ಸಾರಾಂಶ
ಹುಬ್ಬಳ್ಳಿ:
ವಾಯವ್ಯ ಸಾರಿಗೆ ಸಂಸ್ಥೆಯಲ್ಲಿ 1814 ಜನ ಚಾಲಕರ ನೇಮಕಾತಿಗೆ ಸಂಬಂಧಿಸಿದಂತೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುವುದಾಗಿ ಭರವಸೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಮಾತು ನಂಬಿದ ಅಭ್ಯರ್ಥಿಗಳು ಪ್ರತಿಭಟನೆ ಹಿಂಪಡೆದು ತಮ್ಮ ಊರಿಗೆ ಮರಳಿದರು.ಸಂಸ್ಥೆಯಲ್ಲಿ 2019ರಲ್ಲಿ 2814 ಚಾಲಕ ಹುದ್ದೆಗೆ ಅಧಿಸೂಚನೆ ಹೊರಡಿಸಿತ್ತು. ಆಗ 50 ಸಾವಿರಕ್ಕೂ ಅಧಿಕ ಜನರು ಅರ್ಜಿ ಸಲ್ಲಿಸಿದ್ದರು. ಎಲ್ಲ ಪರೀಕ್ಷೆಗಳಲ್ಲಿ 2814 ಜನರು ಪಾಸಾಗಿದ್ದರು. ಆದರೆ, ಕೊರೋನಾದ ಹಿನ್ನೆಲೆಯಲ್ಲಿ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಂಡಿತ್ತು. ಅದಾದ ಮೇಲೆ ಇದೀಗ ಅಗತ್ಯಕ್ಕೆ ತಕ್ಕಂತೆ 1000 ಜನರಿಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ 1814 ಜನರನ್ನು ನೇಮಕ ಮಾಡಿಕೊಳ್ಳಬೇಕೆಂದು ಪಟ್ಟುಹಿಡಿದು ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಕಳೆದ ಎರಡು ದಿನದ ಹಿಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಿಂದ ಕುಟುಂಬ ಸಮೇತರಾಗಿ ಆಗಮಿಸಿ ಧರಣಿ ನಡೆಸಿದ್ದರು. ಆ ವೇಳೆ ಸಚಿವರು, ಮೊಬೈಲ್ ಮೂಲಕವೇ ಹುಬ್ಬಳ್ಳಿಗೆ ಬಂದಾಗ ಚರ್ಚೆ ನಡೆಸಿ ಬಗೆಹರಿಸುವುದಾಗಿ ಭರವಸೆ ನೀಡಿದ್ದರು. ಅದರಂತೆ ಗುರುವಾರ ಒಂದು ದಿನ ತಾತ್ಕಾಲಿಕವಾಗಿ ಅಭ್ಯರ್ಥಿಗಳು ಪ್ರತಿಭಟನೆ ಹಿಂಪಡೆದು ಇಲ್ಲಿನ ಸಿದ್ಧಾರೂಢ ಮಠದಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ಬೆಳಗ್ಗೆ 10ರಿಂದಲೇ ಮತ್ತೆ ಪ್ರತಿಭಟನೆ ಆರಂಭಿಸಿದ್ದರು. ಸಚಿವರು ಮೊದಲಿಗೆ ಪ್ರತಿಭಟನಾಕಾರರ ಜೊತೆ ಚರ್ಚೆ ನಡೆಸಿ ಸಮಸ್ಯೆ ಆಲಿಸಿದರು. ಬಳಿಕ ಹಿರಿಯ ಅಧಿಕಾರಿಗಳು ಹಾಗೂ ಮುಖಂಡರೊಂದಿಗೆ ಕೆಲಕಾಲ ಸಭೆ ನಡೆಸಿದರು.ತದನಂತರ 1814 ಜನರ ನೇಮಕಾತಿಯಲ್ಲಿ ಕೆಲವೊಂದಿಷ್ಟು ತಾಂತ್ರಿಕ ತೊಂದರೆಯಾಗಿದೆ. ಅದನ್ನು ಬಗೆಹರಿಸಿ 1000 ಜನರನ್ನು ತಕ್ಷಣವೇ ನೇಮಕ ಮಾಡಿಕೊಳ್ಳಲಾಗುವುದು. 814ರ ಜನರ ನೇಮಕಾತಿಗೂ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ಪ್ರಕ್ರಿಯೆ ಪ್ರಾರಂಭಿಸಲಾಗುವುದು. ಅವರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಹೋರಾಟದ ನೇತೃತ್ವದ ವಹಿಸಿದ್ದ ಸುಭಾಸಸಿಂಗ್ ಜಮಾದಾರ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಿಂಪಡೆದಿರುವ ಹೋರಾಟಗಾರರು, ತಮ್ಮ ತಮ್ಮ ಊರುಗಳಿಗೆ ತೆರಳಿದ್ದಾರೆ.
ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನೇಮಕಾತಿಗೆ ಆಗ್ರಹಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹಿಂದೆ ನಡೆದ ಪ್ರತಿಭಟನೆಯಲ್ಲಿ ನಾನು ಭರವಸೆ ನೀಡಿದ್ದೆ. ಈಗಲೂ ಅದಕ್ಕೆ ಬದ್ಧನಿದ್ದೇನೆ. 1814 ಹುದ್ದೆಗಳ ನೇಮಕಾತಿ ಸಂಬಂಧಪಟ್ಟಂತೆ ಶೀಘ್ರದಲ್ಲೇ ಸಿಹಿ ಸುದ್ದಿ ನೀಡುತ್ತೇನೆ ಎಂದರು.2019ರಲ್ಲಿ 2814 ಹುದ್ದೆಗಳಿಗೆ ಅರ್ಜಿ ಕರೆಯಲಾಗಿತ್ತು. ಅಂದಿನ ಸರ್ಕಾರವು ನೇಮಕಾತಿ ಮಾಡಿಕೊಳ್ಳುವಲ್ಲಿ ವಿಳಂಬ ಮಾಡಿತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ನಾನು ಸಚಿವನಾದ ಬಳಿಕ 1000 ಹುದ್ದೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಇನ್ನುಳಿದ 1814 ಹುದ್ದೆಗಳ ನೇಮಕಾತಿಯಲ್ಲಿ ಕೆಲವು ತಾಂತ್ರಿಕ ತೊಂದರೆಗಳಾದ ಹಿನ್ನೆಲೆಯಲ್ಲಿ ನೇಮಕಾತಿಗೆ ವಿಳಂಬವಾಗಿದೆ. ಈ ಹಿಂದೆಯೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಇನ್ನು 2-3 ದಿನಗಳಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲಾಗುವುದು ಎಂದು ಸ್ಪಷ್ಟನೆ ನೀಡಿದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))