ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದ ಅರಣ್ಯದಲ್ಲಿ ಮತ್ತೆ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿ, ಸಿಬ್ಬಂದಿಯನ್ನೇ ಕಂಡು ಬೇಟೆಗಾರರು ಜಿಂಕೆ ಮಾಂಸ ಸಮೇತ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಹನೂರು

ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹನೂರು ಬಫರ್ ವಲಯದ ಅರಣ್ಯದಲ್ಲಿ ಮತ್ತೆ ಬೇಟೆಗಾರರ ಹಾವಳಿ ಹೆಚ್ಚಾಗಿದ್ದು, ಗಸ್ತಿನಲ್ಲಿದ್ದ ಅರಣ್ಯ ಅಧಿಕಾರಿ, ಸಿಬ್ಬಂದಿಯನ್ನೇ ಕಂಡು ಬೇಟೆಗಾರರು ಜಿಂಕೆ ಮಾಂಸ ಸಮೇತ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.

ಘಟನೆಯ ವಿವರ:

ಪಚ್ಚೆದೊಡ್ಡಿ ಶಾಖೆಯ ಕೊತ್ತಗುಳಿ ಅರಣ್ಯ ಪ್ರದೇಶದಲ್ಲಿ ಸೆ.7 ರ ರಾತ್ರಿ ಉಪವಲಯ ಅರಣ್ಯ ಪ್ರದೇಶದಲ್ಲಿ ಅರಣ್ಯಾಧಿಕಾರಿ ಮಹೇಶ್ ಮತ್ತು ಸಿಬ್ಬಂದಿ ಗಸ್ತು ಮಾಡುತ್ತಿದ್ದ ವೇಳೆ ಗುಂಡಿನ ಸದ್ದು ಕೇಳಿಸಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದಾಗ ಬೇಟೆಗಾರರು ಬೇಟೆಯಾಡಿದ ಜಿಂಕೆಯನ್ನು ಬಿಟ್ಟು ಪರಾರಿಯಾದ ಘಟನೆ ಜರುಗಿದೆ.

ಸೆ. 8 ರಂದು ಬೆಳಗ್ಗೆ ವಲಯ ಅರಣ್ಯಾಧಿಕಾರಿ ಮಹೇಶ್ ನೇತೃತ್ವದಲ್ಲಿ ಸಿಬ್ಬಂದಿ ವರ್ಗದವರು ಕೂಂಬಿಂಗ್ ಕಾರ್ಯಾಚರಣೆ ನಡೆಸಿದಾಗ ಎದೆಯ ಭಾಗ ಮತ್ತು ಎರಡು ಮುಂಗಾಲುಗಳು ಇಲ್ಲದ ಗಂಡು ಜಿಂಕೆಯ ಮೃತದೇಹ ಪತ್ತೆಯಾಗಿದೆ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಬೇಟೆಗಾರರು ಜಿಂಕೆಯನ್ನು ಕೊಂದು, ಮಾಂಸಕ್ಕಾಗಿ ಕತ್ತರಿಸಿ ಅಧಿಕಾರಿಗಳ ಸುಳಿವು ಸಿಗುತ್ತಿದ್ದಂತೆ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಈ ಕುರಿತು ವನ್ಯಜೀವಿ ಅಪರಾಧ ವರದಿ ದಾಖಲಿಸಿಕೊಂಡು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಆರೋಪಿಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ ಎಂದು ಎಸಿಎಫ್ ವಿರಾಜ್ ಹೊಸೂರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲೇ ಎರಡನೇ ಪ್ರಕರಣ:

ಕಳೆದ ಸೆಪ್ಟೆಂಬರ್ 1 ರಂದು ಉಡುತೊರೆ ಜಲಾಶಯದ ಹಿನ್ನೀರಿನಲ್ಲಿ ಬೇಟೆಗಾರರು ಕಡವೆಯನ್ನು ಮೂರು ಭಾಗಗಳಾಗಿ ಕತ್ತರಿಸಿ ಕೊಂದು, ಅರಣ್ಯ ಇಲಾಖೆ ಅಧಿಕಾರಿಗಳನ್ನು ಕಂಡು ಪರಾರಿಯಾಗಿದ್ದರು. ಇದೀಗ ಮತ್ತೆ ಜಿಂಕೆ ಬೇಟೆ ನಡೆದಿದ್ದು, ಸಾಲು ಸಾಲು ಬೇಟೆ ಪ್ರಕರಣಗಳು ವನ್ಯಜೀವಿ ಸಂರಕ್ಷಣೆಗೆ ಅರಣ್ಯ ಅಧಿಕಾರಿಗಳಿಗೆ ಸವಾಲಾಗಿದೆ. .

ಹೆಚ್ಚಾದ ಬೇಟೆಗಾರರು, ವಾರದಲ್ಲಿ ಎರಡನೇ ಬೇಟೆ:

ಹನೂರು ತಾಲೂಕಿನ ಕಾವೇರಿ ವನ್ಯಧಾಮ ಅರಣ್ಯ ಪ್ರದೇಶದಲ್ಲಿ ಆ. 15ರಂದು ನಡೆದ ಶೂಟ್ ಔಟ್ ಪ್ರಕರಣದ ಬೆನ್ನಲ್ಲೇ ಸೆಪ್ಟೆಂಬರ್ ಒಂದರಂದು ಕಡವೇ ಬೇಟೆಯಾಡಿ ಮೂರು ಭಾಗಗಳಾಗಿ ಕತ್ತರಿಸಿ ಅರಣ್ಯ ಅಧಿಕಾರಿಗಳನ್ನು ಕಂಡು ಪರಾರಿಯಾಗಿರುವ ಬೇಟೆಗಾರರು ಒಂದು ವಾರ ಕಳೆಯುವ ಅಷ್ಟರಲ್ಲಿಯೇ ಮತ್ತೊಂದು ಕಡೆ ರಾತ್ರಿ ಗಸ್ತಿನಲ್ಲಿದ್ದ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳಿಗೆ ಗುಂಡಿನ ಸದ್ದು ಕೇಳಿ ಹೋಗುವಷ್ಟರಲ್ಲಿ ಬೇಟೆಗಾರರು ಕಣ್ಮರೆಯಾಗಿದ್ದಾರೆ. ಈ ಬಗ್ಗೆ ಇಲಾಖೆ ಕಾಡುಪ್ರಾಣಿಗಳ ರಕ್ಷಣೆಗಾಗಿ ಬೇಟೆಗಾರರನ್ನು ಪತ್ತೆ ಹಚ್ಚಿ ಬಪರ್‌ ಜೊನ್‌ನಲ್ಲಿ ರಾತ್ರಿ ವೇಳೆ ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡಿ ಬೇಟೆಗಾರರಿಗೆ ಕಡಿವಾಣ ಹಾಕಬೇಕು ಎಂದು ವನ್ಯಜೀವಿ ಪ್ರೇಮಿಗಳು ಆಗ್ರಹಿಸಿದ್ದಾರೆ.