ಮುಂಡರಗಿ: ಜನಪದರು ಕಟ್ಟಿಕೊಟ್ಟ ಗಟ್ಟಿ ಸಾಹಿತ್ಯ ಎಲ್ಲರನ್ನು ಮಂತ್ರಮುಗ್ಧರನ್ನಾಗಿ ಮಾಡುತ್ತದೆ. ಕುಟ್ಟುವ, ಬೀಸುವ, ಹಂತಿ ಮಾಡುವಾಗ ಹಾಡುವ ಹಾಡುಗಳು ಮಕ್ಕಳಿಗೆ ಮನರಂಜನೆಯ ಜತೆಗೆ ನೀತಿ ಬೋಧಕವಾಗಿವೆ. ಇಂತಹ ಹಾಡುಗಳು ನಮ್ಮ ಮಕ್ಕಳ ನಾಲಿಗೆಯ ಮೇಲೆ ನಲಿದಾಡಬೇಕು. ಅಂದಾಗ ಮಾತ್ರ ಜನಪದ ಸಾಹಿತ್ಯ ಉಳಿಯುತ್ತದೆ ಎಂದು ಬನಹಟ್ಟಿಯ ಹಿರಿಯ ಸಾಹಿತಿ, ನಾಟಕಕಾರ ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ ಹೇಳಿದರು.
ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜನಪದ-ಲಾವಣಿ-ತತ್ವಪದಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಜನಪದ ಸಾಹಿತ್ಯ ಸಾಹಿತ್ಯ ಲೋಕದ ಮೂಲಬೇರು. ಅನುಭವದ ಮೂಲಕ ಮೂಡಿ ಬಂದಿರುವ ಜನಪದ ಸಾಹಿತ್ಯ ನೋವು-ನಲಿವು, ಹಬ್ಬ-ಹರಿದಿನ, ಜಾತ್ರೆ-ಪಾತ್ರೆ, ಆಧ್ಯಾತ್ಮ ಮತ್ತು ತತ್ವಪದಗಳ ರಾಶಿಯನ್ನೇ ಪರಿಣಾಮಕಾರಿಯಾಗಿ ಬಿಂಬಿಸುವ ಶಕ್ತಿ ಹೊಂದಿದೆ. ಮಕ್ಕಳು ಜನಪದ ಸಾಹಿತ್ಯವನ್ನು ಪ್ರೀತಿಸಿ-ಉಳಿಸಿ-ಬೆಳಸಬೇಕು ಎಂದರು.
ಶಾಲೆಯ ಆಡಳಿತಾಧಿಕಾರಿ ಪ್ರೊ. ಸಿ.ಎಸ್. ಅರಸನಾಳ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಬಿ.ಆರ್. ಪೊಲೀಸ್‌ಪಾಟೀಲ್ ಅವರು ತಮ್ಮ ತಂಡದ ಕಲಾವಿದರೊಂದಿಗೆ ಜನಪದ ದಾಟಿಯಲ್ಲಿ ತಾವೇ ರಚಿಸಿದ ಮಹಾತ್ಮಾ ಗಾಂಧಿ ಕುರಿತಾದ ಹಾಡನ್ನು ಮಕ್ಕಳ ಮನ ಮುಟ್ಟುವಂತೆ ಹಾಡುವ ಜತೆಗೆ ಮಕ್ಕಳಿಂದಲೂ ಹಾಡಿಸಿದರು.ತಾವೇ ರಚಿಸಿದ ಸ್ವಚ್ಛ ಭಾರತ ಮತ್ತು ಲಾವಣಿ ಹಾಗೂ ತತ್ವಪದಗಳನ್ನು ಜನಪದ ಶೈಲಿಯಲ್ಲಿ ಸಾದರಪಡಿಸಿ ಮಕ್ಕಳಿಗೆ ಅದರ ಅರಿವು ಮೂಡಿಸಿದರು. ಪ್ರೊ. ಆರ್.ಎಲ್. ಪೊಲೀಸ್‌ಪಾಟೀಲ, ಪ್ರೊ. ಎಂ.ಜಿ. ಗಚ್ಚಣ್ಣವರ, ಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪುರ, ಪರಮೇಶ ನಾಯಕ ಉಪಸ್ಥಿತರಿದ್ದರು.
ಪ್ರೌಢಶಾಲಾ ಮುಖ್ಯೋಪಾಧ್ಯಾಯ ದೇವರಡ್ಡಿ ಇಮ್ರಾಪುರ ಸ್ವಾಗತಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಗದಗ ಜಿಲ್ಲಾ ಸಂಯೋಜಕ ಡಾ. ನಿಂಗು ಸೊಲಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗುಡದಪ್ಪ ಲಿಂಗಶೆಟ್ಟರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.