ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರುಕಾನೂನುಬಾಹಿರವಾಗಿ ಸುಮಾರು ಎಂಟು ವರ್ಷದ ಹೆಣ್ಣು ಮಗುವನ್ನು ದತ್ತು ಪಡೆದ ಆರೋಪ ಸಂಬಂಧ ಬಂಧನಕ್ಕೆ ಒಳಗಾಗಿದ್ದ ಬಿಗ್ ಬಾಸ್ ಸ್ಪರ್ಧಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಗಳಿಸಿರುವ ಸೋನು ಶ್ರೀನಿವಾಸಗೌಡ ಅಲಿಯಾಸ್ ಶಾಂಭವಿ (29)ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನ್ಯಾಯಾಲಯ ಷರತ್ತುಬದ್ಧ ಜಾಮೀನು ನೀಡಿದೆ.
ಪ್ರಕರಣ ಸಂಬಂಧ ಜಾಮೀನು ಕೋರಿ ಸೋನು ಶ್ರೀನಿವಾಸಗೌಡ ಸಲ್ಲಿಸಿದ್ದ ಅರ್ಜಿ ಪುರಸ್ಕರಿಸಿದ ಬೆಂಗಳೂರು ಗ್ರಾಮಾಂತರ ಸಿಜೆಎಂ ನ್ಯಾಯಾಲಯ ಈ ಆದೇಶ ಮಾಡಿದೆ.ಒಂದು ಲಕ್ಷ ರು. ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತಕ್ಕೆ ಇಬ್ಬರ ಭದ್ರತಾ ಖಾತರಿ ನೀಡಬೇಕು ಎಂದು ಜಾಮೀನು ಮಂಜೂರಾತಿಗೆ ನ್ಯಾಯಾಲಯ ಷರತ್ತು ವಿಧಿಸಿದೆ.
ಸೋನು ಶ್ರೀನಿವಾಸಗೌಡ ಅವರು ರಾಯಚೂರಿನಲ್ಲಿ 6-8 ವರ್ಷದ ಮಗುವನ್ನು ಪೋಷಕರಿಂದ ದತ್ತು ಪಡೆದಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದರು. ಆ ಕುರಿತು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಜೆ.ಗೀತಾ ಅವರು ಬ್ಯಾಡರಹಳ್ಳಿ ಠಾಣೆಗೆ ದೂರು ನೀಡಿ, ಹಿಂದೂ ದತ್ತು ಕಾಯ್ದೆ ಪ್ರಕಾರ ದತ್ತು ಪಡೆಯುವ ವ್ಯಕ್ತಿಯ ಅರ್ಹತೆ ಕುರಿತು ಮಾಹಿತಿ ನೀಡಬೇಕು. ಅದಕ್ಕಾಗಿ ಮಕ್ಕಳ ರಕ್ಷಣಾ ಘಟಕ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರ, ರಾಜ್ಯ ದತ್ತು ಪ್ರಾಧಿಕಾರಕ್ಕೆ ದತ್ತು ಪಡೆಯುವ ಬಗ್ಗೆ ಆನ್‌ಲೈನಲ್ಲಿ ಅರ್ಜಿ ಸಲ್ಲಿಸಬೇಕು. ಕೆಲ ಪ್ರಕ್ರಿಯೆ ಪಾಲಿಸಿದ ಬಳಿಕ ಮಕ್ಕಳ ಕಲ್ಯಾಣ ಸಮಿತಿ, ಜಿಲ್ಲಾಧಿಕಾರಿ ಸಮ್ಮುಖದಲ್ಲಿ ಮಗುವನ್ನು ದತ್ತು ಪಡೆಯಬೇಕು. ಆದರೆ, ಸೋನು ಶ್ರೀನಿವಾಸಗೌಡ ಮಗುವನ್ನು ದತ್ತು ಪಡೆಯುವಾಗ ಈ ಯಾವುದೇ ನಿಯಮಗಳನ್ನು ಪಾಲಿಸಿಲ್ಲ. ಇದೊಂದು ಕಾನೂನು ಬಾಹಿರ ದತ್ತು ಎಂದು ಆರೋಪಿಸಿದ್ದರು.ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿದ್ದ ಪೊಲಿಸರು, 2024ರ ಮಾ.22ರಂದು ಸೋನು ಶ್ರೀನಿವಾಸ ಗೌಡ ಅವರನ್ನು ಮಾಗಡಿ ಮುಖ್ಯರಸ್ತೆಯ ಸಿಂಡಿಕೇಟ್ ಲೇಔಟ್‌ನ ಮನೆಯಿಂದ ಬಂಧಿಸಿದ್ದರು. ವಿಚಾರಣಾ ನ್ಯಾಯಾಲಯ ಅವರನ್ನು ಮೊದಲಿಗೆ ಹೆಚ್ಚಿನ ವಿಚಾರಣೆಗೆ ನಾಲ್ಕು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿತ್ತು. ನಂತರ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶಿಸಿತ್ತು. ಇದರಿಂದ ಜೈಲು ಪಾಲಾಗಿದ್ದ ಅವರು, ಜಾಮೀನು ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು.