ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಶ್ರೀರಂಗಪಟ್ಟಣದಲ್ಲಿ ಶೇ.82.37 ರಷ್ಟು ಮತದಾನ

| Published : Jun 04 2024, 12:31 AM IST

ದಕ್ಷಿಣ ಶಿಕ್ಷಕರ ಕ್ಷೇತ್ರ ಚುನಾವಣೆ: ಶ್ರೀರಂಗಪಟ್ಟಣದಲ್ಲಿ ಶೇ.82.37 ರಷ್ಟು ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀರಂಗಪಟ್ಟಣ ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತೆರೆದಿದ್ದ ಮತಗಟ್ಟೆ ಬಳಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಇತರೆ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ಮೈತ್ರಿಕೂಟದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ತಾಲೂಕಿನಲ್ಲಿ ಶೇ.82.37 ರಷ್ಟು ಮತದಾನವಾಗಿದೆ.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತೆರೆದಿದ್ದ ಮತಗಟ್ಟೆಯಲ್ಲಿ ಒಟ್ಟುತಾ ಲೂಕಿನ 431 ಮತದಾರರಲ್ಲಿ 355 ಮಂದಿ ಶಿಕ್ಷಕರು ಮತದಾನ ಮಾಡಿದರು. ಶಿಕ್ಷಕರು ಸಾಲಿನಲ್ಲಿ ನಿಂತು ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದರು. ಚುನಾವಣಾಧಿಕಾರಿ ತಹಸೀಲ್ದಾರ್ ಪರುಶುರಾಮ್ ಅಧಿಕಾರಿಗಳ ತಂಡ ಚುನಾವಣಾ ಕಾರ್ಯದಲ್ಲಿ ತೊಡಗಿದ್ದರು.

ಬಿಜೆಪಿ-ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿ ಕೆ.ವಿವೇಕಾನಂದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತ ನೀಡುವಂತೆ ಕಾರ್ಯಕರ್ತರು ಪ್ರತ್ಯೇಕ ಕಡೆಗಳಲ್ಲಿ ಶಿಕ್ಷಕರನ್ನು ಮನವೊಲಿಸಿದರು.

ಪಟ್ಟಣದ ತಾಲೂಕು ಕಚೇರಿ ಆವರಣದಲ್ಲಿ ತೆರೆದಿದ್ದ ಮತಗಟ್ಟೆ ಬಳಿ ಶಾಸಕ ರಮೇಶ ಬಂಡಿಸಿದ್ದೇಗೌಡ ಹಾಗೂ ಇತರೆ ಕಾಂಗ್ರೆಸ್ ನಾಯಕರು, ಮತ್ತೊಂದೆಡೆ ಮೈತ್ರಿಕೂಟದ ನಾಯಕರು ತಮ್ಮ ತಮ್ಮ ಅಭ್ಯರ್ಥಿಗಳ ಪರ ಪ್ರಚಾರ ಕಾರ್ಯದಲ್ಲಿ ತೊಡಗಿ ಶಿಕ್ಷಕರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದು ಸಾಮಾನ್ಯವಾಗಿತ್ತು.

ಪ್ರೌಢಶಾಲೆಗಳ ಶಿಕ್ಷಕರು, ಪಿಯು ಹಾಗೂ ಪದವಿ ಕಾಲೇಜುಗಳ ಉಪನ್ಯಾಸಕರು, ಪ್ರಾಧ್ಯಾಪಕರು, ವಿಶ್ವವಿದ್ಯಾಲಯಗಳ ಬೋಧಕರು ತಮ್ಮ ಪ್ರಾಶಸ್ತ್ಯದ ಮತವನ್ನು ಚಲಾಯಿಸುತ್ತಿರುವುದು ಕಂಡುಬಂದಿತು.

