ಸೋಮವಾರಪೇಟೆ ಯೋಜನಾ ಪ್ರಾಧಿಕಾರ ಕಚೇರಿ ಖಾಲಿ, ಖಾಲಿ: ಅಸಮಾಧಾನ

| Published : Aug 19 2025, 01:00 AM IST

ಸಾರಾಂಶ

ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಚೇರಿ ಸಂಕೀರ್ಣದಲ್ಲಿರುವ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಕಚೇರಿ ಖಾಲಿ ಖಾಲಿಯಾಗಿರುವ ಬಗ್ಗೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಇಲ್ಲಿನ ಪಟ್ಟಣ ಪಂಚಾಯಿತಿ ಕಚೇರಿ ಸಂಕೀರ್ಣದಲ್ಲಿರುವ ಸೋಮವಾರಪೇಟೆ ಯೋಜನಾ ಪ್ರಾಧಿಕಾರದ ಕಚೇರಿ ಖಾಲಿ ಖಾಲಿಯಾಗಿರುವ ಬಗ್ಗೆ ತಾಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಪ್ರಮುಖರು ಅಸಮಾಧಾನ ವ್ಯಕ್ತಪಡಿಸಿದ್ದು, ಸಾರ್ವಜನಿಕರಿಗೆ ಅಗತ್ಯ ಸೇವೆಗಳನ್ನು ಒದಗಿಸುವಲ್ಲಿ ಪ್ರಾಧಿಕಾರ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.ಯೋಜನಾ ಪ್ರಾಧಿಕಾರದಿಂದ ಸಾರ್ವಜನಿಕ ಕೆಲಸ ಕಾರ್ಯಗಳು ನಿರೀಕ್ಷಿತ ಮಟ್ಟದಲ್ಲಿ ನಡೆಯದೇ ಇರುವ ಬಗ್ಗೆ ಚರ್ಚೆ ನಡೆಸಲೆಂದು ಸಮಿತಿಯ ಪದಾಧಿಕಾರಿಗಳು ಕಚೇರಿಗೆ ತೆರಳಿದ ಸಂದರ್ಭ, ಕಚೇರಿ ಹೊರಗಿನಿಂದ ಬಾಗಿಲು ಹಾಕಿಕೊಂಡಿರುವುದು, ಕಚೇರಿಯ ಒಳಗೆ ಯಾವೊಬ್ಬ ಸಿಬ್ಬಂದಿ, ಅಧಿಕಾರಿಯೂ ಇಲ್ಲದಿರುವುದು ಕಂಡುಬಂತು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಮಿತಿ ಅಧ್ಯಕ್ಷ ಅರುಣ್ ಕೊತ್ನಳ್ಳಿ, ಸರ್ಕಾರ ಪಟ್ಟಣ ಪಂಚಾಯಿತಿಯನ್ನು ಉನ್ನತೀಕರಿಸುವ ದೃಷ್ಟಿಯಿಂದ ನಗರಾಭಿವೃದ್ಧಿ ಇಲಾಖೆಯ ಮೂಲಕ ಸೋಮವಾರಪೇಟೆ ಯೋಜನಾ ಪ್ರಾಧಿಕಾರ ರಚಿಸಿದ್ದು, ಇದನ್ನು ಸಮರ್ಪಕವಾಗಿ ಕಾರ್ಯಗತಗೊಳಿಸುವಲ್ಲಿ ಸಂಬಂಧಿಸಿದವರು ಎಡವುತ್ತಿದ್ದಾರೆ ಎಂದು ದೂರಿದರು.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸೋಮವಾರಪೇಟೆ ನಗರ, ಚೌಡ್ಲು, ಹಾನಗಲ್ಲು, ಬೇಳೂರು, ನೇರುಗಳಲ್ಲಿ ಗ್ರಾಮ ಪಂಚಾಯಿತಿಯ ಕೆಲ ಗ್ರಾಮಗಳೂ ಸಹ ಈ ಯೋಜನಾ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುತ್ತಿದ್ದು, ಕಟ್ಟಡ ನಿರ್ಮಾಣ, ೯/೧೧ ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳಿಗೆ ಯೋಜನಾ ಪ್ರಾಧಿಕಾರದ ಅನುಮತಿ ಬೇಕಿದೆ. ಆದರೆ, ಪ್ರಾಧಿಕಾರ ನೆಪಮಾತ್ರಕ್ಕೆ ಇದ್ದು, ಸಾರ್ವಜನಿಕರಿಗೆ ಯಾವುದೇ ಸೇವೆಗಳು ಲಭಿಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಕಚೇರಿಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲೆಂದು ಮುಂಚಿತವಾಗಿಯೇ ಸಂಬಂಧಿಸಿದ ಅಧ್ಯಕ್ಷರು, ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆವು. ನಿಗದಿತ ದಿನಾಂಕದಂದು ಯಾರೂ ಸಹ ಕಚೇರಿಯಲ್ಲಿ ಇಲ್ಲ. ಇದರಿಂದಾಗಿ ಜನಸಾಮಾನ್ಯರ ಕೆಲಸ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ. ಶಾಸಕರು ಈ ಬಗ್ಗೆ ಗಮನ ಹರಿಸಿ ಆಡಳಿತ ವ್ಯವಸ್ಥೆ ಸುಧಾರಣೆಗೆ ಕ್ರಮ ವಹಿಸಬೇಕೆಂದು ಅರುಣ್ ಕೊತ್ನಳ್ಳಿ ಆಗ್ರಹಿಸಿದರು.ಈ ಸಂದರ್ಭ ಸಮಿತಿಯ ಉಪಾಧ್ಯಕ ಕೆ.ಎನ್. ದೀಪಕ್, ಕಾರ್ಯದರ್ಶಿ ಆದರ್ಶ್ ತಮ್ಮಯ್ಯ ಪ್ರಮುಖರಾದ ಹೂವಯ್ಯ, ತ್ರಿಶೂಲ್ ಹರಗ, ಮಂಜುನಾಥ್, ವಸಂತ್, ನಾಗಂಡ ಭವಿನ್. ಉದಯ, ಅಂಕುಶ್, ನಿತನ್, ವಿಜಯ, ಸುಲೆಮಾನ್, ಹರೀಶ್ ಇದ್ದರು.