ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ

| Published : May 02 2025, 12:09 AM IST

ಸಾರಾಂಶ

ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ, ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್‌ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಇಲ್ಲಿನ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ, ಪಂಚಾಯಿತಿ ಅಧ್ಯಕ್ಷೆ ಜಯಂತಿ ಶಿವಕುಮಾರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು.

ಸಭೆಯಲ್ಲಿ ಒಂದನೇ ವಾರ್ಡ್ನ ಬಸವೇಶ್ವರ ರಸ್ತೆಯ ಅಶೋಕ ಎಂಬುವವರಿಗೆ ಸೇರಿದ ಮನೆ ನಿವೇಶವವನ್ನು 5.5 ಸೆಂಟ್‌ನಿಂದ 8.5 ಸೆಂಟ್‌ಗೆ ಕಂದಾಯ ಅಧಿಕಾರಿ ತಿದ್ದುಪಡಿ ಮಾಡಿರುವ ಬಗ್ಗೆ ಯಾವ ಕ್ರಮವಾಗಿದೆ ಎಂದು ಸದಸ್ಯ ಕಿರಣ್ ಪ್ರಶ್ನಿಸಿದರು. ನಿವೇಶನದ ಮಾಲೀಕರಿಗೆ ನೋಟೀಸ್ ನೀಡಲಾಗಿ, ಅವರು ಸೂಕ್ತ ದಾಖಲಾತಿಯನ್ನು ತಂದು ಪಂಚಾಯಿತಿಗೆ ನೀಡಿ ಸಮಜಾಯಿಷಿಕೆ ನೀಡಿದ್ದಾರೆ. ತಪ್ಪಾಗಿ ತಿದ್ದುಪಡಿಯಾಗಿದ್ದನ್ನು ಸರಿಪಡಿಸಲಾಗಿದೆ ಎಂದು ಪಂಚಾಯಿತಿ ಮುಖ್ಯಾಧಿಕಾರಿ ಸತೀಶ್ ತಿಳಿಸಿದರು.

ಕೇವಲ ದಾಖಲಾತಿ ಸರಿಪಡಿಸಿದರೆ, ಸಾಲದು, ತಪ್ಪಿತಸ್ಥ ಅಧಿಕಾರಿಯ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಸದಸ್ಯ ಕಿರಣ್ ಒತ್ತಾಯಿಸಿದರು. ಮುಂದಿನ ಕ್ರಮ ತೆಗೆದುಕೊಳ್ಳಲು ಸಾಧ್ಯವಾಗದ ಬಗ್ಗೆ ಮುಖ್ಯಾಧಿಕಾರಿ ಕೈ ಚೆಲ್ಲಿದ ಸಂದರ್ಭ ಘಟನೆ ನಡೆಯಿತು.

ಕುಡಿಯುವ ನೀರು ಸರಬರಾಜು ಕಾಮಗಾರಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಅಮೃತ್ 2 ಯೋಜನೆಯಲ್ಲಿ ಕುಡಿಯುವ ನೀರು ಸರಬರಾಜು ಮಾಡಲು ಕಾಮಗಾರಿ ನಡೆಯುತ್ತಿದೆ. ಆದರೆ, ಯೋಜನೆಯ ಸರಿಯಾದ ಮಾಹಿತಿಯನ್ನಾಗಲಿ, ಆಯಾ ವಾರ್ಡ್ ಸದಸ್ಯರಿಗೆ ಮಾಹಿತಿ ನೀಡುವ ಕೆಲಸವಾಗಲಿ ಗುತ್ತಿಗೆದಾರರ ಸಿಬ್ಬಂದಿ ಮಾಡುತ್ತಿಲ್ಲ. ಎರಡು ತಿಂಗಳ ಹಿಂದೆಯೇ ಸಭೆಗೆ ಎಇಇ ಪ್ರಸನ್ನಕುಮಾರ್ ಕರೆಸಿ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ರಸ್ತೆಯಲ್ಲಿ ಪೈಪ್ ಅಳವಡಿಸುವ ಸಂದರ್ಭ ಗುಂಡಿ ತೆಗೆಯಲಾಗಿದೆ. ಇಲ್ಲಿಯವರೆಗೂ ಸರಿಯಾಗಿ ಗುಂಡಿಗಳನ್ನು ಮುಚ್ಚದಿರುವುದರಿಂದ ಸಾಕಷ್ಟು ವಾಹನ ಸವಾರರು ಬೀಳುತ್ತಿದ್ದಾರೆ. ಎಲ್ಲ ವಾರ್ಡ್ಗಳಲ್ಲಿ ಕಾಮಗಾರಿ ನಡೆಯುತ್ತಿದೆ. ಆದರೆ, ಎಲ್ಲಿಯೂ ಸರಿಯಾಗಿ ಕಾಮಗಾರಿ ಪೂರ್ಣಗೊಂಡಿಲ್ಲ. ಒಂದು ತಿಂಗಳಿನಲ್ಲಿ ಮಳೆಗಾಲ ಪ್ರಾರಂಭಗೊಳ್ಳಲಿದ್ದು, ಕಾಮಗಾರಿ ಮಾಡಲು ಸಾಧ್ಯವಿರುವುದಿಲ್ಲ. ಕೂಡಲೇ ಉಳಿದ ಕಾಮಗಾರಿಯನ್ನು ಮುಗಿಸಬೇಕು ಎಂದು ಸದಸ್ಯರಾದ ಶೀಲಾ ಡಿಸೋಜ, ಮೃತ್ಯುಂಜಯ, ಸಂಜೀವ ಸೇರಿದಂತೆ ಸದಸ್ಯರು ಆಗ್ರಹಿಸಿದರು.

