ಸಾರಾಂಶ
ಮೈಸೂರು : ಉತ್ತರ ಪ್ರದೇಶದ ಪ್ರಯಾಗರಾಜ್ ಮಹಾಕುಂಭಮೇಳಕ್ಕೆ ಹೋಗಲಾಗದ ಶ್ರದ್ಧಾಭಕ್ತರು ಬೆರಗುಗಣ್ಣಿನಿಂದ ಎದುರು ನೋಡುತ್ತಿದ್ದ ದಕ್ಷಿಣ ಭಾರತದ ಐತಿಹಾಸಿಕ ಕುಂಭಮೇಳಕ್ಕೆ ಸೋಮವಾರ ತಿರುಮಕೂಡಲ ನರಸೀಪುರದಲ್ಲಿ ವಿಧ್ಯುಕ್ತ ಚಾಲನೆ ದೊರಕಿದೆ. ಕಾವೇರಿ, ಕಪಿಲಾ ಮತ್ತು ಗುಪ್ತಗಾಮಿನಿ ಸ್ಫಟಿಕ ಸರೋವರದ ಸಂಗಮ ಸ್ಥಳ ಅಗಸ್ತೇಶ್ವರಸ್ವಾಮಿ ದೇವಾಲಯದಲ್ಲಿ ಬೆಳಗ್ಗೆ 11ಕ್ಕೆ ಸ್ವಾಮಿಗೆ ಪೂಜೆ ಸಲ್ಲಿಸುವ ಮೂಲಕ ಮೂರು ದಿನಗಳ ಕುಂಭಮೇಳಕ್ಕೆ ಚಾಲನೆ ನೀಡಲಾಯಿತು. ಬಳಿಕ ನದಿ ಮಧ್ಯದಲ್ಲಿರುವ ನಡುಹೊಳೆ ಬಸಪ್ಪನ (ಬಸವೇಶ್ವರ) ಸನ್ನಿಧಿ ದ್ವೀಪದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಲಾಯಿತು.
ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಿಂದ ಪ್ರೇರಿತರಾಗಿ ಮೈಸೂರಿನ ಜಿಲ್ಲೆ ಟಿ. ನರಸೀಪುರ ಆಯೋಜಿಸಲಾಗಿರುವ ಕುಂಭಮೇಳಕ್ಕೆ ಮೊದಲ ದಿನವೇ 2019ರಲ್ಲಿ ಮೂರು ದಿನ ನಡೆದಿದ್ದ ಕುಂಭಮೇಳಕ್ಕೆ ಆಗಮಿಸಿದ್ದಕ್ಕಿಂತ 2-3 ಪಟ್ಟು ಹೆಚ್ಚು ಮಂದಿ ಭೇಟಿ ನೀಡಿದ್ದರು. ಪುಣ್ಯ ಸ್ನಾನಕ್ಕೆ ಅಗಸ್ತೇಶ್ವರ, ಗುಂಜಾ ನರಸಿಂಹಸ್ವಾಮಿ ಮತ್ತು ಭಿಕ್ಷೇಶ್ವರ ದೇವಸ್ಥಾನದ ಬಳಿ ಒಟ್ಟು ಮೂರು ಕಡೆ ವ್ಯವಸ್ಥೆ ಮಾಡಲಾಗಿತ್ತು. ಕೊನೆಯ ದಿನ ಬುಧವಾರ ಕುಂಭಸ್ನಾನಕ್ಕೆ ನಕ್ಷತ್ರ ಹಾಗೂ ಸಮಯ ನಿಗದಿಪಡಿಸಲಾಗಿದೆಯಾದರೂ ಸೋಮವಾರವೇ 30ರಿಂದ 40 ಸಾವಿರ ಭಕ್ತರು ತ್ರಿವೇಣಿ ಸಂಗಮಕ್ಕೆ ಆಗಮಿಸಿ ಮಿಂದೆದ್ದರು.
