ಸಾರಾಂಶ
ಸೊರಬ: ಪಟ್ಟಣದಲ್ಲಿ ಬೀಡಾಡಿ ದನಗಳು ಹೆಚ್ಚಾಗುತ್ತಿದ್ದು, ಇವುಗಳ ಉಪಟಳದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಆದ್ದರಿಂದ ಇದನ್ನು ಸರಿಪಡಿಸುವ ಮೂಲಕ ಸಾರ್ವಜನಿಕರು ಮತ್ತು ವಾಹನ ಸವಾರರಿಗೆ ನೆರವಾಗಬೇಕು ಎಂದು ಆಗ್ರಹಿಸಿ ತಾಲೂಕು ಗೋ ಸಂರಕ್ಷಣಾ ಹೋರಾಟ ಸಮಿತಿ ಹಾಗೂ ಹಿಂದೂ ಜಾಗರಣಾ ವೇದಿಕೆ, ಬಜರಂಗದಳ ವತಿಯಿಂದ ಮಂಗಳವಾರ ಪಟ್ಟಣದ ಪುರಸಭೆ ಮುಂಭಾಗ ಕಾಲು ಮುರಿದ ಕರುವನಿಟ್ಟು ಪ್ರತಿಭಟನೆ ನಡೆಸಿದರು.ಪ್ರತಿಭಟನೆಯ ನೇತೃತ್ವ ವಹಿಸಿದ್ದ ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ ಮಾತನಾಡಿ, ಪಟ್ಟಣದ ಬೀದಿಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು, ರಾತ್ರಿಯಾಗುತ್ತಿದ್ದಂತೆ ರಸ್ತೆಯಲ್ಲಿ ಮಲಗುವುದರಿಂದ ವಾಹನ ಸವಾರರಿಗೆ ತೊಂದರೆ ಆಗಿ ದುರ್ಘಟನೆಗಳು ಸಂಭವಿಸುತ್ತಿವೆ. ಮಂಗಳವಾರದ ಸಂತೆ ಬಂದರೆ ಸಾಕು, ಸಂತೆಯ ಮಾರುಕಟ್ಟೆಯ ತುಂಬಾ ಬಿಡಾಡಿ ದನಗಳೇ ಇರುತ್ತವೆ. ಕಳೆದ ಎರಡು ದಿನದ ಹಿಂದೆ ಬೀದಿ ದನಗಳು ಕಾದಾಟ ನಡೆಸುತ್ತಿದ್ದ ಸಂದರ್ಭದಲ್ಲಿ ಪಟ್ಟಣದ ನಿವಾಸಿ ಜೆ.ಎಸ್.ನಾಗರಾಜ್ ಜೈನ್ ಅವರು ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದಾರೆ ಎಂದು ತಿಳಿಸಿದರು.ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಹ ಸಂಯೋಜಕ ಲೋಕೇಶ್ ಕಕ್ಕರಸಿ ಮಾತನಾಡಿ, ಇತ್ತೀಚೆಗೆ ಎಪಿಎಂಸಿ ಸಮೀಪದಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಮೂರು ಜಾನುವಾರುಗಳು ಮೃತಪಟ್ಟಿವೆ. ಒಂದು ಕರು ಗಾಯಗೊಂಡಿದ್ದು, ಕಳೆದ ೧೫ ದಿನಗಳಿಂದ ಚಿಕಿತ್ಸೆ ನೀಡಲಾಗುತ್ತಿದೆ. ಇದಲ್ಲದೆ ಪಟ್ಟಣದಲ್ಲಿ ಅನೇಕ ಅವಘಡಗಳು ಸಂಭವಿಸಿವೆ. ರಾತ್ರಿ ಸಮಯದಲ್ಲಿ ಎಲ್ಲೆಂದರಲ್ಲಿ ರಸ್ತೆಯ ಮೇಲೆ ಮಲಗುತ್ತವೆ. ಈ ಬಗ್ಗೆ ಹಲವು ಬಾರಿ ಮನವಿ ಸಹ ನೀಡಲಾಗಿದೆ. ಜಾನುವಾರುಗಳ ಮಾಲೀಕರಿಗೆ ಎಚ್ಚರಿಕೆ ನೀಡಿ, ಮನೆಯಲ್ಲಿ ಕಟ್ಟಿ ಹಾಕಲು ಆದೇಶ ನೀಡಬೇಕು. ಇಲ್ಲವಾದಲ್ಲಿ ಪುರಸಭೆಯಿಂದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಮನವಿ ಸ್ವೀಕರಿಸಿದ ಪುರಸಭೆ ಮುಖ್ಯಾಧಿಕಾರಿ ಎಚ್.ವಿ.ಚಂದನ್ ಮಾತನಾಡಿ, ಶೀಘ್ರದಲ್ಲಿಯೇ ಜಾನುವಾರುಗಳ ಮಾಲೀಕರಿಗೆ ನೋಟಿಸ್ ನೀಡಲಾಗುವುದು. ಮಾಲೀಕರಿಲ್ಲದ ಜಾನುವಾರುಗಳನ್ನು ಗೋ ಶಾಲೆಗೆ ಕಳುಹಿಸಲು ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಕಳೆದ ೧೫ ದಿನಗಳ ಹಿಂದೆ ಅಪಘಾತದಲ್ಲಿ ಗಾಯಗೊಂಡಿದ್ದ ಕರುವಿಗೆ ಪಶು ಚಿಕಿತ್ಸಾಲಯದ ಶುಶ್ರೂಷಕ ಅಣ್ಣಪ್ಪ ಚಿಕಿತ್ಸೆ ನೀಡಿದರು.ಪ್ರತಿಭಟನೆಯಲ್ಲಿ ಬಜರಂಗದಳ ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಹಿಂದು ಜಾಗರಣಾ ವೇದಿಕೆ ತಾಲೂಕು ಸಹ ಸಂಚಾಲಕ ರಾಘು ಆಚಾರ್, ಸಾರ್ವಜನಿಕ ಹಿತರಕ್ಷಣಾ ಹೋರಾಟ ಸಮಿತಿ ಉಪಾಧ್ಯಕ್ಷ ದತ್ತಾ, ಕಾರ್ಯದರ್ಶಿ ಶರತ್ ಸ್ವಾಮಿ, ಸಹ ಕಾರ್ಯದರ್ಶಿ ನಾಗಪ್ಪ ಬಿದರಗೇರಿ, ಹಾಲೇಶ್, ಕೇಶವ ಪೇಟ್ಕರ್ ಸೇರಿದಂತೆ ಇತರರಿದ್ದರು.