ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಚಾಮರಾಜನಗರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ. ಶ್ರೀಧರ ಕೊಳ್ಳೇಗಾಲ ನಗರಸಭೆ ಹಾಗೂ ಹನೂರು ಪಟ್ಟಣ ಪಂಚಾಯಿತಿ ಅಧಿಕಾರಿಗಳೊಂದಿಗೆ ಇತ್ತೀಚೆಗೆ ಕೊಳ್ಳೇಗಾಲ ಹಾಗೂ ಹನೂರು ಪಟ್ಟಣದಲ್ಲಿರುವ ಸಾರ್ವಜನಿಕ, ಸಮುದಾಯ ಶೌಚಾಲಯಗಳಿಗೆ ದಿಢೀರ್ ಭೇಟಿ ನೀಡಿ ಶೌಚಾಲಯಗಳ ಸ್ವಚ್ಚತಾ ವ್ಯವಸ್ಥೆ ಹಾಗೂ ನಿರ್ವಹಣೆ ಬಗ್ಗೆ ಪರಿಶೀಲಿಸಿದರು. ಕೊಳ್ಳೇಗಾಲ ನಗರ ಸಭೆಯ ಹಿರಿಯ ಆರೋಗ್ಯಾಧಿಕಾರಿ ಚೇತನ್‌ಕುಮಾರ್, ಕಿರಿಯ ಆರೋಗ್ಯಾಧಿಕಾರಿ ಭೂಮಿಕಾ ಸಹಭಾಗಿತ್ವದಲ್ಲಿ ಕೊಳ್ಳೇಗಾಲ ಹಾಗೂ ಹನೂರು ಪಟ್ಟಣದಲ್ಲಿರುವ ಸಾರ್ವಜನಿಕ ಶೌಚಾಲಯಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕೊಳ್ಳೇಗಾಲ ಪಟ್ಟಣದ ಸಾರ್ವಜನಿಕ ತಾಲೂಕು ಆಸ್ಪತ್ರೆ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಗ್ರಾಮಾಂತರ ಪೊಲೀಸ್ ಠಾಣೆಯ ಹತ್ತಿರ ವಿರುವ ಶೌಚಾಲಯ, ಕನ್ನಿಕಾ ಪರಮೇಶ್ವರಿ ರಸ್ತೆಯ ಮಾರ್ಕೆಟ್ ಹತ್ತಿರವಿರುವ ಶೌಚಾಲಯಗಳಿಗೆ ನ್ಯಾಯಾಧೀಶರು ಅನಿರೀಕ್ಷಿತ ಭೇಟಿ ನೀಡಿ ಅಲ್ಲಿನ ಸ್ವಚ್ಚತೆಯ ಬಗ್ಗೆ ಪರಿಶೀಲಿಸಿದರು. ಹನೂರು ಪಟ್ಟಣದ ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ ನ್ಯಾಯಾಧೀಶರು ಅಲ್ಲಿನ ಶೌಚಾಲಯದ ಸ್ವಚ್ಚತಾ ವ್ಯವಸ್ಥೆಯನ್ನು ಪರಿಶೀಲಿಸಿ ಸಾರ್ವಜನಿಕರ ಶೌಚಾಲಯದ ಹಿಂಭಾಗ ತೆರೆದ ಜಾಗದಲ್ಲಿ ಕಸ ಹಾಕದಂತೆ ತಡೆ ಗೇಟ್ ಅಳವಡಿಸಬೇಕು. ಅಲ್ಲದೇ ಕೂಡಲೇ ಕಸದ ರಾಶಿಯನ್ನು ತೆಗೆಯಬೇಕು. ಸುತ್ತಲಿನ ಅಂಗಡಿ ಮಾಲೀಕರಿಗೆ ಮತ್ತು ಸಾರ್ವಜನಿಕರಿಗೆ ತಾವು ಉಪಯೋಗಿಸುವ ಸ್ಥಳದ ಸುತ್ತಲಿನ ಪರಿಸರದ ಸ್ವಚ್ಚತೆ ಕಾಪಾಡಿಕೊಳ್ಳಬೇಕು. ಕಸವನ್ನು ನಿಗಧಿತ ಸ್ಥಳದಲ್ಲಿ ವಿಲೇವಾರಿ ಮಾಡಬೇಕು ಎಂದರು. ಸ್ಥಳೀಯ ಪಟ್ಟಣ ಪಂಚಾಯಿತಿಯ ಅಧಿಕಾರಿಗಳು ಶಾಲಾ ಮಕ್ಕಳು ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ತೊಂದರೆಯಾಗದಂತೆ ಶೌಚಾಲಯದ ನೈರ್ಮಲ್ಯ ಹಾಗೂ ಸ್ವಚ್ಚತೆಯ ಬಗ್ಗೆ ಆಗಾಗ್ಗೆ ಶೌಚಾಲಯಗಳಿಗೆ ಭೇಟಿ ನೀಡಿ ಪರಿಶೀಲಿಸಿ ಜನರಿಗೆ ತೊಂದರೆ ಯಾಗದಂತೆ ಕ್ರಮ ವಹಿಸಬೇಕು ಎಂದು ಸೂಚಿಸಿದರು.