ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಮನೆ ಮತ್ತು ಮನಗಳಲ್ಲಿ ಅಧ್ಯಾತ್ಮಿಕ ಭಾವನೆ ಇದ್ದಾಗ ಮಾತ್ರ ನೆಮ್ಮದಿ ಸಾಧ್ಯ. ಇಲ್ಲವಾದರೆ, ಅಪಾರ ಪರಿಶ್ರಮದಿಂದ ನಿರ್ಮಿಸಿದ ಸ್ವಂತ ಮನೆಯಲ್ಲೇ ಪರಕೀಯತೆಯ ಭಾವನೆ ಬರುತ್ತದೆ ಎಂದು ಶ್ರೀ ವಾಸವಿ ಪೀಠದ ಜಗದ್ಗುರು ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.ನಗರದ ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನದ ಶ್ರೀ ವಾಸವಿ ಪ್ರಸಾದಾಲಯದ ಭೂಮಿಪೂಜೆ ನೆರವೇರಿಸಿ ಸ್ವಾಮೀಜಿ ಮಾತನಾಡಿದರು.
ಎಷ್ಟೋ ಜನರು ಅಪಾರ ಪರಿಶ್ರಮದಿಂದ ಮನೆಗಳನ್ನು ಕಟ್ಟಿಕೊಂಡಿರುತ್ತಾರೆ. ಆದರೆ, ಆ ಮನೆಯಲ್ಲೇ ನೆಮ್ಮದಿ ಇರುವುದಿಲ್ಲ. ನೆಮ್ಮದಿಯನ್ನು ಮನೆಯಿಂದ ಹೊರಗೆ ಹುಡುಕುವ ಪ್ರಯತ್ನ ನಡೆಸುತ್ತಾರೆ ಎಂದು ಶ್ರೀಗಳು ವಿಷಾದಿಸಿದರು.ಆಧ್ಯಾತ್ಮಿಕ ಗುಣಗಳನ್ನು ಬೆಳೆಸಿಕೊಳ್ಳದೆ ಇರುವುದೇ ಈ ರೀತಿಯ ಅಶಾಂತಿಗೆ ಕಾರಣಾಗುತ್ತದೆ. ಅಧ್ಯಾತ್ಮಿಕ ಗುಣವಿಲ್ಲದಿದ್ದರೆ ಅಪಾರ ಆಸ್ತಿ ಗಳಿಸಿದರೂ ನೆಮ್ಮದಿ ಇರುವುದಿಲ್ಲ. ದೇವರ ಭಕ್ತಿ –ಪೂಜೆಯ ಭಾವನೆಗಳನ್ನು ಮಕ್ಕಳು ಮನೆಯಲ್ಲಿ ಕಲಿಯಲು ಸಾಧ್ಯವಾಗುತ್ತಿಲ್ಲ. ಕಲಿಕೆಯ ಒತ್ತಡ ಹಾಗೂ ಒಂಟಿ ಕುಟುಂಬಗಳ ಕಾರಣದಿಂದಾಗಿ ಈ ಹಿಂದಿನ ಕಾಲದಂತೆ ಈಗಿನ ಮಕ್ಕಳಿಗೆ ಮನೆಗಳಲ್ಲಿ ದೈವಭಕ್ತಿ ಕಲಿಯಲು ಅವಕಾಶವಾಗುತ್ತಿಲ್ಲ ಎಂದು ತಿಳಿಸಿದರು.
ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಸವಿ ಪೀಠದಲ್ಲಿ ಆಧ್ಯಾತ್ಮಿಕ ಕಲಿಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಸಕುಟುಂಬ ಸಮೇತವಾಗಿ ಅಧ್ಯಾತ್ಮಿಕ ಕಲಿಕೆಯಲ್ಲಿ ತೊಡಗಲು ಪೀಠದಲ್ಲಿ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.ನಗರದಲ್ಲಿ ವಾಸವಿ ಮಾತೆಗೆ ಮೂರು ದೇವಾಲಯಗಳಿವೆ. ಈ ಮೂರೂ ದೇವಾಲಯಗಳು ಸಮಾಜದ ಎಲ್ಲ ಭಕ್ತರಿಗೆ ಸೇರಿದ್ದಾಗಿವೆ. ಭಕ್ತಿಯ ವಿಷಯ ಬಂದಾಗ ಸಮಾಜದ ಎಲ್ಲರೂ ಒಂದಾಗಬೇಕು ಎಂದು ಕಿವಿಮಾತು ಹೇಳಿದರು.
