ಸಾರಾಂಶ
ಸೊರಬ: ವಿಶ್ವ ಹಿಂದು ಪರಿಷದ್ ಬಜರಂಗದಳ ನೇತೃತ್ವದ ಹಿಂದೂ ಮಹಾ ಸಭಾ ಗಣಪತಿ ಉತ್ಸವ ಸಮಿತಿಯಿಂದ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯ ವಿಸರ್ಜನಾ ಪೂರ್ವ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು.ಮೆರವಣಿಗೆಯಲ್ಲಿ ಗಣೇಶನ ಹಿಂಭಾಗ ಅಖಂಡ ಭಾರತದ ಭೂಪಟ, ಇದರಲ್ಲಿ ಸಾವರ್ಕರ್ ಅವರ ಭಾವಚಿತ್ರದ ವಿಶೇಷ ಅಲಂಕಾರವನ್ನು ಮಾಡಲಾಗಿತ್ತು. ಕಾನುಕೇರಿಯ ಸನ್ನಿಧಿಯಿಂದ ಹೊರಟ ಮೆರವಣಿಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಶ್ರೀ ಸ್ವಾಮಿ ವಿವೇಕಾನಂದ ಶಾಲೆ, ಚಾಮರಾಜಪೇಟೆ, ಖಾಸಗಿ ಬಸ್ ನಿಲ್ದಾಣ ವೃತ್ತ, ಮುಖ್ಯರಸ್ತೆ ಮಾರ್ಗವಾಗಿ ಶ್ರೀ ರಾಮಚಂದ್ರ ದೇವಸ್ಥಾನ, ಶ್ರೀ ವರದಾಹಸ್ತ ಆಂಜನೇಯ ದೇವಸ್ಥಾನ, ಶ್ರೀ ರಂಗನಾಥ ದೇವಸ್ಥಾನ ತಲುಪಿತು. ನಂತರ ಶ್ರೀ ಗಣೇಶ ಮೂರ್ತಿಯನ್ನು ದಂಡಾವತಿ ನದಿಯಲ್ಲಿ ವಿಸರ್ಜಿಸಲಾಯಿತು.
ಮೆರವಣಿಗೆಯು ಖಾಸಗಿ ಬಸ್ ನಿಲ್ದಾಣ ವೃತ್ತದ ಬಳಿ ಆಗಮಿಸಿದಾಗ ಟೀಮ್ ಮಧು ಬಂಗಾರಪ್ಪ ವತಿಯಿಂದ ಶ್ರೀ ಗಣೇಶ ಮೂರ್ತಿಗೆ ಬೃಹತ್ ಹಾರ ಸಮರ್ಪಿಸಲಾಯಿತು. ಈ ವೇಳೆ ತಾಪಂ ಮಾಜಿ ಅಧ್ಯಕ್ಷ ಗಣಪತಿ ಹುಲ್ತಿಕೊಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ.ಶೇಖರ್, ತಾಲೂಕು ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ, ಪುರಸಭೆ ನಾಮ ನಿರ್ದೇಶನ ಸದಸ್ಯ ಪರಶುರಾಮ ಸಣ್ಣಬೈಲ್, ಯು.ಫಯಾಜ್ ಅಹಮ್ಮದ್, ಅತೀಕ್ ವುರ್ ರೆಹಮಾನ್, ಶಿವಪ್ಪ ಕೊಡಕಣಿ, ಶೋಭರಾಜ ಮಂಚಿ, ರವಿ ಕೇಸರಿ, ಮನೋಜ್ ಸೇರಿದಂತೆ ಇತರರಿದ್ದರು.ಶ್ರೀ ರಾಮಚಂದ್ರ ದೇವಸ್ಥಾನ ಬಳಿ ಗುಡಿಗಾರ ಸಮಾಜ, ಸೊಪ್ಪಿನ ಕೇರಿ ನಿವಾಸಿಗಳಿಂದ, ಗಣೇಶ ವರದಹಸ್ತ ಆಂಜನೇಯ ದೇವಸ್ಥಾನ ಮುಂಭಾಗ ಜಡೆ ಹಿರೇಮಠ ಹಾಗೂ ಸೊರಬ ಕಾನುಕೇರಿ ಮಠದ ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ನೇತೃತ್ವದಲ್ಲಿ ಬೃಹತ್ ಹಾರಗಳನ್ನು ಸಮರ್ಪಿಸಲಾಯಿತು.
ಮೆರವಣಿಗೆ ಹಾದು ಹೋಗುವ ಮಾರ್ಗದಲ್ಲಿ ಕೇಸರಿ ಧ್ವಜಗಳಿಂದ ಸಿಂಗಾರ ಮಾಡಲಾಗಿತ್ತು, ಮನೆಗಳ ಮುಂಭಾಗ ರಂಗೋಲಿ ಹಾಕಿ ಸ್ವಾಗತಿಸಲಾಯಿತು. ಕೆಲವಡೆ ಪುಷ್ಪಾರ್ಚನೆ ಮಾಡಲಾಯಿತು. ಸಮಿತಿಯಿಂದ ಖಾಸಗಿ ಬಸ್ ನಿಲ್ದಾಣ ವೃತ್ತ ಹಾಗೂ ಶ್ರೀ ರಂಗನಾಥ ದೇವಸ್ಥಾನ ಬಳಿ ಪ್ರಸಾದದ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೆರವಣಿಗೆಗೆ ಚಂಡೆ ಮೇಳ, ಭಜನಾ ತಂಡಗಳು ಮೆರುಗು ತಂದವು.ಯುವಕರು ಹಾಗೂ ಯುವತಿಯರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ಮೆರವಣಿಗೆಗೆ ಸಮಾಜ ಸೇವಕ ಡಾ.ಎಚ್.ಇ.ಜ್ಞಾನೇಶ್ ಚಾಲನೆ ನೀಡಿದರು. ಹಿಂದೂ ಮಹಾಸಭಾ ಗಣಪತಿ ಉತ್ಸವ ಸಮಿತಿ ಅಧ್ಯಕ್ಷ ನಿರಂಜನ್, ಕಾರ್ಯದರ್ಶಿ ಸಾತ್ವಿಕ್, ರವಿ ಗುಡಿಗಾರ್, ಉಮಾಶಂಕರ್, ಶಶಿಕುಮಾರ್, ಚಂದನ್, ಜೆ.ಬಿ.ಸಂತೋಷ್, ಸಂಜೀವ ಆಚಾರ್, ನಾಗರಾಜ ಗುತ್ತಿ ಸೇರಿದಂತೆ ಸಾವಿರಾರು ಕಾರ್ಯಕರ್ತರು, ವಿವಿಧ ಸಂಘ ಸಂಸ್ಥೆಯವರು ಇದ್ದರು. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.