ಸಾರಾಂಶ
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಇದೀಗ ಕೆಲ ದಿನಗಳಿಂದ ಮುಂಗಾರು ಹಂಗಾಮು ಆರಂಭಗೊಂಡು ಮಳೆಯಾಗುತ್ತಿದೆ ಆದರೆ, ತಾಲೂಕಿನ ಸೊರಟೂರು ಗ್ರಾಮದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಂದೇ ಆವರಣದಲ್ಲಿದ್ದು, ಇಡೀ ಶಾಲಾ ಅವರಣ ಮಳೆ ನೀರಿನಿಂದಾಗಿ ಕರೆಯಂತಾಗಿದೆ. ಪ್ರತಿ ದಿನ ಮಕ್ಕಳು ತಮ್ಮ ಮನೆಗಳಿಂದ ಶಾಲೆಗೆ ಬರುವಾಗ ಹರಸಾಹಸ ಪಡ ಬೇಕಾದ ಪರಿಸ್ಥಿತಿ ಇರುವುದು ದೌರ್ಭಾಗ್ಯದ ಸಂಗತಿಯಾಗಿದೆ.ಕೆಲ ದಿನಗಳಿಂದ ಮಾತ್ರ ಮಳೆ ಬರಲಾರಂಭಿಸಿದ್ದು, ಈಗಲೇ ಇಡೀ ಶಾಲಾ ಅವರಣ ಕೆರಯೋಪಾದಿಯಲ್ಲಿ ನೀರಿನಿಂದ ಸುತ್ತವರೆದಿದೆ. ಇಂತಹ ನೀರಿನಲ್ಲಿ ಪ್ರಾಥಮಿಕ ಶಾಲೆಗೆ ಆಗಮಿಸುವ ಸಣ್ಣ ಮಕ್ಕಳು ಹೇಗೆ ತಾನೆ ಶಾಲಾ ಕೊಠಡಿಯೊಳಗೆ ಬರಲು ಸಾಧ್ಯ? ಈ ಬಗ್ಗೆ ಶಾಲೆಯವರು, ಶಾಲೆಯ ಎಸ್.ಡಿ.ಎಂ.ಸಿ. ಸಮಿತಿಯವರುಸ ಬಹುಮುಖ್ಯವಾಗಿ ಶಿಕ್ಷಣ ಇಲಾಖೆ ಅಧಿಕಾರಿಗಳು, ಸ್ಥಳೀಯ ಆಡಳಿತ ವ್ಯವಸ್ಥೆಯ ಗ್ರಾಮ ಪಂಚಾಯಿತಿಯವರು ಚಿಂತಿಸಬೇಕಲ್ಲವೆ. ಇದುವರೆಗೆ ಯಾರೂ ಕೂಡ ಈ ಬಗ್ಗೆ ತಲೆ ಕೆಡಿಸಿಕೊಂಡಂತ್ತಿಲ್ಲ.
ಒಂದು ಕಡೆ ಪರಿಸರ ಸಂರಕ್ಷಣೆ ಆಚರಿಸಲಾಗುತ್ತದೆ ಜನಪ್ರತಿನಿಧಿಗಳು ಭಾಷಣ ಮಾಡುತ್ತಾ ನಮ್ಮ ಸುತ್ತಮುತ್ತಲ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂದು ಹೇಳಿದರೆ, ಇನ್ನು ಆರೋಗ್ಯ ಇಲಾಖೆಯವರು ಶಾಲಾ , ಮನೆಗಳ ಸುತ್ತಮತ್ತ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಇಲ್ಲದಿದ್ದರೆ ಸೊಳ್ಳೆಗಳು ಹೆಚ್ಚಾಗಿ ಡೆಂಘೀ, ಮಲೇರಿಯಾ, ಮುಂತಾದ ಮಾರಕ ಕಾಯಿಲೆಗಳು ಬರುತ್ತವೆ ಎಂದು ವೇದಿಕೆಗಳ ಮೇಲೆ ವಾಚಾಮಗೋಚರ ಹೇಳುತ್ತಾರೆ .ಅದರೆ ವಾಸ್ತವ ಪರಿಸ್ಥಿತಿ ಬೇರೆಯದ್ದಾಗಿರುತ್ತದೆ ಎನ್ನುವುದಕ್ಕೆ ಸೊರಟೂರು ಗ್ರಾಮದ ಈ ಶಾಲೆಗಳ ಪರಿಸ್ಥಿತಿಯೇ ಸಾಕ್ಷಿ. ಎರಡು ಶಾಲೆಗಳ ಆವರಣ ಸಂಪೂರ್ಣ ನೀರಿನಿಂದ ಅವೃತ್ತವಾಗಿದ್ದರೂ ಕೂಡ ಇತ್ತ ಯಾರೂ ಗಮನಹರಿಸುತ್ತಿಲ್ಲ, ಸರ್ಕಾರಿ ಶಾಲೆಗಳಾದ್ದರಿಂದ ಸಾಮಾನ್ಯವಾಗಿ ಬಡ, ಮಧ್ಯಮ ವರ್ಗಗಳ ಮಕ್ಕಳು ಇಲ್ಲಿಗೆ ಬರುತ್ತಾರೆ ಈ ಮಕ್ಕಳು ಶಾಲೆಗೆ ಬರುವಾಗ ಕಾಲು ಜಾರಿ ನೀರಿನಲ್ಲಿ ಬಿದ್ದರೆ ಯಾರು ಜವಾಬ್ದಾರಿ, ಆಥವಾ ಕಾಯಿಲೆಗಳಿಗೆ ತುತ್ತಾದರೆ ಯಾರು ಹೊಣೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಆಡಳಿತಶಾಹಿ ಉತ್ತರಿಸಬೇಕಿದೆ.