ಜೇಸಿ ವೇದಿಕೆ ಮುಂಭಾಗ ಸ್ಥಳೀಯ ವೇದಿಕೆ ಪದಾಧಿಕಾರಿಗಳು ಅಭಿಯಾನ ರಥವನ್ನು ಬರಮಾಡಿಕೊಂಡರು.

ಕನ್ನಡಪ್ರಭವಾರ್ತೆ ಸೋಮವಾರಪೇಟೆ

ಪರಿವರ್ತನಾ ಟ್ರಸ್ಟ್ ಹಾಗು ಹಿಂದು ಜಾಗರಣಾ ವೇದಿಕೆ ವತಿಯಿಂದ ಮಾದಕ ವಸ್ತು (ಡ್ರಗ್ಸ್) ವ್ಯಸನ, ದಂದೆ ಮತ್ತು ಕಳ್ಳಸಾಗಣೆ ವಿರುದ್ಧ ರಾಜ್ಯಾದ್ಯಂತ ನಡೆಯುತ್ತಿರುವ ಜನ ಜಾಗೃತಿ ಅಭಿಯಾನದ ರಥ ಗುರುವಾರ ಪಟ್ಟಣಕ್ಕೆ ಆಗಮಿಸಿತು.ಜೇಸಿ ವೇದಿಕೆ ಮುಂಭಾಗ ಸ್ಥಳೀಯ ವೇದಿಕೆ ಪದಾಧಿಕಾರಿಗಳು ಅಭಿಯಾನ ರಥವನ್ನು ಬರಮಾಡಿಕೊಂಡರು. ಪತ್ರಿಕಾಭವನ ಅಧ್ಯಕ್ಷ ಎಸ್.ಮಹೇಶ್ ಮಾತನಾಡಿ, ಮಾದಕ ವಸ್ತುಗಳು ದೇಶದ ಆಂತರಿಕ ಭಯೋತ್ಪಾದಕರಿದ್ದಂತೆ. ದೇಶದಲ್ಲಿ ಬಂದೂಕು ಹಿಡಿದು, ಬಾಂಬ್ ಹಾಕಿ ಜನರ ಜೀವ ತೆಗೆಯುತ್ತಿರುವುದು ಒಂದೆಡೆಯಾದರೆ ಯುವಕರಿಗೆ ಮಾದಕ ವಸ್ತುಗಳನ್ನು ನೀಡುವ ಮೂಲಕ ಅವರನ್ನು ಮಾದಕ ವ್ಯಸನಿಗಳನ್ನಾಗಿ ಮಾಡುವುದರೊಂದಿಗೆ ಮಾದಕ ವಸ್ತುಗಳನ್ನು ಕಳ್ಳಸಾಗಾಣಿಕೆಗೆ ಬಳಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಪ್ರಸಕ್ತ ವರ್ಷ ಮಾದಕ ವಸ್ತುಗಳಿಗೆ ಸಂಬಂಧಿಸಿದಂತೆ 5930 ಪ್ರಕರಣಗಳು ದಾಖಲಾಗಿವೆ. ಕೊಡಗು ಜಿಲ್ಲೆಯಲ್ಲಿ 130 ಪ್ರಕರಣಗಳು ದಾಖಲಾಗಿದ್ದು, 74 ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸ್ ಇಲಾಖೆ ಮಾದಕ ದ್ರವ್ಯ ಸರಬರಾಜುದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಹೇಳಿದರು.ಶಿಕ್ಷಕ ಸಂತೋಷಿ ಹಿರೆಮಠ ಮಾದಕ ವಸ್ತುಗಳ ವಿರುದ್ಧ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ಸಂದರ್ಭ ಪರಿವರ್ತನ ಟ್ರಸ್ಟ್ನ ಸಂದೇಶ್, ಹಿಂದು ಜಾಗರಣಾ ವೇದಿಕೆಯ ಬೋಜೇಗೌಡ, ಸುಭಾಷ್ ತಿಮ್ಮಯ್ಯ, ಉಮೇಶ್, ಬಿ.ಜೆ.ದೀಪಕ್, ಸುನೀಲ್, ದೀಪಕ್ ಕಾಗಡೀಕಟ್ಟೆ ಇದ್ದರು.