ಮತದಾನ ಆರಂಭದಲ್ಲಿ ಮತದಾರರ ಸಂಖ್ಯೆ ವಿರಳವಾಗಿತ್ತು. ಸಮಯ ಕಳೆದಂತೆ ಮತಗಟ್ಟೆಯತ್ತ ಮತದಾರರು ಆಗಮಿಸುತ್ತಿದ್ದು ಮಧ್ಯಾಹ್ನ 12ರ ವೇಳೆಗೆ ಹೆಚ್ಚಿನ ಮತದಾರರು ಆಗಮಿಸಿ ಸಾಲಿನಲ್ಲಿ ನಿಂತು ಮನ ಚಲಾಯಿಸಿದರು.

ಶಿಕ್ಷಕರ ಕ್ಷೇತ್ರದ ಚುನಾವಣೆ ಬಿರುಸಿನ ಶಾಂತಿಯುತ ಮತದಾನ

ಮಳವಳ್ಳಿ:ಪಟ್ಟಣದ ತಾಲೂಕು ಕಚೇರಿಯಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆ ಯಾವುದೇ ಗೊಂದಲವಿಲ್ಲದೇ ಬಿರುಸಿನಿಂದ ಶಾಂತಿಯುತವಾಗಿ ನಡೆಯಿತು.

ಸೋಮವಾರ ಬೆಳಗ್ಗೆ 8 ಗಂಟೆಯಿಂದ ಆರಂಭಗೊಂಡ ಮತದಾನ ಪ್ರಕ್ರಿಯೆಯಲ್ಲಿ ಶಿಕ್ಷಕರು ಉತ್ಸಾಹದಿಂದ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು. ಸಂಜೆ 4 ಗಂಟೆಗೆ ಮತದಾನ ಮುಕ್ತಾಯವಾಯಿತು.ತಾಲೂಕಿನಲ್ಲಿ ಒಟ್ಟು ಶಿಕ್ಷಕರ ಕ್ಷೇತ್ರದ 667 ಮತದಾರರಿದ್ದು, ಕಂದಾಯ ಇಲಾಖೆಯಲ್ಲಿ ಒಂದು ಮತಗಟ್ಟೆ ಸ್ಥಾಪಿಸಲಾಗಿತ್ತು. ಚುನಾವಣೆಯಲ್ಲಿ 10 ಸಿಬ್ಬಂದಿ ಕಾರ್ಯನಿರ್ವಹಿಸಿದರು. ಶಿಕ್ಷಕರು ಸರದಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಕಾಂಗ್ರೆಸ್, ಎನ್‌ಡಿಎ ಹಾಗೂ ಬಿಎಸ್‌ಪಿ ಮುಖಂಡರು ಹಾಗೂ ಕಾರ್ಯಕರ್ತರು ನಿಗದಿತ ಸ್ಥಳದಲ್ಲಿ ಸೇರಿದ್ದರು. ಮತದಾರರ ಮತದಾನಕ್ಕೆ ಆಗಮಿಸುವ ವೇಳೆ ತಮ್ಮ ಪಕ್ಷಕ್ಕೆ ಮತಹಾಕುವಂತೆ ಮನವಿ ಮಾಡಿಕೊಂಡರು.ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿರುವ ಮರಿತಿಬ್ಬೇಗೌಡರು ತಾಲೂಕಿನವರೇ ಆಗಿರುವ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡರಿಗೆ ಮತಹಾಕುವಂತೆ ಕೋರಿದರು. ಬಿಎಸ್‌ಪಿ ಮುಖಂಡರು ಹ.ರಾ.ಮಹೇಶ್ ಪರ ಮತಯಾಚಿಸಿದರೇ ಎನ್‌ಡಿಎ ಅಭ್ಯರ್ಥಿ ಪರವಾಗಿ ಜೆಡಿಎಸ್ ಮತ್ತು ಬಿಜೆಪಿ ಮುಖಂಡರು ಮತಯಾಚನೆ ಮಾಡಿದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.