ತಾಲೂಕಿನ ಆದಿವಾಸಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಎರಡು ವಾಲ್ಮೀಕಿ ಆಶ್ರಮ ಶಾಲೆಗಳ ನೂತನ ಕಟ್ಟಡಗಳು ಶೀಘ್ರ ಲೋಕಾರ್ಪಣೆಗೊಳ್ಳಲಿವೆ.

ಕನ್ನಡಪ್ರಭವಾರ್ತೆ ಬೆಳ್ತಂಗಡಿ

ತಾಲೂಕಿನ ಆದಿವಾಸಿ ಹಾಗೂ ಪರಿಶಿಷ್ಟ ಪಂಗಡ ಸಮುದಾಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉತ್ತಮ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ನಿರ್ಮಿಸಲಾಗಿರುವ ಎರಡು ವಾಲ್ಮೀಕಿ ಆಶ್ರಮ ಶಾಲೆಗಳ ನೂತನ ಕಟ್ಟಡಗಳು ಶೀಘ್ರ ಲೋಕಾರ್ಪಣೆಗೊಳ್ಳಲಿವೆ.

ತಾಲೂಕಿನ ನೆರಿಯ ಮತ್ತು ಶಿಶಿಲದಲ್ಲಿ ನಿರ್ಮಾಣ ಗೊಂಡಿರುವ ಈ ವಸತಿ ಸಹಿತ ಶಾಲಾ ಕಟ್ಟಡಗಳು ಗ್ರಾಮೀಣ ಆದಿವಾಸಿ ಮಕ್ಕಳಿಗೆ ಶಿಕ್ಷಣದ ಅವಕಾಶವನ್ನು ಮತ್ತಷ್ಟು ವಿಸ್ತರಿಸುವ ನಿರೀಕ್ಷೆ ಮೂಡಿಸಿವೆ. ಶಿಕ್ಷಣದ ಜತೆಗೆ ಮಕ್ಕಳಿಗೆ ಸುರಕ್ಷಿತ ವಸತಿ, ಆಹಾರ, ಅಧ್ಯಯನ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸುವ ಉದ್ದೇಶದಿಂದ ಕಟ್ಟಡಗಳನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದೆ.

ನೆರಿಯದಲ್ಲಿ 5 ಕೋಟಿ ರು. ವೆಚ್ಚ: ನೆರಿಯದಲ್ಲಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಪರಿಶಿಷ್ಟ ಪಂಗಡದ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡವು ವಸತಿ ಸೌಲಭ್ಯವನ್ನೂ ಒಳಗೊಂಡಿದೆ. ಪ್ರಸ್ತುತ ಇಲ್ಲಿ 1 ರಿಂದ 8ನೇ ತರಗತಿವರೆಗೆ 110 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹೊಸ ಕಟ್ಟಡದಿಂದ ವಿದ್ಯಾರ್ಥಿಗಳಿಗೆ ತರಗತಿ ಕೊಠಡಿಗಳು, ವಸತಿ ಹಾಗೂ ಕಲಿಕೆಗೆ ಪೂರಕವಾದ ಸೌಲಭ್ಯಗಳು ಒಂದೇ ಆವರಣದಲ್ಲಿ ಲಭ್ಯವಾಗಲಿದೆ.

ಶಿಶಿಲದಲ್ಲಿ 4 ಕೋಟಿ ರು. ವೆಚ್ಚ: ಶಿಶಿಲದಲ್ಲಿ ಸುಮಾರು 4 ಕೋಟಿ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ವಾಲ್ಮೀಕಿ ಆಶ್ರಮ ಶಾಲೆಯ ನೂತನ ಕಟ್ಟಡವೂ ವಸತಿ ಸೌಲಭ್ಯ ಹೊಂದಿದೆ. ಇಲ್ಲಿ 1ರಿಂದ 7ನೇ ತರಗತಿವರೆಗೆ 109 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಹೊಸ ಕಟ್ಟಡದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಹೆಚ್ಚಿನ ಅನುಕೂಲವಾಗಲಿದ್ದು, ವಸತಿ ಸೌಲಭ್ಯವೂ ಸುಧಾರಿಸಲಿದೆ.

ಬೆಳ್ತಂಗಡಿ ತಾಲೂಕಿನ ಗುಡ್ಡಗಾಡು ಹಾಗೂ ದೂರದ ಪ್ರದೇಶಗಳಲ್ಲಿ ವಾಸಿಸುವ ಪರಿಶಿಷ್ಟ ಪಂಗಡದ ಮಕ್ಕಳಿಗೆ ಶಿಕ್ಷಣ ತಲುಪಿಸುವಲ್ಲಿ ವಾಲ್ಮೀಕಿ ಆಶ್ರಮ ಶಾಲೆಗಳು ಪ್ರಮುಖ ಪಾತ್ರ ವಹಿಸುತ್ತಿವೆ. ನೂತನ ಕಟ್ಟಡಗಳ ಲೋಕಾರ್ಪಣೆಯಿಂದ ಈ ಶಾಲೆಗಳ ಶೈಕ್ಷಣಿಕ ಚಟುವಟಿಕೆಗಳಿಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಶಾಸಕ ಹರೀಶ್ ಪೂಂಜ ತಿಳಿಸಿದ್ದಾರೆ.

ವಾರ್ಡನ್ ಗಳ ಕೊರತೆ: ತಾಲೂಕಿನ ಸರ್ಕಾರಿ ಹಾಸ್ಟೆಲ್‌ಗಳಲ್ಲಿ ವಾರ್ಡನ್‌ಗಳ ಕೊರತೆ ತಾಂಡವವಾಡುತ್ತಿದೆ. ತಾಲೂಕಿನಲ್ಲಿ ಒಟ್ಟು 13 ಹಾಸ್ಟೆಲ್‌ಗಳಿದ್ದು, ಕೇವಲ 4 ಮಂದಿ ವಾರ್ಡನ್ ಗಳಿದ್ದಾರೆ. ಅವರು ಈ ಎಲ್ಲ ಹಾಸ್ಟೆಲ್‌ಗಳ ಜವಾಬ್ದಾರಿ ನಿರ್ವಹಿಸಬೇಕಿದೆ.

ಹಾಸ್ಟೆಲ್‌ಗಳಿಗೆ ಅಗತ್ಯ ಸಿಬ್ಬಂದಿಯನ್ನು ಹೊರ ಸಂಪನ್ಮೂಲದ ಆಧಾರದಲ್ಲಿ ನೇಮಿಸಲಾಗುತ್ತಿದೆ. ಈ ಸಿಬ್ಬಂದಿ ತಮ್ಮ ಕೆಲಸದ ಜತೆಗೆ ಇತರ ಹೆಚ್ಚುವರಿ ಕೆಲಸಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಹಾಸ್ಟೆಲ್ ಗಳ ನಿರ್ಮಾಣದ ಜತೆಗೆ ಸರ್ಕಾರ ವಾರ್ಡನ್ ಹಾಗೂ ಇತರ ಅಗತ್ಯ ಸಿಬ್ಬಂದಿ ನೇಮಿಸುವುದು ಅತಿ ಅಗತ್ಯವಾಗಿದೆ ಎಂದು ಪೋಷಕಿ ಬೆಳ್ತಂಗಡಿಯ ಕಮಲಾ ಆಗ್ರಹಿಸಿದ್ದಾರೆ.