ಸೋಮವಾರಪೇಟೆ: ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ

| Published : May 22 2024, 12:47 AM IST

ಸಾರಾಂಶ

ಸೋಮವಾರಪೇಟೆ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಪುಷ್ಪಗಿರಿ ಎಫ್‍ಪಿಒ ಮತ್ತು ಭುವನ ಮಂದಾರ ಸಹಭಾಗಿತ್ವದಲ್ಲಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಪುನರ್ ಸೃಷ್ಟಿಸಿ ಮಣ್ಣನ್ನು ಜೀವಂತಗೊಳಿಸುವ ವಿಧಾನ ಮತ್ತು ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ನಡೆಯಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳನ್ನು ಪುನರ್ ಸೃಷ್ಟಿಸಿ ಮಣ್ಣನ್ನು ಜೀವಂತಗೊಳಿಸುವ ವಿಧಾನ ಮತ್ತು ಸಾವಯವ ಕೃಷಿ ಮಾಹಿತಿ ಕಾರ್ಯಾಗಾರ ಸೋಮವಾರಪೇಟೆಯಲ್ಲಿ ಸೋಮವಾರ ನಡೆಯಿತು.

ಇಲ್ಲಿನ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಪುಷ್ಪಗಿರಿ ಎಫ್‍ಪಿಒ ಮತ್ತು ಭುವನ ಮಂದಾರ ಸಹಭಾಗಿತ್ವದಲ್ಲಿ ಕಾರ್ಯಾಗಾರ ನಡೆಯಿತು. ರಾಸಾಯನಿಕ ರಹಿತ ವ್ಯವಸಾಯ ಮತ್ತು ಫಲವತ್ತಾದ ಮಣ್ಣನ್ನು ಕಾಪಾಡಿಕೊಳ್ಳುವ ಬಗ್ಗೆ ಭುವನ ಮಂದಾರ ಸಂಸ್ಥೆಯ ಖಾಲಿಸ್ತ ಡಿಸಿಲ್ವ ಮಾತನಾಡಿ, ಈಗಾಗಲೇ ರೈತರು ಹೆಚ್ಚಿನ ಫಸಲಿನ ಆಸೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ರಾಸಾಯನಿಕ ಗೊಬ್ಬರವನ್ನು ಮಣ್ಣಿಗೆ ಸುರಿದು ಭೂಮಿ ಬರಡಾಗಿದೆ. ಭೂಮಿ ತನಗೆ ಬೇಕಾದ ಗೊಬ್ಬರನ್ನು ತಾನೇ ಉತ್ಪಾದಿಸುವ ಶಕ್ತಿ ಹೊಂದಿದೆ. ಅದಕ್ಕೆ ನಾವು ವಿರುದ್ಧವಾಗಿ ಕೃಷಿ ಚಟುವಟಿಕೆ ಮಾಡುವ ಮೂಲಕ ಮಣ್ಣನ್ನು ಹಾಳುಮಾಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಉತ್ತಮ ಪರಿಸರ ಮತ್ತು ಭೂಮಿಯ ಫಲವತ್ತತೆಯನ್ನು ಕಾಪಾಡಿಕೊಳ್ಳಲು ನಾವು ನೈಸರ್ಗಿಕ ಮತ್ತು ಸಾವಯವ ಕೃಷಿಯತ್ತ ಗಮನ ಹರಿಸಬೇಕಿದೆ ಎಂದು ತಿಳಿಸಿದರು.

ರಾಸಾಯನಿಕ ಗೊಬ್ಬರ ಮತ್ತು ಕ್ರಿಮಿನಾಶಕ ಬಳಸಿ ಕೃಷಿ ಮಾಡುವುದರಿಂದ ಫಸಲಿನಲ್ಲಿ ಅದು ಕಂಡುಬರುವುದರಿಂದ ವಿದೇಶಗಳಿಂದ ನಮ್ಮ ಕೃಷಿ ಉತ್ಪನ್ನಗಳನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ. ಆದುದ್ದರಿಂದ ನಾವು ರಾಸಾಯನಿಕ ರಹಿತಿ ಕೃಷಿಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳುವ ಮೂಲಕ ಕೃಷಿ ಚಟುವಟಿಕೆ ನಡೆಸಬೇಕೆಂದರು.

ಪುಷ್ಪಗಿರಿ ಎಫ್‍ಪಿಒ ಅಧ್ಯಕ್ಷ ಬನ್ನಳ್ಳಿ ಸತೀಶ್ ಮಾತನಾಡಿ, ರಾಸಾಯಕ ಗೊಬ್ಬರ ಬಳಸಿ ಮಾಡುವ ಕೃಷಿಗಿಂತಲೂ ಸಾವಯವ ಕೃಷಿಯಿಂದ ರೈತರು ಹೆಚ್ಚಿನ ಲಾಭಗಳಿಸಬಹುದು. ಅಲ್ಲದೆ, ಗುಣಮಟ್ಟದ ಆಹಾರ ಸಾಮಾಗ್ರಿ ದೊರೆಯುವುದು. ಇಂದಿಗೂ ಹಲವಾರು ನಿಷೇಧಿತ ರಾಸಾಯನಿಕಗಳು ಮಾರಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಅವುಗಳನ್ನು ಕೂಡಲೇ ಹಿಂದಕ್ಕೆ ಪಡೆಯಬೇಕೆಂದರು.

ಸಾವಯವ ಕೃಷಿ ಉತ್ಪನ್ನಗಳನ್ನು ಜರ್ಮನಿಯ ಕಂಪೆನಿಯೊಂದು ಕೊಂಡುಕೊಳ್ಳಲು ಮುಂದಾಗಿದ್ದು, ಅದಕ್ಕಾಗಿ ಸಾವಯವ ಕೃಷಿಕರು ನೋಂದಾಯಿಸಿಕೊಂಡು ಕೃಷಿ ಮಾಡಬೇಕಿದೆ. ಸದ್ಯದಲ್ಲಿಯೇ ಸಾವಯವ ಕೃಷಿಕರ ತಂಡ ರಚಿಸಲಾಗುವುದು ಎಂದರು.

ಕೃಷಿಕರಾದ ನಾಕಲಗೋಡಿನ ಪ್ರದೀಪ್‍ಕುಮಾರ್, ಅರೆಯೂರಿನ ಎಸ್.ಪಿ. ಜೋಯಪ್ಪ, ಕೆ.ಸಿ. ಮಂಜು, ಯಡವನಾಡಿನ ಉಮೇಶ್ ರಾಜೇ ಅರಸ್, ಯಡೂರಿನ ಮನೋಹರ, ಕಿಬ್ಬೆಟ್ಟದ ಕೆ.ಜೆ. ಶೇಷಾದ್ರಿ ಮತ್ತಿತರರು ಇದ್ದರು.21ಎಸ್‍ಪಿಟಿ04: ಸೋಮವಾರಪೇಟೆ ಸಹಕಾರ ಒಕ್ಕೂಟದ ಸಭಾಂಗಣದಲ್ಲಿ ಪುಷ್ಪಗಿರಿ ಎಫ್‍ಪಿಒ ಮತ್ತು ಭುವನ ಮಂದಾರ ಸಹಭಾಗಿತ್ವದಲ್ಲಿ ಕಾರ್ಯಾಗಾರದಲ್ಲಿ ಭುವನಮಂದಾರದ ಖಾಲಿಸ್ತ ಡಿಸಿಲ್ವ ಮಾತನಾಡಿದರು.