ಮಠಾಧೀಶರು ಭಾಗಿ:
ಸೋಮವಾರ ಅಗಸ್ತೇಶ್ವರ ದೇವಸ್ಥಾನದಲ್ಲಿ ಪ್ರಾತಃಕಾಲ 9 ಗಂಟೆಗೆ ಅನುಜ್ಞೆ, ಪುಣ್ಯಾಹ, ಗಣಹೋಮ, ಪೂರ್ಣಾಹುತಿ, ಅಭಿಷೇಕ, ಮಹಾಮಂಗಳಾರತಿ ನೆರವೇರಿಸಲಾಯಿತು. ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಸೋಮನಾಥ ಸ್ವಾಮೀಜಿ, ಕಾಗಿನೆಲೆ ಕನಕಗುರು ಪೀಠದ ಶಿವಾನಂದಪುರಿ ಸ್ವಾಮೀಜಿ, ಕೈಲಾಸನಂದ ಮಠದ ಜಯೇಂದ್ರಪುರಿ ಸ್ವಾಮೀಜಿ ಪೂಜಾ ಕೈಂಕರ್ಯ ಕೈಗೊಂಡರು. ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ಎಸ್ಪಿ ವಿಷ್ಣುವರ್ಧನ್, ಉಪ ವಿಭಾಗಾಧಿಕಾರಿ ರಕ್ಷಿತ್ ಮೊದಲಾದವರು ಇದ್ದರು. ಸಂಜೆ 5 ಗಂಟೆಗೆ ಧರ್ಮಸಭೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.ಇಂದು ಡಿಕೆಶಿ ಭೇಟಿ:
ಕುಂಭಮೇಳಕ್ಕೆ ಫೆ. 11ರ ಮಂಗಳವಾರ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭೇಟಿ ನೀಡುವರು. ಬೆಂಗಳೂರಿನಿಂದ ಸಂಜೆ 7 ಗಂಟೆಗೆ ಹೊರಡಲಿರುವ ಡಿ.ಕೆ. ಶಿವಕುಮಾರ್ ರಾತ್ರಿ 9 ಗಂಟೆಗೆ ಟಿ. ನರಸೀಪುರದ ಗುಂಜಾನರಸಿಂಹ ಸ್ವಾಮಿ ದೇವಸ್ಥಾನ ಆವರಣದಲ್ಲಿ ವಾರಾಣಸಿ ಮಾದರಿಯಂತೆ ನದಿ ಸಂಗಮದಲ್ಲಿ ಗಂಗಾಪೂಜೆ ಮತ್ತು ದೀಪಾರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾತ್ರಿ 10.30ಕ್ಕೆ ಹಿಂದಿರುಗುವರು.
ನಾಳೆ -ನಾಡಿದ್ದು ಏನೇನು ಕಾರ್ಯಕ್ರಮ
ಫೆ.11ರಂದು ಚತುರ್ದಶಿ, ಆಶ್ಲೇಷ, ಪ್ರಾತಃ ಪುಣ್ಯಾಹ - ನವಗ್ರಹ ಹೋಮ, ಸುದರ್ಶನ ಹೋಮ ನಡೆಯಲಿವೆ. ಬೆಳಗ್ಗೆ 11 ಗಂಟೆಗೆ ಧರ್ಮಸಭೆ, ಸಂಜೆ 4ಕ್ಕೆ ಮಹಾತ್ಮರ, ಸಂತರ, ಮಹಾ ಮಂಡಲೇಶ್ವರರ ತ್ರಿವೇಣಿ ಸಂಗಮ ಕ್ಷೇತ್ರ ಪ್ರವೇಶ. ಗುಂಜಾನರಸಿಂಹಸ್ವಾಮಿ ದೇವಸ್ಥಾನದಿಂದ ಟಿ. ನರಸೀಪುರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶ್ರೀ ರುದ್ರಹೋಮ, ಪೂರ್ಣಾಹುತಿ, ರಾತ್ರಿ 7 ಗಂಟೆಗೆ ನಡೆಯುವ ಗಂಗಾ ಪೂಜೆಯ ವೇಳೆ ವಾರಾಣಸಿಯ ಗಂಗಾರತಿ ಮಾದರಿಯಲ್ಲಿ ದೀಪಾರತಿ ನಡೆಯಲಿದೆ.ಕುಂಭಮೇಳದ ಕೊನೆ ದಿನ ಫೆ.12ರ ಮಾಘ ಪೂರ್ಣಿಮೆಯಂದು ಬೆಳಗ್ಗೆ ಚಂಡಿಹೋಮ, ಪೂರ್ಣಾಹುತಿ, ಕುಂಭೋಧ್ವಾಸನ ಹಾಗೂ ಸಪ್ತ ಪವಿತ್ರ ನದಿಗಳಿಂದ ತಂದ ತೀರ್ಥ ತ್ರಿವೇಣಿ ಸಂಗಮದಲ್ಲಿ ಸಂಯೋಜನೆ, ಪುಣ್ಯಸ್ನಾನ, ಧರ್ಮಸಭೆ ಮೊದಲಾದ ಕಾರ್ಯಕ್ರಮ ನಡೆಯಲಿವೆ. ಮಹೋದಯಕಾಲದ ಮಹಾಮಾಘ ಪುಣ್ಯಸ್ನಾನಕ್ಕೆ ಅಂದು ಬೆಳಗ್ಗೆ 9 ರಿಂದ 9.30 ರವರೆಗಿನ ಮೀನಲಗ್ನ ಮತ್ತು ಮಧ್ಯಾಹ್ನ 12 ರಿಂದ 1 ರವರೆಗಿನ ವೃಷಭ ಲಗ್ನದಲ್ಲಿ ಸಮಯ ನಿಗದಿ ಪಡಿಸಲಾಗಿದೆ.
ಇಂದು ಕಾಶಿ ರೀತಿ ಗಂಗಾ ಆರತಿ
ಟಿ.ನರಸೀಪುರದಲ್ಲಿ ಮಂಗಳವಾರ ರಾತ್ರಿ ವಾರಾಣಸಿ ಮಾದರಿಯಲ್ಲಿ ಗಂಗಾಪೂಜೆ ಹಾಗೂ ದೀಪಾರತಿ ಕಾರ್ಯಕ್ರಮ ನಡೆಯಲಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಲಿದ್ದಾರೆ.
---ಮಹೇಂದ್ರ ದೇವನೂರು