ಸಾರಾಂಶ
ಕೊಡಗು ಜಿಲ್ಲಾ ಪರಿಶಿಷ್ಟಜಾತಿ-ಪಂಗಡಗಳ ನಿವೃತ್ತ ನೌಕರರ ಸಂಘದ ವತಿಯಿಂದ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಪುಲೆ ಜಯಂತಿ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಜಿಲ್ಲಾ ಪರಿಶಿಷ್ಟಜಾತಿ-ಪಂಗಡಗಳ ನಿವೃತ್ತ ನೌಕರರ ಸಂಘದ ವತಿಯಿಂದ ಸಾಮಾಜಿಕ ಮತ್ತು ಮಹಿಳಾ ಹಕ್ಕುಗಳ ಹೋರಾಟಗಾರ್ತಿ ಸಾವಿತ್ರಿಬಾಯಿ ಪುಲೆ ಜಯಂತಿಯನ್ನು ಪತ್ರಿಕಾಭವನದಲ್ಲಿ ಬುಧವಾರ ಆಚರಿಸಲಾಯಿತು.ಬಹುಜನರು ಶಿಕ್ಷಣದಿಂದ ವಂಚಿತರಾಗಿದ್ದ ಸಂದರ್ಭ ಶೂದ್ರರು. ಅಸ್ಪೃಶ್ಯರು ಹಾಗೂ ಹೆಣ್ಣುಮಕ್ಕಳಿಗೆ ಮೊದಲ ಬಾರಿಗೆ ಶಿಕ್ಷಣ ಕಲಿಸಿದ ನಿಜವಾದ ವಿದ್ಯಾಸರಸ್ವತಿ ಸಾವಿತ್ರಿಬಾಯಿ ಪುಲೆ ಎಂದು ನಿವೃತ್ತ ಶಿಕ್ಷಕ ಜಯಪ್ಪ ಹಾನಗಲ್ ಅಭಿಪ್ರಾಯಪಟ್ಟರು.19ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಮತ್ತು ಸಬಲೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಪ್ರಮುಖ ಭಾರತೀಯ ಸಮಾಜ ಸುಧಾರಕರಲ್ಲಿ ಇವರು ಒಬ್ಬರಾಗಿದ್ದಾರೆ. ಸಾವಿತ್ರಿಬಾಯಿ ತಮ್ಮ ಪತಿ ಜ್ಯೋತಿರಾವ್ ಪುಲೆ ಅವರೊಂದಿಗೆ ಪುಣೆಯ ಭಡೆವಾಡದಲ್ಲಿ ಮೊದಲ ಬಾಲಕಿಯರ ಶಾಲೆಯನ್ನು ಸ್ಥಾಪಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಸತ್ಯಶೋಧಕ ಸಮಾಜ ಚಳುವಳಿಯನ್ನು ಪ್ರಾರಂಭಿಸಿದ ದಂಪತಿಗೆ ಬ್ರಿಟಿಷ್ ಸರ್ಕಾರ ಸಹಕಾರ ನೀಡಿದ ಹಿನ್ನೆಲೆಯಲ್ಲಿ, ಅಂದಿನ ಮೇಲ್ಜಾತಿಯವರ ಕಿರುಕುಳದಿಂದ ಸ್ವಲ್ಪಮಟ್ಟಿಗೆ ಬಚಾವಾದರು ಎಂದು ವಿವರಿಸಿದರು.
ಸಾವಿತ್ರಿಬಾಯಿ ಅವರು ಶಿಕ್ಷಣ ಪಡೆದು ಶಿಕ್ಷಕಿಯಾಗಿ 18 ಶಾಲೆಗಳನ್ನು ತೆರೆದು ಬಹುಜನರ ಮಕ್ಕಳಿಗೆ ವಿದ್ಯೆ ಕಲಿಸಿದರು. ಅವರೊಂದಿಗೆ ಫಾತಿಮಾ ಶೇಖ್, ಸುಗಣಬಾಯಿ ಹೋರಾಟ ಮುಂದುವರಿಸಿದರು. ಸಾಮಾಜಿಕವಾಗಿ ಕಿರುಕುಳ, ಅವಮಾನ ಅನುಭವಿಸಿದರು. ರಸ್ತೆಯಲ್ಲಿ ಶಾಲೆಗೆ ಹೋಗುವಾಗ ಹೆಣ್ಣು ಮಕ್ಕಳ ಶಿಕ್ಷಣ ವಿರೋಧಿಗಳು, ಶಿಕ್ಷಕಿಯರ ಮೇಲೆ ಹಸುವಿನ ಸೆಗಣಿ, ಕಲ್ಲುಗಳನ್ನು ಹೊಡೆಯುತ್ತಿದ್ದರು. ಇದನ್ನರಿತ ಶಿಕ್ಷಕಿಯರು ಬ್ಯಾಗ್ ಸೀರೆಗಳನ್ನು ಇಟ್ಟುಕೊಂಡು ಶಾಲೆಯಲ್ಲಿ ಬದಲಾಯಿಸಿ, ವಿದ್ಯೆ ಕಲಿಸುತ್ತಿದ್ದರು. ಅಚಿತಿಮವಾಗಿ ಶಿಕ್ಷಣ ಚಳುವಳಿಯಲ್ಲಿ ನಾಯಕಿಯರು ಆದರು ಎಂದು ವಿಶ್ಲೇಷಿಸಿದರು.ಸಂಘದ ಅಧ್ಯಕ್ಷ ಸಿದ್ದಪ್ಪ, ಉಪಾಧ್ಯಕ್ಷ ಬಿ.ಸಿ.ರಾಜು, ಖಜಾಂಚಿ ನಿಂಗರಾಜು, ಪದಾಧಿಕಾರಿಗಳಾದ ಸಿ.ಕೆ.ರಾಜು, ಚನ್ನಬಸವಯ್ಯ, ರಾಮಯ್ಯ ಮತ್ತಿತರರು ಇದ್ದರು.