ಈ ಸಂದರ್ಭ ಎಇಇ ಪ್ರಸನ್ನಕುಮಾರ್ ಮಾತನಾಡಿ, ಕಾಮಗಾರಿ ಬಿರುಸಿನಿಂದ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಉಳಿಕೆ ಕಾಮಗಾರಿಯನ್ನು ಮುಗಿಸಲಾಗುವುದು ಎಂದು ಸಭೆಗೆ ತಿಳಿಸಿದರು.

ಜನವಸತಿ ಪ್ರದೇಶಗಳಲ್ಲಿ ಉದ್ದಿಮೆಗಳಿಗೆ ಪರವಾನಗಿ ನೀಡುತ್ತಿರುವ ಬಗ್ಗೆ ಸದಸ್ಯೆ ಶೀಲಾ ಡಿಸೋಜಾ ಆಕ್ಷೇಪ ವ್ಯಕ್ತಪಡಿಸಿದರು. ಪಂಚಾಯಿತಿ ರಾಜಕಾಲುವೆಗಳು ಒತ್ತುವರಿಯಾಗಿದೆ. ಕೂಡಲೇ ಪಟ್ಟಣ ಪಂಚಾಯಿತಿ ಹದ್ದುಬಸ್ತು ಸರ್ವೆ ಮಾಡಿಸುವಂತೆ ಸದಸ್ಯರಾದ ಜೀವನ್, ಶೀಲಾ ಡಿಸೋಜ ಮನವಿ ಮಾಡಿದರು.

ಸೂಕ್ತ ಕ್ರಮ: ಪಂಚಾಯಿತಿ ಸಂತೆ ಮಾರುಕಟ್ಟೆಯ ಬಳಿ ಕನ್ನಡ ವೃತ್ತ ಇದೆ. ಆದರೆ, ಇದಕ್ಕೆ ಸುಣ್ಣ ಬಣ್ಣ ಹೊಡೆಯುತ್ತಿಲ್ಲ. ಸಂತೆ ಸಂದರ್ಭ ವೃತ್ತಕ್ಕೆ ಅಕ್ಕಪಕ್ಕದಲ್ಲಿ ವ್ಯಾಪಾರ ಮಾಡುವವರು, ಹಗ್ಗಕಟ್ಟಿ ಟೆಂಟ್ ನಿರ್ಮಿಸುವುದು, ಉಳಿಕೆ ಸಾಮಾಗ್ರಿಗಳನ್ನು ಅಲ್ಲಿ ಇರಿಸುವ ಕೆಲಸ ಮಾಡುವ ಮೂಲಕ ವೃತ್ತಕ್ಕೆ ಅಪಮಾನ ಮಾಡುತ್ತಿದ್ದಾರೆ. ಕೂಡಲೇ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಸದಸ್ಯ ಎಚ್.ಎ. ನಾಗರಾಜು ತಿಳಿಸಿದರು. ಮುಂದಿನ ದಿನಗಳಲ್ಲಿ ಪಟ್ಟಣದ ಎಲ್ಲ ಪ್ರತಿಮೆಗಳಿಗೆ ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದು, ಈ ಸಂದರ್ಭ ವೃತ್ತಕ್ಕೂ ಬಣ್ಣ ಹಚ್ಚಲಾಗುವುದು. ವೃತ್ತವನ್ನು ದುರ್ಬಳಕೆ ಮಾಡಿಕೊಳ್ಳುವವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಸಭೆಯಲ್ಲಿ ಪಂಚಾಯಿತಿ ಸದಸ್ಯರು ಹಾಗೂ ಅಧಿಕಾರಿ ಉಪಸ್ಥಿತರಿದ್ದರು.