ಕನ್ನಡಪ್ರಭವಾರ್ತೆ ತಿಪಟೂರು
ತಾಲೂಕಿನಲ್ಲಿ ಕಳೆದ ೨-೩ ದಿನಗಳಿಂದ ಸುರಿದ ಭಾರಿ ಮಳೆ ಹಾಗೂ ಗಾಳಿಗೆ ತೆಂಗು, ಅಡಿಕೆ, ಬಾಳೆ ಮನೆಗಳು ಸೇರಿದಂತೆ ಇತರೆ ಬೆಳೆಗಳಿಗೆ ತೀವ್ರ ಹಾನಿಯಾಗಿದ್ದು, ಜಿಲ್ಲಾ ಉಸ್ತವಾರಿ ಹಾಗೂ ಗೃಹಸಚಿವರ ಆದೇಶದಂತೆ ತಾಲೂಕಿನ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಶೀಘ್ರವೇ ಎನ್.ಡಿ.ಆರ್ .ಎಫ್ ಪರಿಹಾರ ನಿಧಿಯಿಂದ ಪರಿಹಾರ ದೊರಕಿಸಲಾಗುವುದು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ತಿಳಿಸಿದರು.ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ರಜತಾದ್ರಿಪುರ ಪ್ರದೇಶಕ್ಕೆ ಭೇಟಿ ನೀಡಿ ಕಳೆದ ೨-೩ ದಿನಗಳಿಂದ ಜಿಲ್ಲೆಯಲ್ಲಿ ೨.೮ ಸೆಂ.ಮೀ ಮಳೆಯಾಗಿದೆ. ಈ ಭಾಗದಲ್ಲಿ ಸುಮಾರು ೪ ಸೆಂ.ಮೀ ಮಳೆಯಾಗಿದ್ದು ಇದರ ಜೊತೆಗೆ ಭೀಕರವಾಗಿ ಗಾಳಿ ಬೀಸಿದ ಪರಿಣಾಮ ನಿರೀಕ್ಷೆ ಮೀರಿ ಅನಾಹುತಗಳಾಗಿವೆ. ಈಗಾಗಲೇ ನಮ್ಮ ಕಂದಾಯ, ಕೃಷಿ, ತೋಟಗಾರಿಕಾ ಸಿಬ್ಬಂದಿ ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಎನ್.ಡಿ.ಆರ್ ನಿಂದ ಪರಿಹಾರ ದೊರಕಿಸುವ ಪ್ರಯತ್ನಮಾಡುತ್ತೇವೆ. ರೈತರ ಒಟ್ಟು ಬೆಳೆಗಳಲ್ಲಿ ಶೇ. ೩೩ ಹಾನಿಯಾಗಿರುವವರಿಗೆ ಪರಿಹಾರ ದೊರಕಿಸುತ್ತೆವೆ. ಹೆಚ್ಚಿನ ಮಾಹಿತಿಗೆ ಸ್ಥಳೀಯ ಇಲಾಖೆಗಳನ್ನು ಸಂಪರ್ಕಿಸಿ ಮಾಹಿತಿ ನೀಡಿ ಇಲ್ಲವೇ ಕರೆ ಮಾಡಿದರೆ ಅವರೇ ಬರುತ್ತಾರೆ ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಕೃಷಿಹೊಂಡಕ್ಕೆ ಬೇಲಿ ಇಲ್ಲದ್ದನ್ನು ಗಮನಿಸಿ ಸೂಕ್ತ ಬೇಲಿಹಾಕಿ ಎಂದು ರೈತರಿಗೆ ಎಚ್ಚರಿಸಿದರು. ಚಿಕ್ಕನಾಯಕನಹಳ್ಳಿ ತಾಲೂಕಿನ ಹಾಲುಗೋಣಕ್ಕೂ ಡಿಸಿ ಭೇಟಿ ನೀಡಿದರು, ಈ ವೇಳೆ ತಹಸೀಲ್ದಾರ್ ಮೋಹನ್‌ಕುಮಾರ್ ತೋಟಗಾರಿಕಾ ಸಹಾಯಕ ನಿರ್ದೇಶಕ ಚಂದ್ರಶೇಖರ್, ಚಿಕ್ಕನಾಯಕನಹಳ್ಳಿ ತಹಸೀಲ್ದಾರ್ ಮಮತ ಮೊದಲಾದ ಅಧಿಕಾರಿಗಳು ಹಾಜರಿದ್ದರು.