ದೇವಾಲಯಗಳ ನಿರ್ಮಾಣವಷ್ಟೇ ಅಲ್ಲದೇ ನಿರ್ವಹಣೆಯೂ ಅತಿ ಮುಖ್ಯ. ದೇವಾಲಯಗಳ ಕೈಂಕರ್ಯ ಮಾಡುವುದು ಕೇವಲ ಪದಾಧಿಕಾರಿಗಳ ಕೆಲಸವಲ್ಲ. ಈ ವಿಷಯದಲ್ಲಿ ಸಮಾಜದ ಎಲ್ಲರೂ ಕೈ ಜೋಡಿಸಬೇಕು ಎಂದ ಶ್ರೀಗಳು, ವಾಸವಿ ಪ್ರಸಾದನಿಲಯ ವರ್ಷದಲ್ಲೇ ನಿರ್ಮಾಣಗೊಳ್ಳುವಂತಾಗಲಿ ಎಂದು ಆಶಿಸಿದರು.ಆರ್ಯವೈಶ್ಯ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಭಕ್ತಿ ಸಿಂಚನ ಕಾರ್ಯಕ್ರಮಕ್ಕೆ ಆಗಮಿಸಿದ್ದ ಶ್ರೀಗಳನ್ನು ಬೈಕ್ ರ್‍ಯಾಲಿ ಮೂಲಕ ಕರೆ ತರಲಾಗಿತ್ತು. ಅದೇ ರೀತಿ ಬೀಳ್ಗೊಡುಗೆ ಸಂದರ್ಭದಲ್ಲೂ ಸಹ ಬೈಕ್ ರ್‍ಯಾಲಿ ಆಯೋಜಿಸಿದ್ದು ವಿಶೇಷವಾಗಿತ್ತು.
ಶ್ರೀ ಕನ್ಯಕಾಪರಮೇಶ್ವರಿ ದೇವಸ್ಥಾನ ಸಂಘದ ಅಧ್ಯಕ್ಷ ಆರ್.ಎಲ್.ಪ್ರಭಾಕರ, ಗೌರವಾಧ್ಯಕ್ಷ ಆರ್.ಜಿ.ನಾಗೇಂದ್ರ ಪ್ರಕಾಶ್, ಕಾರ್ಯಾಧ್ಯಕ್ಷ ಕಾಸಲ್ ಎಸ್.ಸತೀಶ್ , ಕಾರ್ಯದರ್ಶಿ ಜೆ. ರವೀಂದ್ರ ಗುಪ್ತ, ಸಹಕಾರ್ಯದರ್ಶಿ ಎ.ಎಸ್.ಸತ್ಯನಾರಾಯಣ ಸ್ವಾಮಿ, ಖಜಾಂಚಿ ಕಬ್ಬೂರ್ ನಾಗೇಂದ್ರ ಕುಮಾರ್, ಶ್ರೀ ಕನ್ನಿಕಾ ಪರಮೇಶ್ವರಿ ಬ್ಯಾಂಕ್ ಅಧ್ಯಕ್ಷ ಆರ್.ಜಿ. ಶ್ರೀನಿವಾಸಮೂರ್ತಿ, ಎಸ್.ಕೆ.ಪಿ.ವಿದ್ಯಾಪೀಠದ ಕಾರ್ಯದರ್ಶಿ ಕೆ.ಎನ್.ಅನಂತರಾಮ್ ಶೆಟ್ಟಿ, ವಾಸವಿ ಯುವಜನ ಸಂಘದ ರಾಜ್ಯಾಧ್ಯಕ್ಷ ಎಸ್. ಸುನೀಲ್ ಮತ್ತಿತರರು ಹಾಜರಿದ್ದರು.