ಸಾರಾಂಶ
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಪಟ್ಟಣದ ಶ್ರೀ ರಾಮನವಮಿ ಉತ್ಸವ ಸಮಿತಿ ಆಯೋಜಿಸಿದ್ದ 10 ನೇ ವರ್ಷದ ಶ್ರೀ ರಾಮನವಮಿ ಉತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಬೃಹತ್ ಶೋಭಾಯಾತ್ರೆಯೊಂದಿಗೆ ವಿಜೃಂಭಣೆಯಿಂದ ಜರುಗಿತು.ಭಾನುವಾರ ಸಂಜೆ ಆರಂಭವಾದ ಶೋಭಾಯಾತ್ರೆಯಲ್ಲಿ ಎಂಟು ತೇರುಗಳಲ್ಲಿ ಶ್ರೀ ರಾಮನ ವಿಗ್ರಹವನ್ನು ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ನಗರದ ಪ್ರಮುಖ ಬೀದಿಗಳಲ್ಲಿ ಹುಲಿವೇಷ, ಕೀಲು ಕುದುರೆ, ಮೈಸೂರು ತಮಟೆ ಬ್ಯಾಂಡ್, ಭಜನಾ ತಂಡ, ಡೊಳ್ಳು ಕುಣಿತ, ನಾಸಿಕ್ ಬ್ಯಾಂಡ್, ವೀರಗಾಸೆ, ಕೆಂಗಿಲೆ, ಕೊಡಗು ವಾದ್ಯ ಹಾಗೂ ಇನ್ನಿತರ ಜಾನಪದ ಕಲಾತಂಡಗಳ ಪ್ರದರ್ಶನ ಉತ್ಸವದಲ್ಲಿ ಪಾಲ್ಗೊಂಡಿದ್ದ ಸಹಸ್ರಾರು ಭಕ್ತರನ್ನು ಮೂಕವಿಸ್ಮಿತರನ್ನಾಗಿಸಿತು. ಪ್ರಮುಖ ಸ್ಥಳಗಳಲ್ಲಿ ಪಟಾಕಿ ಸಿಡಿಮದ್ದಿನ ಪ್ರದರ್ಶನ ಗಮನಸೆಳೆಯಿತು.
ಖಾಸಗಿ ಬಸ್‌ನಿಲ್ದಾಣದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀರಾಮನ ಮೂರ್ತಿಯನ್ನು ಹೊತ್ತ ತೇರು ಸೇರಿದಂತೆ ಬಜೆಗುಂಡಿ, ಹಾನಗಲ್, ಹಾನಗಲ್ ಶೆಟ್ಟಳ್ಳಿ, ಚೌಡ್ಲು, ಗೌಡ ಸಮಾಜ ರಸ್ತೆ, ಕಾನ್ವೆಂಟ್ ಬಾಣೆ, ಕಕ್ಕೆಹೊಳೆಯಿಂದ ವಿದ್ಯುದಲಂಕೃತ ಮಂಟಪದಲ್ಲಿ ಶ್ರೀರಾಮನ ತೇರನ್ನು ಕುಳ್ಳಿರಿಸಿ ಬೃಹತ್ ಮೆರವಣಿಗೆ ನಡೆಸಲಾಯಿತು.ಬೆಳಗಿನಂದಲೇ ಪಟ್ಟಣದ ಆಂಜನೇಯ ದೇವಾಲಯ, ರಾಮಮಂದಿರ ಸೇರಿದಂತೆ ವಿವಿಧ ದೇವಾಲಯಗಳಲ್ಲಿ ಪೂಜಾ ಕೈಂಕರ್ಯಗಳು ಶ್ರದ್ಧಾಭಕ್ತಿಯಿಂದ ಜರುಗಿತು. ನಂತರ ಪಾನಕ ಮತ್ತು ಕೋಸಂಬರಿಯ ಪ್ರಸಾದವನ್ನು ವಿತರಿಸಲಾಯಿತು. ಆಂಜನೇಯ ದೇವಾಲಯದಲ್ಲಿ ನೆರೆದಿದ್ದ ಭಕ್ತಾದಿಗಳಿಗೆ ಅನ್ನದಾನವನ್ನು ಏರ್ಪಡಿಸಲಾಗಿತ್ತು. ಉತ್ಸವದ ನೇತೃತ್ವವನ್ನು ಸಮಿತಿ ಅಧ್ಯಕ್ಷ ಸುಭಾಷ್ ತಿಮ್ಮಯ್ಯ, ಪ್ರಧಾನ ಕಾರ್ಯದರ್ಶಿ ಎ.ಎಚ್.ತಿಮ್ಮಯ್ಯ ಮತ್ತು ಪದಾಧಿಕಾರಿಗಳು ವಹಿಸಿದ್ದರು. ಮುಂಜಾಗೃತ ಕ್ರಮವಾಗಿ ಎರಡು ದಿನಗಳಿಂದ ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಲಾಗಿತ್ತು. ಡಿವೈಎಸ್‌ಪಿ ಗಂಗಾಧರಪ್ಪ ನೇತೃತ್ವ ವಹಿಸಿದ್ದರು.