಟು ೧೦ ತಂಡಗಳು ಪಾಲ್ಗೊಂಡಿವೆ. ಪ್ರತಿ ತಂಡದಲ್ಲೂ ಐವರು ಅತಿಥಿ ಆಟಗಾರರನ್ನು ಆಡಿಸುವ ಅವಕಾಶವಿರುವುದರಿಂದ ಐವರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಹಾಕಿ ಆಟಗಾರರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಅಂತಾರಾಷ್ಟ್ರೀಯ ಆಟಗಾರರಾದ ರಾಹಿಲ್‌ ಮಹ್ಮದ್‌ ಮೊಹಿಸಿನ್‌, ಆಭರಣ್‌ ಸುದೇವ್‌, ಬಿಪಿನ್‌, ವಚನ್‌ ಅಶೋಕ್‌, ಸುನಿಲ್‌ ಪಿಬಿ ಸೇರಿದಂತೆ ಉತ್ತರ ಭಾರತ, ಪಂಜಾಬ್‌, ಬಿಹಾರ್‌, ಒಡಿಷಾ, ಹರಿಯಾಣ ,ತಮಿಳುನಾಡು ಸೇರಿದಂತೆ ಹಲವು ಹಿರಿಯ ಆಟಗಾರರು ಪಂದ್ಯಾವಳಿಯಲ್ಲಿ ತಮ್ಮ ಹಾಕಿ ಕೌಶಲ್ಯವನ್ನು ಹಾಕಿ ಪ್ರಿಯರಿಗೆ ಉಣ ಬಡಿಸಲಿದ್ದಾರೆ. ಡಾಲ್ಫಿನ್ಸ್‌ ಕ್ಲಬ್‌ನ ಅಧ್ಯಕ್ಷರಾಗಿ ಮಾಟ್ನಳ್ಳಿ ಮಹೇಶ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾ.೧ಕ್ಕೆ ಫೈನಲ್‌ ಪಂದ್ಯಾಟ ನಡೆಯಲಿದ್ದು, ನಾಲ್ಕು ದಿನಗಳು ನಡೆಯುವ ಹಾಕಿ ಪಂದ್ಯಾವಳಿಯು ನಾಕ್‌ ಔಟ್‌ ಮಾದರಿಯಲ್ಲಿ ನಡೆಯಲಿದ್ದು ಹಲವು ವರ್ಷಗಳ ನಂತರ ಹಾಕಿ ಪ್ರೇಮಿಗಳಿಗೆ ರಸದೌತಣ ನೀಡಲಿದೆ.

ನಮ್ಮ ಕ್ಲಬ್‌ ಆರಂಭವಾದ ನಂತರ ಈವರೆಗೆ ನಾಲ್ಕು ಪಂದ್ಯಾವಳಿಗಳನ್ನು ಮಡ್‌ ಗ್ರೌಂಡ್‌ ನಲ್ಲಿಯೂ, ಇದೇ ಮೊದಲ ಬಾರಿಗೆ ಟರ್ಫ್‌ ಮೈದಾನದಲ್ಲಿ ಆಯೋಜಿಸಿದ್ದೇವೆ. ಹಾಕಿ ಕರ್ನಾಟಕ, ಹಾಕಿ ಕೂರ್ಗ್ ಸಹಭಾಗಿತ್ವದಲ್ಲಿ ಆಯೋಜಿಸಿದ್ದೇವೆ. ಸೋಮವಾರಪೇಟೆಯಲ್ಲಿ ಹಾಕಿ ಆಟದ ಗತವೈಭವವನ್ನು ಮತ್ತೆ ಮರುಕಳಿಸುವಂತೆ ಮಾಡುವುದು ಮತ್ತು ಹಾಕಿ ಕ್ರೀಡೆಗೆ ಉತ್ತೇಜನ ನೀಡುವುದು ಕ್ಲಬ್‌ನ ಉದ್ದೇಶಗಳಲ್ಲೊಂದಾಗಿದೆ. -ಅಶೋಕ್‌, ಸ್ಥಾಪಕ ಅಧ್ಯಕ್ಷರು, ಡಾಲ್ಫಿನ್ಸ್‌ ಸ್ಪೋರ್ಟ್ಸ್‌ ಕ್ಲಬ್‌, ಸೋಮವಾರಪೇಟೆ.