ಸಾರಾಂಶ
ನಾಗಸಂದ್ರದಿಂದ ಮಾದವಾರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದವರೆಗೆ (ಬಿಐಇಸಿ) ನಮ್ಮ ಮೆಟ್ರೋ ಹಸಿರು ಕಾರಿಡಾರ್ ವಿಸ್ತರಿತ ಮಾರ್ಗದಲ್ಲಿ (3.14 ಕಿ.ಮೀ.) ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಅಯುಕ್ತರಿಂದ ತಪಾಸಣೆ
ಮಯೂರ್ ಹೆಗಡೆ
ಬೆಂಗಳೂರು : ನಾಗಸಂದ್ರದಿಂದ ಮಾದವಾರದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದವರೆಗೆ (ಬಿಐಇಸಿ) ನಮ್ಮ ಮೆಟ್ರೋ ಹಸಿರು ಕಾರಿಡಾರ್ ವಿಸ್ತರಿತ ಮಾರ್ಗದಲ್ಲಿ (3.14 ಕಿ.ಮೀ.) ಶೀಘ್ರವೇ ಮೆಟ್ರೋ ರೈಲು ಸುರಕ್ಷತಾ ಅಯುಕ್ತರಿಂದ ತಪಾಸಣೆ ನಡೆಯಲಿದ್ದು, ಬಹುತೇಕ ಅಕ್ಟೋಬರ್ ಮಧ್ಯದಲ್ಲಿ ಪ್ರಯಾಣಿಕ ಸಂಚಾರ ಆರಂಭವಾಗುವ ನಿರೀಕ್ಷೆಯಿದೆ.
ಎತ್ತರಿಸಿದ ಈ ಮಾರ್ಗದಲ್ಲಿ ಮಂಜುನಾಥ ನಗರ, ಚಿಕ್ಕಬಿದರಕಲ್ಲು ಹಾಗೂ ಮಾದವಾರದಲ್ಲಿ ನಿಲ್ದಾಣಗಳಿವೆ. ಸಿವಿಲ್, ತಾಂತ್ರಿಕ ಸೇರಿ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿವೆ. ಪ್ರಾಯೋಗಿಕ ಸಂಚಾರವೂ ಮುಗಿದಿದ್ದು, ಹೀಗಾಗಿ ಮೆಟ್ರೋ ಸುರಕ್ಷತಾ ಆಯುಕ್ತಾಲಯಕ್ಕೆ (ಸಿಎಂಆರ್‌ಎಸ್) ಸುರಕ್ಷತಾ ತಪಾಸಣೆ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮ ಕೋರಿದೆ.
ಆಗಸ್ಟ್ ಅಂತ್ಯ ಹಾಗೂ ಸೆಪ್ಟೆಂಬರ್‌ನಲ್ಲಿ ಸಿಗ್ನಲಿಂಗ್ ಹಾಗೂ ಪ್ರಾಯೋಗಿಕ ಸಂಚಾರ ನಡೆಸಲಾಗಿದೆ. ಸಪ್ಟೆಂಬರ್ ಒಳಗೆ ಸಿಎಂಆರ್‌ಎಸ್ ಸುರಕ್ಷತಾ ತಪಾಸಣೆ ನಡೆಯುವ ನಿರೀಕ್ಷೆಯಿದೆ. ಈ ತಪಾಸಣೆ ಬಳಿಕ ಸಿಎಂಆರ್‌ಎಸ್ ಸೂಚಿಸುವ ಬದಲಾವಣೆ, ಮಾರ್ಗಸೂಚಿಸ ಅನುಸರಿಸಿ ಮೆಟ್ರೋ ಸಂಚಾರ ಪ್ರಾರಂಭ ಮಾಡಲಾಗುವುದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
2017ರಲ್ಲೇ ಸಿಂಪ್ಲೆಕ್ಸ್ ಇನ್‌ಫ್ರಾಸ್ಟಕ್ಚರ್‌ಗೆ ₹298.65 ಕೋಟಿ ಮೊತ್ತದ ಈ ಯೋಜನೆ ಗುತ್ತಿಗೆ ನೀಡಲಾಗಿತ್ತು. 27 ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಿಳಿಸಲಾಗಿತ್ತು. ಆದರೆ, ಕೋವಿಡ್, ಭೂಸ್ವಾದೀನದ ಸವಾಲು ಸೇರಿ ಇನ್ನಿತರ ಕಾರಣದಿಂದ ಕಾಮಗಾರಿ ಐದು ವರ್ಷ ವಿಳಂಬವಾಗಿ ಪೂರ್ಣಗೊಂಡಿದೆ. ನಮ್ಮ ಮೆಟ್ರೋ ಇತಿಹಾಸದಲ್ಲೇ ಅತ್ಯಂತ ವಿಳಂಬವಾಗಿ ಮುಗಿದ ಕಾಮಗಾರಿ ಇದು ಎಂಬ ಹಣೆಪಟ್ಟಿ ಹೊತ್ತಿದೆ.
