ಜಾಜೂರು ಸಮೀಪ ನಿರ್ಮಾಣವಾಗುತ್ತಿರುವ ಶ್ರೀ ದಕ್ಷಿಣ ನಾಕೋಡಾ ಪಾರ್ಶ್ವ ಭೈರವ ಧಾಮ ಪ್ರದೇಶವು ಇದೀಗ ಪ್ರೇಕ್ಷಣೀಯ ತಾಣವಾಗಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ವಿಶ್ವಪ್ರಸಿದ್ಧ ಧಾಮವಾಗಿ ರೂಪುಗೊಳ್ಳುತ್ತಿರುವ ಈ ಕ್ಷೇತ್ರದ ಲೋಕಾರ್ಪಣೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ. ಸುಮಾರು ನೂರು ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಮಕ್ಕಳ ಆಟಿಕೆಗಳ ಪಾರ್ಕ್ ನಿರ್ಮಾಣಗೊಂಡಿದ್ದು, ಕ್ಷೇತ್ರದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ನಗರ ಹೊರವಲಯದಲ್ಲಿ ಇರುವುದರಿಂದ ಇಲ್ಲಿ ಶಾಂತಿಯುತ ವಾತಾವರಣವಿದೆ.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಜಾಜೂರು ಸಮೀಪ ನಿರ್ಮಾಣವಾಗುತ್ತಿರುವ ಶ್ರೀ ದಕ್ಷಿಣ ನಾಕೋಡಾ ಪಾರ್ಶ್ವ ಭೈರವ ಧಾಮ ಪ್ರದೇಶವು ಇದೀಗ ಪ್ರೇಕ್ಷಣೀಯ ತಾಣವಾಗಿ ವೇಗವಾಗಿ ಅಭಿವೃದ್ಧಿಗೊಳ್ಳುತ್ತಿದೆ. ವಿಶ್ವಪ್ರಸಿದ್ಧ ಧಾಮವಾಗಿ ರೂಪುಗೊಳ್ಳುತ್ತಿರುವ ಈ ಕ್ಷೇತ್ರದ ಲೋಕಾರ್ಪಣೆ ಫೆಬ್ರವರಿಯಲ್ಲಿ ನಡೆಯುವ ಸಾಧ್ಯತೆ ಇದೆ.ಇಲ್ಲಿನ ಸಮಿತಿ ಗೋಶಾಲೆಯನ್ನು ಪ್ರಾರಂಭಿಸಿದ್ದು, ಸುಮಾರು ನೂರು ಗೋವುಗಳನ್ನು ಸಂರಕ್ಷಣೆ ಮಾಡಲಾಗುತ್ತಿದೆ. ಮಕ್ಕಳ ಆಟಿಕೆಗಳ ಪಾರ್ಕ್ ನಿರ್ಮಾಣಗೊಂಡಿದ್ದು, ಕ್ಷೇತ್ರದ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಲಾಗಿದೆ. ನಗರ ಹೊರವಲಯದಲ್ಲಿ ಇರುವುದರಿಂದ ಇಲ್ಲಿ ಶಾಂತಿಯುತ ವಾತಾವರಣವಿದೆ.ಪರಿಸರ ಅಧ್ಯಯನಕ್ಕೆ ಇದು ಶಾಲಾ ಮಕ್ಕಳಿಗೆ ಉತ್ತಮ ಪಿಕ್ನಿಕ್ ಸ್ಥಳವಾಗಿಯೂ ಪರಿಣಮಿಸಿದೆ. ಇತ್ತೀಚೆಗೆ ನಗರದ ಪಾರ್ವತಮ್ಮ ಕಾನ್ವೆಂಟ್ ಮಕ್ಕಳು ಭೈರವ ಧಾಮಕ್ಕೆ ಭೇಟಿ ನೀಡಿದ್ದರು. ಮಕ್ಕಳಿಗೆ ನೈಸರ್ಗಿಕ ವಾತಾವರಣದ ಪರಿಚಯ ನೀಡಿ ಜ್ಞಾನ ವಿಸ್ತರಣೆ ಮಾಡಲು ಇಂತಹ ಭೇಟಿಗಳು ಸಹಕಾರಿಯಾಗುತ್ತವೆ ಎಂದು ಶಾಲಾ ಮುಖ್ಯಸ್ಥರು ತಿಳಿಸಿದರು.“ಮಕ್ಕಳು ಪಠ್ಯಕ್ಕೆ ಮಾತ್ರ ಸೀಮಿತವಾಗದೇ ಸಾಮಾನ್ಯ ಜ್ಞಾನವನ್ನೂ ಅರಿತುಕೊಳ್ಳಬೇಕು. ಪ್ರಕೃತಿ, ಪ್ರಾಣಿಗಳು, ಪರಿಸರ ಕುರಿತು ಮಕ್ಕಳು ಸ್ವತಃ ಪ್ರಶ್ನಿಸಿ ತಿಳಿದುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ. ಇಂತಹ ಸ್ಥಳಗಳಿಗೆ ತಂದಾಗ ಅವರಿಗೆ ಹೊಸ ಅನುಭವ ಸಿಗುತ್ತದೆ” ಎಂದು ಅವರು ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡರು.ಭೇಟಿ ನೀಡುವವರಿಗೆ ಸಮಿತಿಯು ಉಪಹಾರ ವ್ಯವಸ್ಥೆಯನ್ನು ಮಾಡಿತ್ತು. ಕ್ಷೇತ್ರಕ್ಕೆ ಮುಂಚಿತ ಮಾಹಿತಿ ನೀಡಿದರೆ ಊಟದ ವ್ಯವಸ್ಥೆಯನ್ನೂ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.ಸಣ್ಣ ಮಕ್ಕಳಿಗೆ ಇದೊಂದು ಸುರಕ್ಷಿತ ಹಾಗೂ ಮನರಂಜನೀಯ ಸ್ಥಳವಾಗಿದ್ದು, ಮಕ್ಕಳು ಗೋಶಾಲೆಯಲ್ಲಿ ಪುಟ್ಟ ಕರುಗಳನ್ನು ನೋಡಿ ಆನಂದಿಸಿದರು. ಪಾರ್ಕ್‌ನಲ್ಲಿನ ಆಟಿಕೆಗಳಲ್ಲಿ ತೊಡಗಿ ಹರ್ಷಿಸಿದರು. ಅವರಲ್ಲಿ ಶಿಸ್ತು, ವರ್ತನೆ ಎಲ್ಲ ಹಂತಗಳಲ್ಲೂ ಗೋಚರಿಸಿತು. ಉಪಹಾರದ ನಂತರ ಮಕ್ಕಳನು ಭೈರವ ಧಾಮದ ಆವರಣದಲ್ಲಿ ವಿರಮಿಸಿ ಮನರಂಜನೆಯಲ್ಲಿ ತೊಡಗಿದರು.