ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಬಿಡುವಿಲ್ಲದೇ ಪಕ್ಷದ ಚಟುವಟಿಕೆ, ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷ, ಪಕ್ಷೇತರ ಅಭ್ಯರ್ಥಿಗಳು ಗುರುವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರಲ್ಲದೇ, ದೇವಸ್ಥಾನ, ಕುಟುಂಬ, ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ದಿನ ಕಳೆದರು.

ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರ ಉಪ ಚುನಾವಣೆ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಬಿಡುವಿಲ್ಲದೇ ಪಕ್ಷದ ಚಟುವಟಿಕೆ, ಪ್ರಚಾರದಲ್ಲಿ ತೊಡಗಿದ್ದ ಕಾಂಗ್ರೆಸ್, ಬಿಜೆಪಿ, ಎಸ್‌ಡಿಪಿಐ, ಆಮ್ ಆದ್ಮಿ ಪಕ್ಷ, ಪಕ್ಷೇತರ ಅಭ್ಯರ್ಥಿಗಳು ಗುರುವಾರ ರಿಲ್ಯಾಕ್ಸ್ ಮೂಡ್‌ನಲ್ಲಿದ್ದರಲ್ಲದೇ, ದೇವಸ್ಥಾನ, ಕುಟುಂಬ, ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚೆಯಲ್ಲಿ ದಿನ ಕಳೆದರು.

ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಎಂ. ಶಾಮನೂರು ಬೆಳಗ್ಗೆಯೇ ಎಂದಿನಂತೆ ಪತ್ರಿಕೆಗಳ ಮೇಲೆ ಕಣ್ಣಾಡಿಸಿ, ದೇವಸ್ಥಾನಗಳಿಗೆ ತೆರಳಿದರು. ಮುಖಂಡರು, ಕಾರ್ಯಕರ್ತರೊಂದಿಗೆ ಚುನಾವಣೆ ಬಗ್ಗೆ ಮೊಬೈಲ್‌ನಲ್ಲಿ ಮಾಹಿತಿ ಪಡೆದರು. ಸಮರ್ಥಗೆ ನಿರಂತರ ಕರೆ ಮಾಡಿ, ಅಭಿನಂದಿಸುವವರಿಗೆ, ಮತ ಹಾಕಿದವರಿಗೆ ಧನ್ಯವಾದ ಹೇಳುತ್ತಿದ್ದರು.

ಸಮರ್ಥ ತಂದೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಚುನಾವಣೆ ಬಗ್ಗೆ ಮುಖಂಡರು, ಆಯಾ ಭಾಗದ ಮುಖಂಡರ ಜೊತೆಗೆ ಚರ್ಚೆ ನಡೆಸಿದರು. ತಾಯಿ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನಗರದ ವಿವಿಧೆಡೆ ಸಭೆ, ಸಮಾರಂಭಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾದರು.

ಶ್ರೀನಿವಾಸ ಟಿ. ದಾಸಕರಿಯಪ್ಪ:

ಮತ್ತೊಂದು ಕಡೆ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ ಟಿ. ದಾಸಕರಿಯಪ್ಪ ಬೆಳಗ್ಗೆ ಸ್ನೇಹಿತರು, ಬೆಂಬಲಿಗರು, ಹಿತೈಷಿಗಳೊಂದಿಗೆ ಹಳೆ ಬಸ್‌ ನಿಲ್ದಾಣ ಸಮೀಪದ ಕಾಫಿ ಬಾರ್ ಬಳಿ ಬಂದು, ಕನ್ನಡಪ್ರಭ ಸೇರಿದಂತೆ ಪತ್ರಿಕೆಗಳಲ್ಲಿ ಚುನಾವಣೆ ಕುರಿತ, ಮತದಾನದ, ಘಟನೆಗಳ ಕುರಿತಂತೆ ಸುದ್ದಿಗಳನ್ನು ವೀಕ್ಷಿಸಿದರು. ಮತ ಹಾಕಿದವರು, ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ ಶ್ರೀನಿವಾಸ ಮಧ್ಯಾಹ್ನ ಮುಖಂಡರೊಂದಿಗೆ ಸುದ್ದಿಗೋಷ್ಟಿ ನಡೆಸಿ, ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅನಂತರ ಇಡೀ ದಿನ ಮುಖಂಡರು, ಕಾರ್ಯಕರ್ತರು, ಹಿತೈಷಿಗಳೊಂದಿಗೆ ಚರ್ಚಿಸಿದರು. ಏ.11ರಂದು ಮಂತ್ರಾಲಯಕ್ಕೆ ತೆರಳಿ, ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯುವುದಾಗಿ ಶ್ರೀನಿವಾಸ ಹೇಳಿದರು.

ಎಸ್‌ಡಿಪಿಐ ಅಭ್ಯರ್ಥಿ ಅಪ್ಸರ್ ಕೊಡ್ಲಿಪೇಟೆ ಸಹ ಕ್ಷೇತ್ರದ ಅಲ್ಪಸಂಖ್ಯಾತರ ಪ್ರದೇಶದಲ್ಲಿ ತಮಗೆ ಬೆಂಬಲಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ಇತರೆ ಅಭ್ಯರ್ಥಿಗಳು ಸಹ ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು.

- - -

(ಫೋಟೋಗಳಿವೆ)