ಸದ್ಯ ಬೆಂಗಳೂರಿನ ಉತ್ತರ-ದಕ್ಷಿಣ ಭಾಗ ಸಂಪರ್ಕಿಸುತ್ತಿರುವ ಹಸಿರು ಕಾರಿಡಾರ್ (30.32 ಕಿಮೀ) ಉತ್ತರದಲ್ಲಿ ನಾಗಸಂದ್ರದಲ್ಲಿ ಪ್ರಾರಂಭವಾಗಿ ದಕ್ಷಿಣದಲ್ಲಿ ಸಿಲ್ಕ್ ಇನ್‌ಸ್ಟಿಟ್ಯೂಟ್ ನಲ್ಲಿ ಕೊನೆಗೊಳ್ಳುತ್ತಿದೆ. ನಾಗಸಂದ್ರದಿಂದ ಮಾದವಾರ ಮೆಟ್ರೋ ಮಾರ್ಗ ವಿಸ್ತರಣೆಯಿಂದ 33.46 ಕಿ.ಮೀ. ಉದ್ದವಾಗಲಿದೆ. ವೈಟ್‌ಫೀಲ್ಡ್-ಛಲ್ಲಘಟ್ಟದ ನೇರಳೆ ಮಾರ್ಗ (43.49 ಕಿ.ಮೀ.) ಸೇರಿ ಒಟ್ಟಾರೆ ನಮ್ಮ ಮೆಟ್ರೋ ವ್ಯಾಪ್ತಿ 76.95 ಕಿ.ಮೀ.ಗೆ ಹೆಚ್ಚಳವಾಗಲಿದೆ.
ಈ ಮೆಟ್ರೋ ಮಾರ್ಗ ಬಿಐಇಸಿ, ಪ್ರೆಸ್ಟಿಜ್ ಜಿಂದಾಲ್ ಸಿಟಿ ಜನತೆಗೆ ಹೆಚ್ಚು ಅನುಕೂಲವಾಗಿದ್ದು, ಜೊತೆಗೆ ನೆಲಮಂಗಲ, ಮಾಕಳಿ, ಮಾದನಾಯಕನಹಳ್ಳಿ ನಿವಾಸಿಗಳಿಗೂ ನಗರಕ್ಕೆ ಬಂದು ಹೋಗಲು ಪ್ರಯೋಜನ ಆಗಲಿದೆ.
ರೈಲು ಕೊರತೆ ಸವಾಲು
ಪ್ರಸ್ತುತ ನಮ್ಮ ಮೆಟ್ರೋ ಈವರೆಗಿನ ಒಂದು ದಿನದ ಪ್ರಯಾಣಿಕರ ಸಂಖ್ಯೆ 9.17 ಲಕ್ಷ ಇದ್ದು, ಮಾರ್ಗದ ಉದ್ದ ಹೆಚ್ಚಳದಿಂದ ಶೀಘ್ರವೇ ಪ್ರಯಾಣಿಕರ ಸಂಖ್ಯೆ 10 ಲಕ್ಷ ತಲುಪುವ ಸಾಧ್ಯತೆಯಿದೆ. ಪ್ರತಿ ತಿಂಗಳು ಸರಾಸರಿ ಪ್ರಯಾಣಿಕರ ಸಂಖ್ಯೆ 2.30 ಕೋಟಿಯಿದ್ದು, ಸಹಜವಾಗಿ ಈ ಸಂಖ್ಯೆಯೂ ಹೆಚ್ಚಾಗಲಿದೆ. ಪ್ರತಿದಿನ ನಮ್ಮ ಮೆಟ್ರೋದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚುತ್ತಿದ್ದು, ವಿಸ್ತರಿತ ಮಾರ್ಗದಿಂದ ಪ್ರತಿದಿನ ಸರಾಸರಿ 25-30 ಸಾವಿರ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುವ ನಿರೀಕ್ಷೆಯಿದೆ.
ಆದರೆ, ಬಿಎಂಆರ್‌ಸಿಎಲ್ ಬಳಿ ಸದ್ಯ ರೈಲುಗಳ ಕೊರತೆಯಿದೆ. ಹಸಿರು ಮಾರ್ಗದಲ್ಲಿ ಸದ್ಯ 24 ರೈಲುಗಳು ಸಂಚರಿಸುತ್ತಿವೆ. ಆದರೆ, 2021ರ ಹೊತ್ತಿಗೆ ಹಸಿರು ಮಾರ್ಗದಲ್ಲಿ 35 ರೈಲುಗಳ ಅಗತ್ಯವಿತ್ತು. ತೀತಾಘರ್ ರೈಲ್ ಸಿಸ್ಟಮ್ಸ್‌ನಿಂದ ರೈಲುಗಳು ಬರುವವರೆಗೆ ಈ ಸಮಸ್ಯೆ ಇರಲಿದೆ.
ಹಸಿರು ಮೆಟ್ರೋ ಮಾರ್ಗ ತುಮಕೂರಿಗೂ ವಿಸ್ತರಣೆ
ಭವಿಷ್ಯದಲ್ಲಿ ಇದೇ ಹಸಿರು ಮಾರ್ಗವನ್ನು ಮಾದವಾರದಿಂದ ತುಮಕೂರಿಗೆ ವಿಸ್ತರಣೆ ಮಾಡುವ ಉದ್ದೇಶವೂ ಇದ್ದು, 54.21 ಕಿ.ಮೀ. ವಿಸ್ತರಣೆಯ ಕಾರ್ಯಸಾಧ್ಯತಾ ವರದಿ ರೂಪಿಸಲು ಮುಂದಾಗಿದೆ. ₹1.25 ಕೋಟಿ ಮೊತ್ತದ ಈ ಅಧ್ಯಯನ ಟೆಂಡರನ್ನು ಆರ್.ವಿ.ಅಸೋಸಿಯೇಟ್ಸ್ ಆರ್ಕಿಟೆಕ್ಟ್ಸ್ ಕಂಪನಿಯು ಪಡೆದಿದೆ. ಪ್ರಾಥಮಿಕವಾಗಿ 19 ನಿಲ್ದಾಣವನ್ನು ಈ ಮಾರ್ಗದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ.